ಮಡಿಕೇರಿ: ಕೊಡಗು ಜಿಲ್ಲೆಯ ವಿರಾಜಪೇಟೆ ತಾಲೂಕಿನ ವಾಲ್ನೂರು ತ್ಯಾಗತ್ತೂರು ಗ್ರಾಮದಲ್ಲಿ ಪ್ರವಾಹದಿಂದ ಮನೆ ಕಳೆದುಕೊಂಡು ಗ್ರಾಮಸ್ಥರು ರೋಧಿಸುತ್ತಿದ್ದಾರೆ.
ಇಷ್ಟು ಪ್ರಮಾಣದಲ್ಲಿ ಮನೆಗಳನ್ನು ಕಳೆದುಕೊಂಡರು ಅಧಿಕಾರಿಗಳು ತಿರುಗಿ ನೋಡದೇ ನಿರ್ಲಕ್ಷ್ಯ ಮಾಡುತ್ತಿದ್ದಾರೆ ಎಂದು ನಿವಾಸಿಯೊಬ್ಬರು ಮನೆಯನ್ನು ನೋಡಿ ಗೋಳಾಡುತ್ತಾ ಕಣ್ಣೀರಿಡುತ್ತಿರುವ ದೃಶ್ಯ ಮನಕಲುಕುವಂತಿದೆ. ಪರಿಹಾರ ಕೇಂದ್ರಕ್ಕೆ ಬಂದು ಭರವಸೆ ಕೊಡುವ ಬದಲು ಮನೆಗಳು ಯಾವ ಪ್ರಮಾಣದಲ್ಲಿ ಬಿದ್ದು ಹೋಗಿದೆ ಯಾವ ರೀತಿಯಲ್ಲಿ ಅಧಿಕಾರಿಗಳು ಸ್ಪಂದಿಸಬೇಕು ಎಂದು ಸ್ಥಳಕ್ಕೆ ಬಂದು ನೋಡಬೇಕು ಎಂದು ಅಳಲನ್ನು ವ್ಯಕ್ತಪಡಿಸುತ್ತಾರೆ.
ಇದು ನನ್ನ ಮನೆ. ಇದುವರೆಗೂ ಅಧಿಕಾರಿಗಳು ಇಲ್ಲಿ ಬಂದು ನೋಡಿಲ್ಲ. ಮನೆ ಸಂಪೂರ್ಣ ನೆಲಸಮವಾಗಿದೆ. ಸಹಾಯ ಮಾಡುವುದಕ್ಕೆ ಯಾರು ಬರುತ್ತಿಲ್ಲ. ಯಾವ ಅಧಿಕಾರಿಗಳು ಇದೂವರೆಗೂ ಬಂದು ನೋಡಿಲ್ಲ. ದಯವಿಟ್ಟು ನನಗೆ ಸಹಾಯ ಮಾಡಿ. ನಾನು ಈಗ ಪರಿಹಾರ ಕೇಂದ್ರದಲ್ಲಿ ಇದ್ದೇನೆ. ಪರಿಹಾರ ಕೇಂದ್ರದಲ್ಲಿ ಎಲ್ಲ ಸೌಕರ್ಯವನ್ನು ಕೊಡುತ್ತಿದ್ದಾರೆ. ಆದರೆ ಇಲ್ಲಿ ಮನೆ ನೆಲಸಮವಾಗಿದೆ. ಸಾಲ ಮಾಡಿ ನಾನು ಮನೆ ಕಟ್ಟಿದ್ದೇನೆ. ಮಕ್ಕಳು ಎಲ್ಲರೂ ಇಲ್ಲಿ ಇದ್ದೇವೆ ಎಂದರು.
ಪರಿಹಾರ ಕೇಂದ್ರಕ್ಕೆ ಬಂದು ನಮ್ಮನ್ನು ನೋಡುತ್ತಾರೆ. ಮತ್ತೆ ಅಲ್ಲಿಂದ ಹೋಗುತ್ತಾರೆ. ಆದರೆ ನಮ್ಮನ್ನು ಕೇಳಲು ಇಲ್ಲಿ ಯಾರೂ ಇಲ್ಲ. ನಾನು ಎಲ್ಲರಿಗೂ ಮಾಹಿತಿ ನೀಡಿದ್ದೇನೆ. ಆದರೆ ಅವರು ಬಂದು ಎಷ್ಟು ಜನ ಇದ್ದೀರ. ಎಷ್ಟು ಮಕ್ಕಳಿದ್ದಾರೆ ಎಂಬುದನ್ನು ಕೇಳಿ ಬರೆದುಕೊಂಡು ಹೋಗುತ್ತಾರೆ ಅಷ್ಟೇ. ಯಾರೇ ಆದರೂ ಸರಿ ನಮಗೆ ಸಹಾಯ ಮಾಡಿ ಎಂದು ವ್ಯಕ್ತಿಯೊಬ್ಬರು ತಮ್ಮ ನಿವಾಸದ ಮುಂದೆ ನಿಂತು ಕಣ್ಣೀರು ಹಾಕಿದ್ದಾರೆ.