ಮುಂಬೈ: ಪತ್ನಿ ಗಲಾಟೆ ಮಾಡಿದ್ದಕ್ಕೆ ಮನನೊಂದ ಪತಿರಾಯನೊಬ್ಬ ಆಕೆಗೆ ಫೋನ್ ಮಾಡಿ 2 ನಿಮಿಷ ಆಕೆಯ ಧ್ವನಿ ಕೇಳಿದ ಬಳಿಕ ಆತ್ಮಹತ್ಯೆ ಮಾಡಿಕೊಂಡ ಘಟನೆ ಮಹಾರಾಷ್ಟ್ರದ ಥಾಣೆಯಲ್ಲಿ (Thane) ನಡೆದಿದೆ.
ಘಟನೆ ಏನಾಗಿತ್ತು..?
ಮಹಾರಾಷ್ಟ್ರದ ಡೊಂಬಿವಿಲಿ (Dombivali) ನಿವಾಸಿ ಸುಧಾಕರ್ ಯಾದವ್ ಹಾಗೂ ಪತ್ನಿ ಸಂಜನಾ ಯಾದವ್ ನಡುವೆ ಕ್ಷುಲ್ಲಕ ಕಾರಣಕ್ಕೆ ಜಗಳವಾಗಿತ್ತು. ಇದರಿಂದ ಮನನೊಂದ ಸಂಜನಾ ಡಿಸೆಂಬರ್ 19ರಂದು ಪತಿ ಮನೆಯನ್ನು ಬಿಟ್ಟು ತನ್ನ ಸೋದರಿಯ ಮನೆಗೆ ಹೋಗಿದ್ದಾಳೆ.
ಘಟನೆ ನಡೆದ ಮರುದಿನ, ಡಿಸೆಂಬರ್ 20ರಂದು ಬೆಳಗ್ಗೆ 10 ಗಂಟೆಗೆ ಸಂಜನಾಗೆ ಫೋನ್ ಮಾಡಿದ ಸುಧಾಕರ್ ನನಗೆ ಎರಡು ನಿಮಿಷ ನಿನ್ನ ವಾಯ್ಸ್ ಕೇಳಬೇಕು ಅನಿಸ್ತಿದೆ ಎಂದು ಹೇಳಿದ್ದಾನೆ. ಈ ವೇಳೆ ಸಂಜನಾ ಕುರ್ಲಾಗೆ ಕೆಲಸಕ್ಕಾಗಿ ತೆರಳುತ್ತಿದ್ದಳು. 2 ನಿಮಿಷ ಮಾತನಾಡಿದ ಬಳಿಕ ಸುಧಾಕರ್ ಫೋನ್ ಕಾಲ್ (Phone Call) ಕಟ್ ಮಾಡಿದ್ದ. ನಂತರ ವಾಟ್ಸಪ್‌ನಲ್ಲಿ ಪತಿ ಆತ್ಮಹತ್ಯೆಗೆ ಸಿದ್ಧನಾಗಿ ನಿಂತಿರೋ ಫೋಟೋ ಕಳಿಸಿದ್ದ ಎಂದು ಸಂಜನಾ ಪೊಲೀಸರಿಗೆ ಮಾಹಿತಿ ನೀಡಿದ್ದಾಳೆ. ಇದನ್ನೂ ಓದಿ: RSS ಮುಖ್ಯಸ್ಥ ಮೋಹನ್ ಭಾಗವತ್ ಮೇಲೆ ದಾಳಿ ಎಚ್ಚರಿಕೆ
ಜೊತೆಗೆ ಗಂಡನ ಮನೆಯ ಪಕ್ಕದ ಮನೆಯಲ್ಲಿದ್ದವರಿಗೆ ಕಾಲ್ ಮಾಡಿ ಮನೆಯಲ್ಲಿ ಚೆಕ್ ಮಾಡುವಂತೆ ಹೇಳಿದ್ದಾಳೆ. ನೆರೆಮನೆಯವರು ಬಂದು ಮನೆ ಬಾಗಿಲು ಬಡಿದರೂ ತೆರೆಯಲಿಲ್ಲ. ಬಳಿಕ ಅವರು ಬಾಗಿಲು ಒಡೆದು ನೋಡಿದಾಗ ಸುಧಾಕರ್ ಮೃತದೇಹ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ.
ಡೊಂಬಿವಿಲಿಯ ವಿಷ್ಣುನಗರ ಪೊಲೀಸ್ ಠಾಣೆಯಲ್ಲಿ (Dombivali VishnuNagar Police Station) ಪ್ರಕರಣ ದಾಖಲಾಗಿದ್ದು, ಆತ್ಮಹತ್ಯೆಗೆ ನಿಖರ ಕಾರಣ ಪತ್ತೆಗಾಗಿ ಪೊಲೀಸರು ತನಿಖೆ ಮುಂದುವರಿಸಿದ್ದಾರೆ. ಇದನ್ನೂ ಓದಿ: ಈಗಲೂ ನ್ಯಾಯ ಸಿಗುವ ನಿರೀಕ್ಷೆಯಲ್ಲಿದ್ದೇವೆ, ನಮ್ಮ ದುಃಖ ಯಾರಿಗೆ ಹೇಳೋಣ? – ನಿಲ್ಲದ ಕುಸ್ತಿಪಟುಗಳ ವೇದನೆ