ಲಕ್ನೋ: ನೀಚ ಮಗನೊಬ್ಬ ಹೆತ್ತ ತಾಯಿಯ ಮೇಲೆಯೇ ಅತ್ಯಾಚಾರಕ್ಕೆ ಯತ್ನಿಸಿದ ಘಟನೆ ಉತ್ತರ ಪ್ರದೇಶ ರಾಜ್ಯದ ರಾಯ್‍ಬರೇಲಿ ಜಿಲ್ಲೆಯ ಶಹಜಹಾನ್‍ಪುರ ಗ್ರಾಮದಲ್ಲಿ ನಡೆದಿದೆ.
25 ವರ್ಷದ ಮಗ ಕುಡಿದ ಮತ್ತಿನಲ್ಲಿ ತನ್ನ 45 ವರ್ಷದ ತಾಯಿಯ ಅತ್ಯಾಚಾರಕ್ಕೆ ಮುಂದಾಗಿದ್ದಾನೆ. ಶನಿವಾರ ಈ ಘಟನೆ ನಡೆದಿದ್ದು, ದಂಪತಿ ಆರ್.ಸಿ.ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದಾಗ ಪ್ರಕರಣ ಬೆಳಕಿಗೆ ಬಂದಿದೆ.
ಶನಿವಾರ ಸಂಜೆ ಮಹಿಳೆಯ ಹಿರಿಯ ಮಗ ಅತ್ಯಾಚಾರಕ್ಕೆ ಯತ್ನಿಸಿದ್ದಾನೆ. ಮನೆ ಹೊರಗಡೆ ಕೆಲಸ ಮಾಡುತ್ತಿದ್ದ ಮಹಿಳೆಯ ಕಿರಿಯ ಮಗ ಅಣ್ಣನಿಂದ ತಾಯಿಯನ್ನು ರಕ್ಷಿಸಿದ್ದಾನೆ. ಇತ್ತ ಮಹಿಳೆಯ ಕಿರುಚಾಟ ಕೇಳಿದ ಕೂಡಲೇ ನೆರೆಹೊರೆಯವರು ಸಹಾಯಕ್ಕೆ ಮುಂದಾಗಿದ್ದಾರೆ.
ಸದ್ಯ ಆರೋಪಿ ಮಗನನ್ನು ಜಿಲ್ಲಾ ಕಾರಾಗೃಹದಲ್ಲಿ ಇರಿಸಲಾಗಿದೆ. ಆರೋಪಿ ವಿರುದ್ಧ ಐಪಿಸಿ ಸೆಕ್ಷನ್ 376 ಮತ್ತು 511ರ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಮೊದಲಿಗೆ ದಂಪತಿ ಮಗನ ವಿರುದ್ಧವೇ ದೂರು ದಾಖಲಿಸಲು ಠಾಣೆಗೆ ಆಗಮಿಸಿದಾಗ ನಿಜಕ್ಕೂ ನನಗೆ ಶಾಕ್ ಆಯಿತು. ಈಗಾಗಲೇ ಪ್ರಕರಣ ದಾಖಲಾಗಿದ್ದು, ಘಟನೆಗೆ ಸಂಬಂಧಿಸಿದಂತೆ ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ ಎಂದು ಎಸ್‍ಪಿ ದಿನೇಶ್ ತ್ರಿಪಾಠಿ ತಿಳಿಸಿದ್ದಾರೆ.