ದಾವಣಗೆರೆ | ಕಡಿಮೆ ಬೆಲೆಗೆ 250 ಗ್ರಾಂ ಚಿನ್ನದ ನಾಣ್ಯ ನೀಡುವುದಾಗಿ 5 ಲಕ್ಷ ವಂಚಿಸಿ ಪರಾರಿ

Public TV
1 Min Read
Davanagere Gold Coins Fraud

ದಾವಣಗೆರೆ: ಕಡಿಮೆ ಬೆಲೆಗೆ ಕಾಲು ಕೆಜಿ ಚಿನ್ನದ ನಾಣ್ಯಗಳನ್ನು ನೀಡುವುದಾಗಿ ತಿಳಿಸಿ 5 ಲಕ್ಷ ರೂ. ವಂಚಿಸಿ ಪರಾರಿಯಾಗಿರುವ ಘಟನೆ ದಾವಣಗೆರೆ (Davanagere) ತಾಲೂಕಿನ ಕುರ್ಕಿ ಗ್ರಾಮದ ಬಳಿ ನಡೆದಿದೆ.

ಹುಬ್ಬಳ್ಳಿ ಮೂಲದ ಸುರೇಶ್ ಎಂಬಾತನಿಂದ ತುಮಕೂರು ಜಿಲ್ಲೆಯ ಕೊರಟಿಗೆರೆ ತಾಲೂಕಿನ ಚಿಂಪುಗಾನಹಳ್ಳಿಯ ನಿವಾಸಿ ರಂಗನಾಥ್ 5 ಲಕ್ಷ ರೂ. ಕಳೆದುಕೊಂಡಿದ್ದಾರೆ.ಇದನ್ನೂ ಓದಿ: ಬೆಂಗಳೂರು | ಅಲ್-ಖೈದಾ ಜೊತೆ ನಂಟು – ಜಾರ್ಖಂಡ್ ಮೂಲದ ಮಹಿಳೆ ಬಂಧನ

ಒಂದು ವರ್ಷದ ಹಿಂದೆ ಕೊರಟಗೆರೆ ತಾಲೂಕಿನ ಗೊರವನಹಳ್ಳಿಯ ಮಹಾಲಕ್ಷ್ಮಿ ದೇಗುಲದಲ್ಲಿ ರಂಗನಾಥ್ ಅವರಿಗೆ ಸುರೇಶ್ ಪರಿಚಯವಾಗಿತ್ತು. ಆಗ ತಮ್ಮ ದೂರವಾಣಿ ಸಂಖ್ಯೆಯನ್ನು ಪರಸ್ಪರ ವಿನಿಮಯ ಮಾಡಿಕೊಂಡಿದ್ದರು. ಅದಾದ ಕೆಲವು ದಿನಗಳ ಬಳಿಕ ರಂಗನಾಥ್ ಅವರಿಗೆ ಸುರೇಶ್ ಕರೆ ಮಾಡಿ, ನಮ್ಮ ಹಳೆ ಮನೆಯನ್ನು ತೆರವು ಗೊಳಿಸಿದಾಗ ಚಿನ್ನದ ನಾಣ್ಯಗಳು ಪತ್ತೆಯಾಗಿವೆ. ಅದನ್ನು ಕಡಿಮೆ ಬೆಲೆಗೆ ಕೊಡುವೆ, ನಿಮಗೆ ಬೇಕಿದ್ದರೆ ಸಂಪರ್ಕಿಸಿ ಎಂದು ಸುಳ್ಳು ಮಾಹಿತಿ ನೀಡಿದ್ದ.

ಸುರೇಶ್ ಆರಂಭದಲ್ಲಿ ರಂಗನಾಥ್ ಅವರಿಗೆ ಒಂದು ಅಸಲಿ ಚಿನ್ನದ ನಾಣ್ಯ ನೀಡಿ ನಂಬಿಕೆ ಗಳಿಸಿಕೊಂಡಿದ್ದ. ನಂತರದಲ್ಲಿ ರಂಗನಾಥ್ ಅವರನ್ನು ದಾವಣಗೆರೆ ತಾಲೂಕಿನ ಕುರ್ಕಿ ಗ್ರಾಮಕ್ಕೆ ಬರುವಂತೆ ತಿಳಿಸಿ, 5 ಲಕ್ಷ ರೂ. ಪಡೆದು ಕಾಲು ಕೆ.ಜಿ ನಕಲಿ ಚಿನ್ನದ ನಾಣ್ಯಗಳನ್ನು ನೀಡಿ ಪರಾರಿಯಾಗಿದ್ದ. ಬಳಿಕ ರಂಗನಾಥ್ ಅವರು ಅದನ್ನು ಪರೀಕ್ಷಿಸಿದಾಗ ಅದು ನಕಲಿ ಚಿನ್ನ ಎಂದು ತಿಳಿದು ಬಂದಿದೆ.

ಮೋಸ ಹೋದ ರಂಗನಾಥ್ ತಕ್ಷಣವೇ ಹತ್ತಿರದ ಹದಡಿ ಠಾಣೆಗೆ ಭೇಟಿ ನೀಡಿ, ದೂರು ನೀಡಿದ್ದಾರೆ. ಸದ್ಯ ದೂರಿನ ಆಧಾರದ ಮೇಲೆ ಪ್ರಕರಣ ದಾಖಲಾಗಿದೆ.ಇದನ್ನೂ ಓದಿ: J&K | ಬೆಳ್ಳಂಬೆಳಗ್ಗೆ ಅವಘಡ – ಸಿಂಧ್ ನದಿಗೆ ಬಿದ್ದ ITBP ಯೋಧರನ್ನು ಕರೆದೊಯ್ಯುತ್ತಿದ್ದ ಬಸ್

Share This Article