ಹಾಸನ: ಮನೆಯಲ್ಲಿದ್ದ ಹೂವನ್ನು ಕಿತ್ತಿದ್ದಕ್ಕೆ ವ್ಯಕ್ತಿಯೊಬ್ಬ 8 ವರ್ಷದ ಪುಟ್ಟ ಬಾಲಕಿಯ ಬಾಯಿಗೆ ಬರೆ ಹಾಕಿದ ಅಮಾನವೀಯ ಘಟನೆ ಜಿಲ್ಲೆಯ ಸಕಲೇಶಪುರ ತಾಲೂಕಿನ ಬಾಳ್ಳುಪೇಟೆಯಲ್ಲಿ ಶನಿವಾರದಂದು ನಡೆದಿದೆ.
ಬಾಲಕಿಯ ನೆರೆ ಮನೆಯ ನಿವಾಸಿ ಜಯಕುಮಾರ್ ಈ ಕೃತ್ಯವೆಸಗಿದ್ದಾನೆ. ಶನಿವಾರದಂದು ಐಸ್‍ಕ್ರೀಮ್ ತರಲು ಬಾಲಕಿ ತನ್ನ ಮನೆ ಬಳಿ ಇದ್ದ ಅಂಗಡಿಗೆ ಹೋಗಿದ್ದಾಳೆ. ಆಗ ದಾರಿಯಲ್ಲಿ ಜಯಕುಮಾರ್ ಮನೆಯ ಆವರಣದಲ್ಲಿದ್ದ ಹೂವನ್ನು ಕಿತ್ತಿದ್ದಾಳೆ. ಈ ಚಿಕ್ಕ ವಿಷಯಕ್ಕೆ ಮನೆ ಮಾಲೀಕ ಬಾಲಕಿಯ ಬಾಯಿಗೆ ಬರೆ ಇಟ್ಟಿದ್ದಾನೆ.
ತನ್ನ ಮನೆಯಲ್ಲಿ ಬೆಳೆದಿದ್ದ ಹೂವನ್ನು ನೆರೆಮನೆಯ ಬಾಲಕಿ ಕಿತ್ತಿದನ್ನು ಕಂಡು ಜಯಕುಮಾರ್ ಕೋಪಗೊಂಡಿದ್ದಾನೆ. ಬಳಿಕ ಬಾಲಕಿಯನ್ನು ಮನೆಯೊಳಗೆ ಎಳೆದೊಯ್ದು ಮಗಳ ಕೈಯಲ್ಲಿ ಹಂಚಿನ ಕಡ್ಡಿ ಕಾಯಿಸಿಕೊಂಡು ಬರಲು ಹೇಳಿದ್ದಾನೆ. ನಂತರ ಬಾಲಕಿಯ ಬಾಯಿಗೆ ಬರೆ ಇಟ್ಟಿದ್ದಲ್ಲದೆ, ಬೆಲ್ಟ್ ನಿಂದ ಹೊಡೆದಿದ್ದಾನೆ. ಅಲ್ಲಿಂದ ತಪ್ಪಿಸಿಕೊಂಡು ಮನೆಗೆ ಬಂದ ಬಾಲಕಿ ನಡೆದ ವಿಷಯವನ್ನು ಪೋಷಕರಿಗೆ ತಿಳಿಸಿದ್ದಾಳೆ. ಕ್ಷುಲ್ಲಕ ಕಾರಣಕ್ಕೆ ಬಾಲಕಿಯ ಮೇಲೆ ಹಲ್ಲೆ ಮಾಡಿರುವ ಆರೋಪಿ ಮೇಲೆ ಮನೆಯವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸದ್ಯ ಬಾಲಕಿಯ ಪೋಷಕರು ಆರೋಪಿ ವಿರುದ್ದ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು, ಸಕಲೇಶಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv