ಚಿಕ್ಕಬಳ್ಳಾಪುರ: ತಾತ್ಕಾಲಿಕ ಅಮ್ಯೂಸ್‍ಮೆಂಟ್ ಪಾರ್ಕ್ ಹಾಗೂ ವಸ್ತು ಪ್ರದರ್ಶನ ವಿಚಾರದಲ್ಲಿ ಇಬ್ಬರು ಮಾಲೀಕರುಗಳ ನಡುವಿನ ಗಲಾಟೆ, ಗೊಂದಲ, ಮನಸ್ತಾಪದಿಂದ ಓರ್ವ ಮಾಲೀಕ ಸೆಲ್ಫಿ ವಿಡಿಯೋ ರೆಕಾರ್ಡ್ ಮಾಡಿ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಚಿಕ್ಕಬಳ್ಳಾಪುರದ ಚಿತ್ರಾವತಿ ಜಾತ್ರೆಯಲ್ಲಿ ನಡೆದಿದೆ.
ಅಮ್ಯೂಸ್‍ಮೆಂಟ್ ಪಾರ್ಕಿನ ಮಾಲೀಕ ಶ್ರೀನಿವಾಸ್ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಗ್ರಾಮೀಣ ಪ್ರದೇಶದಲ್ಲಿ ನಡೆಯುವ ಜಾತ್ರೆಗಳಲ್ಲಿ, ತಾತ್ಕಾಲಿಕ ಅಮ್ಯೂಸ್‍ಮೆಂಟ್ ಪಾರ್ಕ್ ಹಾಗೂ ವಸ್ತು ಪ್ರದರ್ಶನ ಮಾಡುವುದರ ಮೂಲಕ ಚಿಕ್ಕಬಳ್ಳಾಪುರ ಜಿಲ್ಲೆ ಚಿಂತಾಮಣಿ ನಿವಾಸಿ ಶ್ರೀನಿವಾಸ್ ಹಾಗೂ ಬೆಂಗಳೂರು ಮೂಲದ ರಾಜೇಶ್ ಹೊಟ್ಟೆ ತುಂಬಿಸಿಕೊಳ್ಳುತ್ತಿದ್ದರು. ಎಂದಿನಂತೆ ಈ ಬಾರಿ ಜಿಲ್ಲೆಯ ಚಿತ್ರಾವತಿ ಬಳಿ ಇರುವ ಶ್ರೀ ಸುಬ್ರಮ್ಮಣ್ಯಶ್ವರ ಜಾತ್ರೆಯಲ್ಲಿ ಸ್ಪರ್ಧೆಗಿಳಿದು ತಾತ್ಕಾಲಿಕ ಅಮ್ಯೂಸ್‍ಮೆಂಟ್ ಪಾರ್ಕ್ ಹಾಗೂ ವಸ್ತು ಪ್ರದರ್ಶನ ಏರ್ಪಡಿಸಿದ್ದರು.
ಆದರೆ ಒಂದೇ ಜಾಗದಲ್ಲಿ ಎರಡೆರಡು ಅಮ್ಯೂಸ್‍ಮೆಂಟ್ ಪಾರ್ಕ್ ನಿರ್ಮಾಣ ಮಾಡಿದ ಕಾರಣ ಇಬ್ಬರಿಗೂ ನಷ್ಟವಾಗಿದೆ. ಮತ್ತೊಂದೆಡೆ ರಾಜೇಶ್ ಕಡೆಯವರು ತನಗೆ ಪ್ರಾಣ ಬೆದರಿಕೆ ಹಾಕಿ ಪದೆ ಪದೆ ತನಗೆ ತೊಂದರೆ ನಿಡುತ್ತಿದ್ದಾರೆ ಎಂದು ಆರೋಪಿಸಿ ಶ್ರೀನಿವಾಸ್ ಇಂದು ಸೆಲ್ಫಿ ವಿಡಿಯೋ ರೆಕಾರ್ಡ್ ಮಾಡಿ, ಇಲಿ ಪಾಷಾಣ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದರು. ಇದನ್ನು ಕಂಡ ಸ್ಥಳಿಯರು ಶ್ರೀನಿವಾಸ್ ಅವರನ್ನು ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿ ಬಳಿಕ ವಿಕ್ಟೋರಿಯಾ ಆಸ್ಪತ್ರೆಗೆ ರವಾನಿಸಿದ್ದಾರೆ.
ಮತ್ತೊಂದೆಡೆ ಶ್ರೀನಿವಾಸ್ ಆರೋಪ ಅಲ್ಲಗಳೆದಿರುವ ರಾಜೇಶ, ತಾವು ಜಾತ್ರೆ ಆರಂಭವಾಗುವುದಕ್ಕೂ ಮುನ್ನ ಚಿತ್ರಾವತಿಯಲ್ಲಿ ತಾತ್ಕಾಲಿಕ ಅಮ್ಯೂಸ್‍ಮೆಂಟ್ ಪಾರ್ಕ್ ಹಾಗೂ ವಸ್ತು ಪ್ರದರ್ಶನ ಏರ್ಪಡಿಸಿದ್ದೆ, ನಂತರ ಬಂದ ಶ್ರೀನಿವಾಸ್, ಹಠಕ್ಕೆ ಬಿದ್ದವರಂತೆ ತಮ್ಮ ಎದರುಗಡೆಯೇ ಅಮ್ಯೂಸ್‍ಮೆಂಟ್ ಪಾರ್ಕ್ ನಿರ್ಮಾಣ ಮಾಡಿದ್ದರು. ಅವರ ವ್ಯಾಪಾರ ಅವರದು ನಮ್ಮ ವ್ಯಾಪಾರ ನಮ್ಮದು, ಶ್ರೀನಿವಾಸ್ ಮೈತುಂಬ ಸಾಲ ಮಾಡಿಕೊಂಡು ಸಾಲಗಾರರಿಂದ ತಪ್ಪಿಸಿಕೊಳ್ಳಲು ಹೀಗೆ ಮಾಡುವುದೇ ಆತನ ಕಾಯಕ. ಅದಕ್ಕೂ ನಮಗೂ ಸಂಬಂಧವಿಲ್ಲ ಎಂದು ಮೊಬೈಲ್ ಕರೆಗೆ ರಾಜೇಶ್ ಪ್ರತಿಕ್ರಿಯಿಸಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv