ರೋಹ್ಟಕ್: ಪಾಪಿ ವ್ಯಕ್ತಿಯೊಬ್ಬ ಶ್ವಾನಕ್ಕೆ ಲೆದರ್ ಬೆಲ್ಟ್ ನಿಂದ ಮನಬಂದಂತೆ ಥಳಿಸಿದ ಘಟನೆ ಹರಿಯಾಣದ ರೋಹ್ಟಕ್‍ನಲ್ಲಿ ನಡೆದಿದೆ.
ಶ್ವಾನದ ಮೇಲೆ ಮೃಗೀಯ ವರ್ತನೆ ತೋರಿದ ವ್ಯಕ್ತಿಯ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದ್ದು, ಭಾರೀ ಖಂಡನೆ ವ್ಯಕ್ತವಾಗುತ್ತಿದೆ. ಅಲ್ಲದೆ ವ್ಯಕ್ತಿ ವಿರುದ್ಧ ಜನ ಆಕ್ರೋಶ ಹೊರಹಾಕುತ್ತಿದ್ದಾರೆ.
ವೀಡಿಯೋದಲ್ಲೇನಿದೆ..?: ವ್ಯಕ್ತಿಯೊಬ್ಬ ಮನೆಯ ಛಾವಣಿಯ ಮೇಲೆ ಮನಬಂದಂತೆ ಬೆಲ್ಟ್‍ನಲ್ಲಿ ಮಲಗಿದ್ದ ಶ್ವಾನಕ್ಕೆ ಹೊಡೆಯುತ್ತಿರುವುದನ್ನು ಕಾಣಬಹುದಾಗಿದೆ. ಬಳಿಕ ಶ್ವಾನವನ್ನು ಛಾವಣಿಯಿಂದ ಎಸೆದಿದ್ದಾನೆ. ಹಿಗ್ಗಾಮುಗ್ಗ ಥಳಿಸಿದ ಪರಿಣಾಮ ನಾಯಿಯ ಎರಡು ಮೂಳೆಗಳು ಮುರಿದಿವೆ.
ಈ ಘಟನೆ ಕೆಲ ದಿನಗಳ ಹಿಂದೆ ನಡೆದಿದ್ದಾಗಿದ್ದು, ವೀಡಿಯೋ ವೈರಲ್ ಆದ ಬಳಿಕ ಬೆಳಕಿಗೆ ಬಂದಿದೆ. ಸದ್ಯ ಪೊಲೀಸರು ಆರೋಪಿಯನ್ನು ಬಂಧಿಸಿದ್ದು, ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ರೋಹ್ಟಕ್‍ನ ಆರ್ಯನಗರ್ ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: ಕಟ್ಟಡದ ಮೇಲಿನಿಂದ ಬಿದ್ದು ಮಗು ಸಾವು
ಆರೋಪಿಯನ್ನು ಸಿಟು ಎಂದು ಗುರುತಿಸಲಾಗಿದೆ. ಕಾರ್ಯಕರ್ತ ಅರವಿಂದ್ ಕುಮಾರ್ ಪ್ರಕಾರ, ಆರೋಪಿ ಈ ಹಿಂದೆಯೂ ನಾಯಿಯನ್ನು ಥಳಿಸಿದ್ದರು. ಇದೀಗ ಮತ್ತೆ ನಡೆದ ಪ್ರಕರಣದಲ್ಲಿ ನಾಯಿಗೆ ಮತ್ತೆ ನಡೆಯಲು ಸಾಧ್ಯವಾಗುವುದಿಲ್ಲ ಎಂದು ಹೇಳಿದರು.