ಬೆಂಗಳೂರು: ಟ್ರೀಟ್‍ಮೆಂಟ್ ಸರಿಯಿಲ್ಲ ಎಂದು ಪ್ರಸಿದ್ಧ ವೈದ್ಯರೊಬ್ಬರ ಮೇಲೆ ಹಲ್ಲೆ ನಡೆದಿರುವ ಬಗ್ಗೆ ಸಿಲಿಕಾನ್ ಸಿಟಿಯಲ್ಲಿ ಬೆಳಕಿಗೆ ಬಂದಿದೆ.
ವಿಜಯ್ ಕುಮಾರ್ ಬಾಯ್ನಾಕ್ ಹಲ್ಲೆಗೊಳಗಾದ ವೈದ್ಯರಾಗಿದ್ದು, ಇವರು ಹೋಮಿಯೋಪಥಿ ಡಾಕ್ಟರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಈ ಹಿಂದೆ ಸರ್ಕಾರಿ ಹೋಮಿಯೋಪಥಿ ವೈದ್ಯರಾಗಿದ್ದ ವಿಜಯ್ ಕುಮಾರ್, ಕರ್ನಾಟಕದ ಮಾಜಿ ರಾಜ್ಯಪಾಲ ಟಿ.ಎನ್. ಚತುರ್ವೇದಿ ಅವರಿಗೆ ಪರ್ಸನಲ್ ಹೋಮಿಯೋಪಥಿ ವೈದ್ಯರಾಗಿ ಸೇವೆ ಸಲ್ಲಿಸಿದ್ದರು. ತಮ್ಮ ನಿವೃತ್ತಿ ನಂತರ ನಾಗರಭಾವಿ ಬಳಿಯ ಪಾಪರೆಡ್ಡಿಪಾಳ್ಯದಲ್ಲಿ ಹೋಮಿಯೋಪಥಿ ಕ್ಲಿನಿಕ್ ತೆರೆದು ಉಚಿತವಾಗಿ ಚಿಕಿತ್ಸೆ ನೀಡುತ್ತಿದ್ದಾರೆ.
Advertisement
Advertisement
ಕಳೆದ 23ರಂದು ಇವರ ಕ್ಲಿನಿಕ್‍ಗೆ ಬಂದ ಸುರೇಶ್ ನಾಯ್ಕ್ ಡಸ್ಟ್ ಅಲರ್ಜಿಗೆ ನೀವು ಕೊಟ್ಟ ಚಿಕಿತ್ಸೆ ಸರಿಯಿಲ್ಲ ಎಂದು ಜಗಳ ಶುರು ಮಾಡಿದ್ದಾನೆ. ಅಲ್ಲದೆ ನನ್ನ ಹೆಂಡತಿಗೆ ಮಾಧ್ಯಮದವರೆಲ್ಲ ಗೊತ್ತು ನಮಗೆ ಒಂದೂವರೆ ಲಕ್ಷ ಹಣ ಕೊಟ್ಟರೆ ಸರಿ ಎಂದು ಬೇಡಿಕೆ ಇಟ್ಟಿದ್ದಾನೆ. ಈ ವೇಳೆ ಹಣ ನೀಡಲು ವೈದ್ಯ ವಿಜಯ್ ಕುಮಾರ್ ನಿರಾಕರಿಸಿದ್ದಕ್ಕೆ ಮುಖಕ್ಕೆ ಗುದ್ದಿ ಹಲ್ಲೆ ನಡೆಸಿದ್ದಲ್ಲದೇ, ಆಕ್ಸಿಡೆಂಟ್ ಮಾಡಿ ಜೀವ ತೆಗೆಯೋದಾಗಿ ಬೆದರಿಸಿ ಅಲ್ಲಿಂದ ಕಾಲ್ಕಿತ್ತಿದ್ದಾನೆ.
Advertisement
Advertisement
ಡಾಕ್ಟರ್ ವಿಜಯ್ ಕುಮಾರ್‍ರ ಮೇಲಿನ ಹಲ್ಲೆಯನ್ನು ಖಂಡಿಸಿರುವ ಸ್ಥಳೀಯರು, ವೈದ್ಯ ವಿಜಯ್ ಕುಮಾರ್ ಕಳೆದ ಎರಡು ವರ್ಷಗಳಿಂದ ಪಾಪರೆಡ್ಡಿ ಪಾಳ್ಯದಲ್ಲಿ ಕ್ಲಿನಿಕ್ ತೆರೆದು ಬಡವರಿಗೆ ಉಚಿತವಾಗಿ ಹೋಮಿಯೋಪಥಿ ಚಿಕಿತ್ಸೆ ನೀಡುತ್ತಿದ್ದಾರೆ. ಅವರ ಮೇಲೆ ಹಲ್ಲೆ ಮಾಡಿರೋದು ಚಿಕಿತ್ಸೆ ವಿಷಯಕ್ಕಲ್ಲ. ಬೇರೆಯದ್ದೇ ಕಾರಣ ಇದೆ. ಪೊಲೀಸರು ಆರೋಪಿಗಳನ್ನು ಕೂಡಲೇ ಬಂಧಿಸಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.
ಸದ್ಯ ಘಟನೆ ಸಂಬಂಧ ಅನ್ನಪೂರ್ಣೇಶ್ವರಿ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಸಿಸಿಟಿವಿ ದೃಶ್ಯಾವಳಿಗಳನ್ನು ವಶಕ್ಕೆ ಪಡೆದಿರುವ ಪೊಲೀಸರು ತನಿಖೆ ಕೈಗೊಂಡಿದ್ದಾರೆ.