ಪಾಟ್ನಾ: ಪೊಲೀಸ್ ಕಾನ್‍ಸ್ಟೇಬಲ್ ಚಾಲಕನ ಲಿಖಿತ ಪರೀಕ್ಷೆಯಲ್ಲಿ ನಕಲು ಮಾಡುವ ಮೂಲಕ ವ್ಯಕ್ತಿಯೊಬ್ಬ ನಕಲು ಮಾಡಲು ಹೋಗಿ ಸಿಕ್ಕಿಹಾಕಿಕೊಂಡ ಘಟನೆ ಬಿಹಾರದಲ್ಲಿ ನಡೆದಿದೆ.
ಪರೀಕ್ಷೆಯಲ್ಲಿದ್ದ ಸುನೀಲ್ ಜಮುಯಿ ಎಂಬವನು ತನ್ನ ಒಳಉಡುಪಿನಲ್ಲಿ ಮೊಬೈಲ್ ಹಾಗೂ ಟೋಪಿಯಲ್ಲಿ ಬ್ಲೂಟೂತ್ ಬಚ್ಚಿಟ್ಟುಕೊಂಡಿದ್ದನು. ಪರೀಕ್ಷಾ ಕೊಠಡಿಯಲ್ಲಿ ಎಲೆಕ್ಟ್ರಾನಿಕ್ ವಸ್ತುಗಳು ತೆಗೆದುಕೊಂಡು ಹೋಗುವ ಹಾಗಿಲ್ಲ. ಹೀಗಿದ್ದರೂ ಸಹ ಸುನೀಲ್ ಮೊಬೈಲ್ ಹಾಗೂ ಬ್ಲೂಟೂತ್ ಬಳಸಿದ್ದಾನೆ. ಸುನೀಲ್ ಬ್ಲೂಟೂತ್ ಮೂಲಕ ತನ್ನ ಸ್ನೇಹಿತನಿಗೆ ಪ್ರಶ್ನೆ ಹೇಳುತ್ತಿದ್ದನು. ಪ್ರಶ್ನೆ ಕೇಳಿ ಆತನ ಸ್ನೇಹಿತ ಉತ್ತರ ಹೇಳುತ್ತಿದ್ದನು.
ಈ ಬಗ್ಗೆ ಪ್ರತಿಕ್ರಿಯಿಸಿದ ಎಸ್‍ಎಚ್‍ಒ ಮನೋಜ್ ಕುಮಾರ್, ಪರೀಕ್ಷಾರ್ಥಿ ಸುನೀಲ್ ಲಕ್ಷ್ಮಿಪುರದ ನಿವಾಸಿಯಾಗಿದ್ದು, ಮುಖ್ದಂಪುರದ ಇಂದ್ರಾಸ್ತಾಲಿ ಬಾಲಕಿಯ ಶಾಲೆಯಲ್ಲಿ ಆತನ ಎಕ್ಸಾಂ ಸೆಂಟರ್ ಆಗಿತ್ತು. ಪರೀಕ್ಷೆ ವೇಳೆ ಮೇಲ್ವಿಚಾರಕನಿಗೆ ಸುನೀಲ್ ನಡೆದುಕೊಳ್ಳುತ್ತಿದ್ದ ರೀತಿ ನೋಡಿ ಆತನ ಮೇಲೆ ಅನುಮಾನಗೊಂಡರು. ನಂತರ ಆತನನ್ನು ಪರಿಶೀಲನೆ ನಡೆಸಿದಾಗ ಆತನ ಒಳಉಡುಪಿನಲ್ಲಿ ಮೊಬೈಲ್ ಹಾಗೂ ಟೋಪಿಯಲ್ಲಿ ಬ್ಯೂಟೂತ್ ಬಚ್ಚಿಟ್ಟುಕೊಂಡಿದ್ದನು.
ಮನೋಜ್ ಅವರ ಪ್ರಕಾರ, ಪೊಲೀಸರು ಈ ಪ್ರಕರಣವನ್ನು ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ಅಲ್ಲದೆ ಮೊಬೈಲಿನಲ್ಲಿ ಉತ್ತರ ಹೇಳುತ್ತಿದ್ದ ವ್ಯಕ್ತಿಯನ್ನು ಪತ್ತೆ ಹಚ್ಚಲು ಮೊಬೈಲ್ ಅನ್ನು ವಶಕ್ಕೆ ಪಡೆದುಕೊಂಡು ಪರಿಶೀಲನೆ ನಡೆಸುತ್ತಿದ್ದಾರೆ. ಗೇಟ್‍ನಲ್ಲಿ ಪರಿಶೀಲಿಸುವಾಗ ಅಲ್ಲಿ ಈ ಎಲೆಕ್ಟ್ರಾನಿಕ್ ವಸ್ತುಗಳನ್ನು ಹೇಗೆ ಹಿಡಿಯಲು ಸಾಧ್ಯವಾಗಲಿಲ್ಲ ಎಂಬ ಬಗ್ಗೆಯೂ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.