ಆನೇಕಲ್: ಉತ್ಪನ್ನಗಳನ್ನು ಮಾರಾಟ ಮಾಡಲು ಬಂದಿದ್ದ ಯುವತಿಯ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ ಘಟನೆ ಹೊಸಕೋಟೆ ತಾಲ್ಲೂಕಿನ ಬೈಲ ನರಸಾಪುರ ಪ್ರದೇಶದ ಬಳಿ ನಡೆದಿದೆ.
ತಾಲ್ಲೂಕಿನ ಗಂಗಾಪುರ ಗ್ರಾಮದ ನಿವಾಸಿ ರಮೇಶ್ (40) ಬಂಧಿತ ಆರೋಪಿಯಾಗಿದ್ದು, ನಿನ್ನೆ ಸಂಜೆ ಬೈಲ ನರಸಾಪುರ ಬಳಿ ಘಟನೆ ನಡೆದಿದೆ.
ಏನಿದು ಪ್ರಕರಣ?
ಬೈಲ ನರಸಾಪುರದಲ್ಲಿ ಸಾಮಾಗ್ರಿಗಳನ್ನು ಮಾರಾಟ ಮಾಡಲು ಯುವತಿ ಆಗಮಿಸಿದ್ದಳು. ಸಂಜೆಯಾಗಿದ್ದರಿಂದ ಮರಳಿ ಮನೆಗೆ ಹೊರಡಲು ಸಿದ್ಧರಾಗಿ ಬಸ್ಸಿಗೆ ಕಾಯುತ್ತಿದ್ದಳು. ಆದರೆ ಬಸ್ ಬಾರದ ಕಾರಣ ಯುವತಿ ಟಿವಿಎಸ್ ಬೈಕಿನಲ್ಲಿ ಬರುತ್ತಿದ್ದ ಆರೋಪಿಯ ಬಳಿ ಡ್ರಾಪ್ ಕೇಳಿದ್ದಳು. ಯುವತಿಯನ್ನು ಬೈಕ್ ಹತ್ತಿಸಿಕೊಂಡಿದ್ದ ಆರೋಪಿ ರಮೇಶ್ ಬೈಲನರಸಾಪುರದಿಂದ ಗಂಗಾಪುರಕ್ಕೆ ಹೋಗುವ ಮಾರ್ಗವಾಗಿ ಮುಖ್ಯರಸ್ತೆಗೆ ಆಗಮಿಸಿ ಆ ಬಳಿಕ ಅಲ್ಲಿಂದ ಅಡ್ಡ ದಾರಿ ಇದೆ ಬೇಗ ಹೋಗಬಹುದು ಎಂದು ಕರೆದುಕೊಂಡು ಹೋಗಿದ್ದಾನೆ.
ಮುಖ್ಯರಸ್ತೆ ಇಂದ ಆರೋಪಿ ಯುವತಿಯನ್ನ ತಮ್ಮದೇ ತೋಟದ ಪಂಪ್ ಹೌಸ್ ಬಳಿ ಕರೆದುಕೊಂಡು ಬಂದಿದ್ದು, ಅಲ್ಲಗೆ ಬರುತ್ತಿದಂತೆ ಯುವತಿಯ ಕತ್ತಿನ ಮೇಲೆ ಕುಡುಗೋಲಿನಿಂದ ಹಲ್ಲೆಗೆ ಮುಂದಾಗಿ ಅತ್ಯಾಚಾರಕ್ಕೆ ಯತ್ನಿಸಿದ್ದಾನೆ. ಈ ಹಂತದಲ್ಲಿ ಆರೋಪಿಯಿಂದ ತಪ್ಪಿಸಿಕೊಂಡ ಯುವತಿ ಗ್ರಾಮದ ಕಡೆ ಓಡಿ ಬಂದಿದ್ದು, ಸ್ಥಳೀಯರ ಸಹಾಯದಿಂದ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಘಟನೆ ಬಗ್ಗೆ ಯುವತಿ ನಂದಗುಡಿ ಪೊಲೀಸರಿಗೆ ದೂರು ನೀಡಿದ್ದು, ದೂರು ಪಡೆದ ಪೊಲೀಸರು ಆರೋಪಿ ರಮೇಶ್ ನನ್ನ ಬಂಧಿಸಿ ತನಿಖೆ ಆರಂಭಿಸಿದ್ದಾರೆ.