ಕೊಪ್ಪಳ: ವಿಚ್ಛೇದನ ನೀಡಿ ಹೋದ ತಮ್ಮನ ಹೆಂಡತಿಯ ಕಿರುಕುಳ ತಾಳಲಾರದೆ ಅಣ್ಣ ಆತ್ಮಹತ್ಯೆಗೆ ಶರಣಾಗಿದ್ದಾನೆ. ಕೊಪ್ಪಳ ತಾಲೂಕಿನ ಚಿಲಕಮುಖಿ ಗ್ರಾಮದಲ್ಲಿ ವಿಚಿತ್ರ ಪ್ರಕರಣವೊಂದು ನಡೆದಿದೆ.
ಚಿಲಕಮುಖಿ ಗ್ರಾಮದಲ್ಲಿ ಹನಮಂತ ಉಳ್ಳಿ(30) ಆತ್ಮಹತ್ಯೆಗೆ ಶರಣಾಗಿದ್ದಾನೆ. ವಿಚ್ಛೇದನ ನೀಡಿ ಕಿರುಕುಳ ನೀಡುತ್ತಿದ್ದ ತಮ್ಮನ ಹೆಂಡತಿ ಹಾಗೂ ಆವರ ಮನೆಯವರ ಕಿರುಕುಳ ತಾಳಲಾರದೆ ಹನಮಂತ ಉಳ್ಳಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ವಿಚ್ಚೇಧನ ನೀಡಿ ಮನೆಯಿಂದ ಹೋಗಿದ್ದ ಅಂಕಿತಾ(ಹೆಸರು ಬದಲಾಯಿಸಲಾಗಿದೆ) ಕಳೆದ ಒಂದು ವಾರದಿಂದ ಹನಮಂತ ಉಳ್ಳಿ ಮನೆಗೆ ಬಂದು ಕಿರುಕುಳ ನೀಡುತ್ತಿದ್ದಳು. ಹನಮಂತ ಉಳ್ಳಿ ಸಹೋದರ ದುರ್ಗಪ್ಪನೊಂದಿಗೆ ಅಂಕಿತಾ ಮದುವೆಯಾಗಿದ್ದಳು. ವಿವಾಹವಾದರೂ ಚಿಲಕಮುಖಿ ಗ್ರಾಮದ ಹನಮಂತಪ್ಪ ಎಂಬವರ ಜೊತೆ ಓಡಿಹೋಗಿ ಮತ್ತೊಂದು ಮದುವೆಯಾಗಿದ್ದಳು. ಮದುವೆಯಾದ ನಂತರ ಸಮಾಜದಿಂದ ಅಂಕಿತಾ ಹಾಗೂ ಅವರ ಪತಿ ಹನಮಂತಪ್ಪನನ್ನ ದೂರ ಇಡಲಾಗಿತ್ತು. ಮೂರು ವರ್ಷಗಳ ಕಾಲ ದೂರ ಇದ್ದ ಜೋಡಿ ಒಂದು ವಾರದ ಹಿಂದೆ ಗ್ರಾಮಕ್ಕೆ ಆಗಮಿಸಿದ್ದರು. ನಮ್ಮನ್ನ ಸಮಾಜದಿಂದ ದೂರ ಇಡಲು ಹನಮಂತ ಉಳ್ಳಿ ಕಾರಣ ಎಂದು ಕಿರುಕುಳ ನೀಡುತ್ತಿದ್ದಳು. ಮನೆಗೆ ಬಂದು ಹಲ್ಲೆ ಕೂಡ ಮಾಡಿದ್ದಳು. ಇದರಿಂದ ಮನನೊಂದು ಹನಮಂತ ಉಳ್ಳಿ ಸಾವಿಗೆ ಶರಣಾಗಿದ್ದಾನೆ ಎಂದು ಮೃತ ಸಂಬಂಧಿ ಶರಣಪ್ಪ ಹೇಳಿದ್ದಾರೆ.
ಅಂಕಿತಾ ತನ್ನ ಪತಿಯೊಂದಿಗೆ ಜೀವನ ಮಾಡಲು ಬಿಡಲಿಲ್ಲ ಎಂದು ದ್ವೇಷ ಸಾಧಿಸುತ್ತಿದ್ದಳು. ಸಂಬಂಧಿಕ ಶಿವಾಜಿ ಎಂಬವರ ಜೊತೆ ಸೇರಿ ನಿತ್ಯ ಕಿರುಕುಳ ನೀಡಲು ಆರಂಭಿಸಿದ್ದಳು. ಒಂದು ವಾರದಿಂದ ಕಿರುಕುಳ ನೀಡುತ್ತಿರುವ ವಿಷಯವನ್ನ ಪೊಲೀಸರಿಗೆ ತಿಳಿಸಿದ್ದೇವೆ. ಆದರೆ ಪೊಲೀಸರು ಕ್ಯಾರೇ ಅಂದಿಲ್ಲ. ಮೊನ್ನೆ ಅಂಕಿತಾ ಹನಮಂತ ಉಳ್ಳಿ ಮನೆಗೆ ನುಗ್ಗಿ ಚಪ್ಪಲಿಯಿಂದ ಥಳಿಸಿದ್ದಾಳೆ. ಹೀಗಾಗಿ ಹನಮಂತ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂಬುದು ಮೃತರ ಸಂಬಂಧಿಕರ ವಾದವಾಗಿದೆ.
ಹನಮಂತ ಉಳ್ಳಿ ಸಾವಿನ ವಿಷಯ ತಿಳಿದು ಅಂಕಿತಾ, ಪತಿ ಹನಮಂತಪ್ಪ ಮತ್ತು ಸಂಬಂಧಿ ಶಿವಾಜಿ ಮನೆಯಿಂದ ನಾಪತ್ತೆಯಾಗಿದ್ದಾರೆ. ಒಂದು ವೇಳೆ ಪೊಲೀಸರು ಅವರನ್ನ ಅರೆಸ್ಟ್ ಮಾಡದಿದ್ದರೆ, ನಾವು ಪೊಲೀಸ್ ಠಾಣೆ ಮುಂದೆ ಧರಣಿ ಮಾಡುತ್ತೀವಿ ಎಂದು ಸಂಬಂಧಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv