ಒಟ್ಟಾವಾ: ಕೆನಡಾದಲ್ಲಿ 21 ವರ್ಷದ ಭಾರತೀಯ ಮೂಲದ ವಿದ್ಯಾರ್ಥಿನಿ ಗುಂಡೇಟಿನಿಂದ ಸಾವನ್ನಪ್ಪಿದ ಪ್ರಕರಣದಲ್ಲಿ ವ್ಯಕ್ತಿಯೊಬ್ಬನನ್ನು ಪೊಲೀಸರು ಬಂಧಿಸಿದ್ದಾರೆ.
ಭಾರತೀಯ ವಿದ್ಯಾರ್ಥಿನಿ ಹರ್ಸಿಮ್ರತ್ ರಾಂಧವಾ ಗುಂಡೇಟಿನಿಂದ ಸಾವನ್ನಪ್ಪಿದ್ದರು. ಪ್ರಕರಣದಲ್ಲಿ ವ್ಯಕ್ತಿಯೊಬ್ಬನನ್ನು ಬಂಧಿಸಲಾಗಿದ್ದು, ಆತನ ವಿರುದ್ಧ ಪ್ರಥಮ ದರ್ಜೆ ಕೊಲೆ ಆರೋಪ ಹೊರಿಸಲಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಒಂಟಾರಿಯೊದ ನಯಾಗರಾ ಜಲಪಾತದಲ್ಲಿ ಜೆರ್ಡೈನ್ ಫೋಸ್ಟರ್ (32) ಎಂಬಾತನನ್ನು ಬಂಧಿಸಿದ ಹ್ಯಾಮಿಲ್ಟನ್ ಪೊಲೀಸರು, ಆತನ ಮೇಲೆ ಮೂರು ಕೊಲೆ ಯತ್ನದ ಆರೋಪ ಹೊರಿಸಿದ್ದಾರೆ ಎಂದು ಆಕ್ಟಿಂಗ್ ಡೆಟೆಕ್ಟಿವ್-ಸಾರ್ಜೆಂಟ್ ಡ್ಯಾರಿಲ್ ರೀಡ್ ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದಾರೆ.
ಮೊಹಾಕ್ ಕಾಲೇಜಿನಲ್ಲಿ ಫಿಸಿಯೋಥೆರಪಿ ಕೋರ್ಸ್ ವ್ಯಾಸಂಗ ಮಾಡುತ್ತಿದ್ದ ವಿದ್ಯಾರ್ಥಿನಿ ರಾಂಧವಾ, ಏಪ್ರಿಲ್ 17 ರಂದು ಅಪ್ಪರ್ ಜೇಮ್ಸ್ ಸ್ಟ್ರೀಟ್ ಮತ್ತು ಸೌತ್ ಬೆಂಡ್ ರಸ್ತೆಯ ಡಿವೈಡರ್‌ನಲ್ಲಿ ಬಸ್ ನಿಲ್ದಾಣದ ಬಳಿ ನಿಂತಿದ್ದಳು. ಈ ವೇಳೆ, ಗುಂಡೇಟಿನಿಂದ ಆಸ್ಪತ್ರೆಗೆ ದಾಖಲಾಗಿ, ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದಳು.
ನಾಲ್ಕು ಕಾರುಗಳಲ್ಲಿದ್ದ ಏಳು ಮಂದಿ ಪರಸ್ಪರ ಜಗಳಕ್ಕಿಳಿದಿದ್ದರು. ಈ ವೇಳೆ ಪರಸ್ಪರರ ನಡುವೆ ಗುಂಡಿನ ದಾಳಿ ನಡೆಯಿತು. ಆಗ ತಪ್ಪಿ ಬಂದ ಗುಂಡೊಂದು ವಿದ್ಯಾರ್ಥಿನಿಗೆ ತಗುಲಿತ್ತು. ತನಿಖೆ ಮುಂದುವರೆದಿದ್ದು, ಈ ಸಾವಿಗೆ ಕಾರಣರಾದ ಎಲ್ಲಾ ಆರೋಪಿಗಳನ್ನೂ ಗುರುತಿಸಲಾಗಿದೆ.