ಮುಂಬೈ: ಚೈನೀಸ್ ಉಪಹಾರ ಗೃಹದಲ್ಲಿ ನೀಡಿದ ಊಟದ ರುಚಿ ಹಾಗೂ ಅದರ ಬೆಲೆಯ ವಿಚಾರವಾಗಿ ಮಾಲೀಕ ಮತ್ತು ಗ್ರಾಹಕನ ನಡುವೆ ವಾಗ್ವಾದ ನಡೆದು, ಅಲ್ಲಿನ ಸಿಬ್ಬಂದಿ ಗ್ರಾಹಕನ ಸಹೋದರನ ಮೇಲೆ ಬಿಸಿ ಎಣ್ಣೆ ಎರಚಿರುವ ಘಟನೆ ಮುಂಬೈನ ಉಲ್ಲಾಸ್‍ನಗರದ ವೀನಸ್ ಚೌಕ್‍ನಲ್ಲಿ ನಡೆದಿದೆ.
ಇಲ್ಲಿನ ಮನೋಜ್ ಕೋಳಿವಾಡಾ ಚೈನೀಸ್ ಕಾರ್ನರ್ ಸಿಬ್ಬಂದಿ ದೀಪಕ್ ಎಂಬವರ ಮೇಲೆ ಬಿಸಿಯಾದ ಎಣ್ಣೆ ಎರಚಿದ್ದಾರೆ. ಪರಿಣಾಮ ದೀಪಕ್‍ಗೆ ಸುಟ್ಟ ಗಾಯಗಳಾಗಿವೆ.
ಏನಿದು ಘಟನೆ: ಮಂಗಳವಾರ ರಾತ್ರಿ ಸುಮಾರು 11.30ರ ವೇಳೆಯಲ್ಲಿ ವಿಕ್ಕಿ ಮಾಸ್ಕೆ ತನ್ನ ಮೂವರು ಸ್ನೇಹಿತರೊಂದಿಗೆ ಊಟಕ್ಕೆಂದು ಹೋಗಿದ್ದರು. ಊಟ ಮುಗಿಸಿದ ನಂತರ ವಿಕ್ಕಿ ಮೊದಲು ಊಟದ ರುಚಿಯ ಬಗ್ಗೆ ಮಾಲೀಕನಿಗೆ ದೂರಿದ್ದರು. ನಂತರ ಬಿಲ್ ವಿಷಯವಾಗಿ ಇಬ್ಬರ ನಡುವೆ ವಾಗ್ವಾದ ನಡೆದಿತ್ತು. ನಂತರ ವಿಕ್ಕಿ ತನ್ನ ಸಹೋದರ ದೀಪಕ್ ಮಾಸ್ಕೆಗೆ ಕರೆ ಮಾಡಿ ಸ್ಥಳಕ್ಕೆ ಬರುವಂತೆ ಹೇಳಿದ್ದರು. ಈ ವೇಳೆ ಅಲ್ಲಿನ ಸಿಬ್ಬಂದಿಯೊಬ್ಬ ದೀಪಕ್ ಮುಖದ ಮೇಲೆ ಬಿಸಿ ಎಣೆ ಎರಚಿದ್ದಾನೆ. ದೀಪಕ್ ಸ್ನೇಹಿತ ವಿಜಯ್ ಪಗಾರೆ ಎಂಬವರಿಗೂ ಹೊಟ್ಟೆಯ ಮೇಲೆ ಸುಟ್ಟ ಗಾಯಗಳಾಗಿದೆ. ಕೂಡಲೇ ಇಬ್ಬರನ್ನೂ ಉಲ್ಲಾಸ್‍ನಗರದ ಸೆಂಟ್ರಲ್ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ವಿಠಲ್‍ವಾಡಿ ಪೊಲೀಸ್ ಠಾಣೆಯ ಅಧಿಕಾರಿಯೊಬ್ಬರು ಹೇಳಿದ್ದಾರೆ.
ಉಪಹಾರ ಗೃಹದ ಮಾಲೀಕನ ವಿರುದ್ಧ ಹಾಗೂ ಸಿಬ್ಬಂದಿಯ ವಿರುದ್ಧ ಐಪಿಸಿ ಸೆಕ್ಷನ್ 323, 324, 504 ಹಾಗೂ 34ರ ಅಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಆ ಪ್ರದೇಶದ ಸಿಸಿಟಿವಿ ದೃಶ್ಯಾವಳಿಯನ್ನು ವಶಪಡಿಸಿಕೊಂಡಿದ್ದೇವೆ. ಸಂತ್ರಸ್ತ ವ್ಯಕ್ತಿಯ ಮೇಲೆ ಬಿಸಿ ಎಣ್ಣೆ ಎರಚಿರುವುದನ್ನ ವಿಡಿಯೋದಲ್ಲಿ ಕಾಣಬಹುದು ಎಂದು ಪೊಲೀಸರು ಹೇಳಿದ್ದಾರೆ.