ಮಂಡ್ಯ: ತನ್ನ ಇಬ್ಬರು ಹೆಣ್ಣು ಮಕ್ಕಳಿಗೆ ನೇಣು ಬಿಗಿದು ನಂತರ ತಂದೆಯೂ ಆತ್ಮಹತ್ಯೆಗೆ ಶರಣಾಗಿರುವ ಮನಕಲಕುವ ಘಟನೆ ಮಂಡ್ಯ ಜಿಲ್ಲೆ ನಾಗಮಂಗಲ ತಾಲೂಕಿನ ಹಂಚಿಕೊಪ್ಪಲು ಗ್ರಾಮದಲ್ಲಿ ನಡೆದಿದೆ.
45 ವರ್ಷದ ಜಯರಾಮ್ ಎಂಬವರೇ ತನ್ನ ಇಬ್ಬರು ಮಕ್ಕಳಾದ 4 ವರ್ಷದ ಸೌಭಾಗ್ಯ ಮತ್ತು 2 ವರ್ಷದ ಹರ್ಷಿಕಾಗೆ ನೇಣು ಬಿಗಿದು, ಆ ಬಳಿಕ ತಾನೂ ಆತ್ಮಹತ್ಯೆಗೆ ಶರಣಾಗಿರುವ ದುರ್ದೈವಿ.
ಜಯರಾಮ್‍ಗೆ ಇಬ್ಬರು ಹೆಂಡತಿಯರಿದ್ದು, ಕೌಟುಂಬಿಕ ಕಲಹವೇ ಘಟನೆಗೆ ಕಾರಣ ಎಂಬ ಶಂಕೆ ವ್ಯಕ್ತವಾಗಿದೆ. ಮೊದಲ ಪತ್ನಿ ಬೆಂಗಳೂರಿನಲ್ಲಿ ವಾಸವಿದ್ದು, ಜಯರಾಮ್ ಎರಡನೇ ಪತ್ನಿಯೊಂದಿಗೆ ವಾಸವಿದ್ದರು. ಆದ್ರೆ ಇತ್ತೀಚಿಗೆ ಇಬ್ಬರ ನಡುವೆ ಜಗಳವಾಗಿದ್ದು, ಪತ್ನಿ ತನ್ನ ತವರು ಸೇರಿಕೊಂಡಿದ್ದರು ಎನ್ನಲಾಗಿದೆ.
ಮಂಗಳವಾರ ತನ್ನ ಎರಡನೇ ಪತ್ನಿ ಮಕ್ಕಳನ್ನು ಕರೆದುಕೊಂಡು ಬಂದಿದ್ದ ಜಯರಾಮ್, ರಾತ್ರಿ ಈ ಕೃತ್ಯ ಎಸಗಿದ್ದಾರೆ. ಇಂದು ಬೆಳಗ್ಗೆ ಮೊದಲ ಪತ್ನಿಯ ಮಗ ಮನೆಗೆ ಬಂದು ನೋಡಿದಾಗ ಘಟನೆ ಬೆಳಕಿಗೆ ಬಂದಿದೆ.
ಸ್ಥಳಕ್ಕೆ ಭೇಟಿ ನೀಡಿರುವ ನಾಗಮಂಗಲ ಗ್ರಾಮಾಂತರ ಠಾಣೆ ಪೊಲೀಸರು, ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.