ಬೆಂಗಳೂರು: ಓಎಲ್‍ಎಕ್ಸ್ ನಲ್ಲಿ ಮೊಬೈಲ್ ಖರೀದಿ ಮಾಡುವ ಗ್ರಾಹಕರೇ ಎಚ್ಚರವಾಗಿರಿ. ಯಾಕಂದ್ರೆ ಮೊಬೈಲ್ ಕೊಡಿಸುವ ನೆಪದಲ್ಲಿ ಹಣ ಪಡೆದುಕೊಂಡು ವಂಚನೆ ಎಸಗಿದ ಪ್ರಕರಣವೊಂದು ಬೆಳಕಿಗೆ ಬಂದಿದೆ.
ಬನಶಂಕರಿ ನಿವಾಸಿ ಸತೀಶ್ ಅವರು ವಂಚನೆಗೊಳಗಾದ ಗ್ರಾಹಕ. ಆರೋಪಿ ಭಾಸ್ಕರ್ ವಂಚನೆ ಮಾಡಿ ಪರಾರಿಯಾಗಿದ್ದು, ಈ ಸಂಬಂಧ ಚನ್ನಮ್ಮನ ಅಚ್ಚುಕಟ್ಟು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
Advertisement
ವಂಚಿಸಿದ್ದು ಹೇಗೆ?
ಸತೀಶ್ ಮಗ ಐಫೋನ್ ಕೊಡಿಸುವಂತೆ ಬೇಡಿಕೆ ಇಟ್ಟಿದ್ದನು. ಐಫೋನ್ ಖರೀದಿ ಸಂಬಂಧ ಸತೀಶ್ ಅವರು ಓಎಲ್‍ಎಕ್ಸ್ ನಲ್ಲಿ ಹುಡುಕಾಡಿದಾಗ ಭಾಸ್ಕರ್ ಎಂಬಾತನ ಪರಿಚಯವಾಗಿದೆ. ಭಾಸ್ಕರ್ ಐಫೋನ್ ಎಕ್ಸ್ ಸ್ಕ್ರೀನ್ ಗಾತ್ರವನ್ನು ಹೊಂದಿರುವ ವಿವೋ ಫೋನ್ ಮಾರಾಟದ ಆ್ಯಡ್ ಹಾಕಿದ್ದ. ಈ ವೇಳೆ ಇಬ್ಬರಿಗೂ ಪರಿಚಯವಾಗಿದ್ದು ಸತೀಶ್ ಫೋನ್ ಖರೀದಿಸುವುದಾಗಿ ಹೇಳಿದ್ದಾರೆ.
Advertisement
ಇಬ್ಬರು ಮಾತುಕತೆ ನಡೆಸಿ ಜುಲೈ 22 ರಂದು ಕತ್ರಿಗುಪ್ಪೆಯ ಯೂನಿವರ್ಸಲ್ ಶೂ ರೂಂ ಹತ್ತಿರ ಬರಲು ಸತೀಶ್ ಹೇಳಿದ್ದಾರೆ. ಮಧ್ಯಾಹ್ನ ತಾನು ಸಾಫ್ಟ್ ವೇರ್ ಎಂಜಿನಿಯರ್ ಎಂದು ಹೇಳಿ ಭಾಸ್ಕರ್ ಪರಿಚಯಿಸಿದ್ದಾನೆ. ಬಳಿಕ ವಿವೋ ಫೋನ್ ನೀಡಿದ್ದು, 15,500 ರೂ. ನೀಡಿ ಖರೀದಿಸಿದ್ದಾರೆ. ಈ ವೇಳೆ ಸತೀಶ್ ಐಫೋನ್ ಎಕ್ಸ್ ಹುಡುಕುತ್ತಿರುವ ವಿಚಾರವನ್ನು ತಿಳಿಸಿದ್ದಾರೆ. ಸತೀಶ್ ಮಾತನ್ನು ಕೇಳಿದ ಭಾಸ್ಕರ್ ನನ್ನ ಜೊತೆ ಐಫೋನ್ ಎಕ್ಸ್ ಇದೆ. ಇದನ್ನು ನಾನು ಮಾರಾಟ ಮಾಡುತ್ತೇನೆ ಎಂದು ತಿಳಿಸಿದ್ದಾನೆ. ಇಬ್ಬರ ನಡುವೆ ಮಾತುಕತೆ ನಡೆದು 50 ಸಾವಿರ ರೂ.ಗೆ ಇಬ್ಬರು ಒಪ್ಪಿದ್ದಾರೆ. ಚೆನ್ನಾಗಿ ಮಾತನಾಡುತ್ತಿದ್ದ ಭಾಸ್ಕರ್, ನೀವು ಈಗಲೇ ಹಣ ಕೊಟ್ಟರೆ ಒಳ್ಳೆಯದು ನನ್ನ ಮನೆ ಇಲ್ಲೇ ಹತ್ತಿರದಲ್ಲಿದೆ. 5-10 ನಿಮಿಷದಲ್ಲಿ ಮೊಬೈಲ್ ನಲ್ಲಿರುವ ಡೇಟಾವನ್ನು ಟ್ರಾನ್ಸ್ ಫರ್ ಮಾಡಿ ಬರುತ್ತೇನೆ ಎಂದಿದ್ದಾನೆ.
Advertisement
ಉತ್ತಮ ವ್ಯಕ್ತಿಯಾಗಿ ಮಾತನಾಡುತ್ತಿದ್ದ ಭಾಸ್ಕರ್ ಮಾತನ್ನು ನಂಬಿದ್ದ ಸತೀಶ್ 50 ಸಾವಿರ ರೂ. ಹಣವನ್ನು ಕೊಟ್ಟಿದ್ದಾರೆ. ಈ ಹಣವನ್ನು ತೆಗೆದುಕೊಂಡು ಹೋದ ಬಳಿಕ ಸತೀಶ್ ಅಲ್ಲೇ ಕಾದಿದ್ದಾರೆ. ಆದರೆ ಸ್ಕೂಟರ್ ನಲ್ಲಿ ಬಂದಿದ್ದ ಭಾಸ್ಕರ್ ಮತ್ತೆ ಬರಲೇ ಇಲ್ಲ. ಎಷ್ಟು ಹೊತ್ತಾದರೂ ಬಾರದ ಕಾರಣ ಸತೀಶ್ ಅವರಿಗೆ ನಾನು ಮೋಸ ಹೋಗಿರುವ ವಿಚಾರ ಗೊತ್ತಾಗಿದೆ. 45 ನಿಮಿಷ ಕಾದು ಕಾದು ಕೊನೆಗೆ ಸತೀಶ್ ಪೊಲೀಸರಿಗೆ ದೂರು ನೀಡಿದ್ದಾರೆ.
Advertisement
ಸತೀಶ್ ಭಾಸ್ಕರ್ ಜೊತೆ ಮಾತನಾಡುತ್ತಿರುವ ದೃಶ್ಯ ಸಮೀಪದಲ್ಲಿದ್ದ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.