ತುಮಕೂರು: ಪರ ಊರಿನಿಂದ ಚಲನಚಿತ್ರ ನೋಡಲು ಬಂದಿದ್ದ ವ್ಯಕ್ತಿಯ ಮೇಲೆ ಮೂರು ಜನ ಅಪರಿಚಿತರು ದಾಳಿ ಮಾಡಿ ಹಣ ದೋಚಿ ಪರಾರಿಯಾಗಿರುವ ಘಟನೆ ಜಿಲ್ಲೆ ಮಧುಗಿರಿ ಪಟ್ಟಣದಲ್ಲಿ ರಾತ್ರಿ ನಡೆದಿದೆ.
ಕೊರಟಗೆರೆ ಪಟ್ಟಣದ ದೇವಾಂಗ ಬೀದಿಯ ನಿವಾಸಿ ಇನಾಯತ್ (25) ಮಾರಣಾಂತಿಕವಾಗಿ ಹಲ್ಲೆಗೊಳಗಾಗಿರುವ ವ್ಯಕ್ತಿ. ಇವರು ರಾತ್ರಿ ಖಾಸಗಿ ಬಸ್ ನಿಲ್ದಾಣದ ಹೋಟೆಲ್ ಒಂದರ ಬಳಿ ಊಟ ಸೇವಿಸುತ್ತಾ ಕುಳಿತ್ತಿದ್ದರು. ಇದನ್ನು ಗಮನಿಸಿ ಬೈಕ್ ನಲ್ಲಿ ಬಂದ ಮೂವರು ಅಪರಿಚಿತರು ಇನಾಯತ್ ಮೇಲೆ ಏಕಾಏಕಿ ದಾಳಿ ನಡೆಸಿದ್ದು, ಗಂಭೀರವಾಗಿ ಗಾಯಗೊಳಿಸಿ ಅವರ ಬಳಿ ಇದ್ದ ಎರಡು ಸಾವಿರ ರೂಪಾಯಿಗಳನ್ನು ದೋಚಿ ಪರಾರಿಯಾಗಿದ್ದಾರೆ.
ಹಲ್ಲೆ ನಡೆಸಿದರ ಪರಿಣಾಮ ಇನಾಯತ್ ತಲೆ ಹಾಗೂ ಹೊಟ್ಟೆ ಭಾಗಕ್ಕೆ ತೀವ್ರವಾಗಿ ಗಾಯವಾಗಿದೆ. ತಕ್ಷಣ ಈತನನ್ನು ಸ್ಥಳೀಯರು ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ. ಘಟನೆ ಸಂಬಂಧ ಮಧುಗಿರಿ ಪಟ್ಟಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಳಿಗಾಗಿ ಹುಡುಕಾಟ ನಡೆಯುತ್ತಿದೆ.