ಹೈದರಾಬಾದ್: ರಸ್ತೆ ಮೇಲೆ ಮಾತನಾಡಿಸಲು ನಿರಾಕರಿಸಿದ ಯುವತಿ ಮೇಲೆ ಪಾಗಲ್ ಪ್ರೇಮಿಯೊಬ್ಬ ಕುಡುಗೋಲಿನಿಂದ ಮಾರಣಾಂತಿಕ ಹಲ್ಲೆ ಮಾಡಿರುವ ಘಟನೆ ಆಂಧ್ರ ಪ್ರದೇಶದ ಬರ್ಕತ್‍ಪುರದಲ್ಲಿ ಇಂದು ನಡೆದಿದೆ.
ಭರತ್ ಎಂಬಾತ ಹಲ್ಲೆ ಮಾಡಿರುವ ಆರೋಪಿ. ದ್ವಿತೀಯ ಪಿಯುಸಿ ಓದುತ್ತಿದ್ದ ಯುವತಿಯೊಬ್ಬಳನ್ನು ಭರತ್ ಕಳೆದ ಒಂದು ವರ್ಷದಿಂದ ಪ್ರೀತಿಸುತ್ತಿದ್ದ. ಆದ್ರೆ ಯುವತಿ ಮಾತ್ರ ಈತನ ಪ್ರೀತಿಯನ್ನು ಒಪ್ಪಿರಲಿಲ್ಲ. ಆದರಿಂದ ಪ್ರತಿದಿನ ಯುವತಿಯನ್ನು ಹಿಂಬಾಲಿಸಿಕೊಂಡು ಬಂದು ಪ್ರೀತಿ ಮಾಡುವಂತೆ ಕಾಟ ಕೊಡುತ್ತಿದ್ದನು.
ಇಂದು ಬೆಳಗ್ಗೆ ಕೂಡ ಯುವತಿ ಕಾಲೇಜಿಗೆ ಹೋಗುತ್ತಿದ್ದ ವೇಳೆ ಭರತ್ ರಸ್ತೆ ಮಧ್ಯೆ ಅಡ್ಡಗಟ್ಟಿ ತನ್ನೊಡನೆ ಮತನಾಡುವಂತೆ ಬಲವಂತ ಮಾಡಿದ್ದಾನೆ. ಪಾಗಲ್ ಪ್ರೇಮಿಯ ಹುಚ್ಚಾಟಕ್ಕೆ ಬೇಸತ್ತ ಯುವತಿ ಆತನ ಜೊತೆ ಮಾತನಾಡಲು ನಿರಾಕರಿಸಿದ್ದಾಳೆ. ಇಷ್ಟಕ್ಕೆ ಕೋಪಗೊಂಡ ಯುವಕ ಯುವತಿ ಮೇಲೆ ಕುಡುಗೋಲಿನಿಂದ ಹಲ್ಲೆ ನಡೆಸಿದ್ದಾನೆ. ಘಟನೆಯಲ್ಲಿ ಯುವತಿ ಗಂಭೀರ ಗಾಯಗೊಂಡಿದ್ದು ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ.
ಈ ಹಿಂದೆ ಯುವಕನ ಮೇಲೆ ಯುವತಿ ಹೈದರಾಬಾದ್‍ನ ಪೊಲೀಸರಿಗೆ ದೂರು ನೀಡಿದ್ದಳು. ಆಗ ಪೊಲೀಸರು ಯುವಕನನ್ನು ಠಾಣೆಗೆ ಕರೆಸಿ ತಿಳಿ ಹೇಳಿದ್ದರು. ಆದರೂ ಕೂಡ ಯುವಕ ಯುವತಿಯ ಬೆನ್ನು ಹತ್ತಿದ್ದ. ಅಲ್ಲದೇ ಸಾಕಷ್ಟು ಬಾರಿ ಯುವತಿಯ ತಾಯಿಗೆ ಪೊಲೀಸರಿಗೆ ದೂರು ನೀಡದಂತೆ ಬೆದರಿಕೆ ಕೂಡ ಹಾಕಿದ್ದ. ಸದ್ಯ ಆರೋಪಿ ಬಂಧನಕ್ಕೆ ಹೈದರಾಬಾದ್ ಪೊಲೀಸರು ಬಲೆ ಬೀಸುತ್ತಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv