ಯಾದಗಿರಿ: ನಾಡ ಬಂದೂಕು ತಯಾರು ಮಾಡಿ ಮಾರಾಟ ಮಾಡುತ್ತಿದ್ದ ಆರೋಪದ ಮೇಲೆ ಯಾದಗಿರಿಯ ರಾಮಸಮುದ್ರ ಗ್ರಾಮದ 26 ವರ್ಷದ ಭೀಮಣ್ಣನನ್ನ ವಾರದ ಹಿಂದೆ ಯಾದಗಿರಿ ಗ್ರಾಮಾಂತರ ಠಾಣೆಯ (Yadagiri Rural Police Station) ಪೊಲೀಸರು ಬಂಧಿಸಿದ್ದಾರೆ.
ಈ ಭೀಮಣ್ಣ ಹಾಗೂ ಕುಟುಂಬಸ್ಥರು ಕಳೆದ ಕೆಲ ವರ್ಷಗಳಿಂದ ಹೊಟ್ಟೆಪಾಡಿಗೆಂದು ಬೆಂಗಳೂರಿಗೆ ಹೋಗಿ ಕೂಲಿ ಕೆಲಸ ಮಾಡಿಕೊಂಡು ಜೀವನ ಮಾಡುತ್ತಿದ್ದರು. ಆದರೆ ಕಳೆದ ಮೂರು ತಿಂಗಳ ಹಿಂದೆ ಕುಟುಂಬಸ್ಥರು ಭೀಮಣ್ಣನ ಮದುವೆ ಮಾಡಲು ಊರಿಗೆ ಬಂದಿದ್ರು. ಮದುವೆ ಮಾಡಿದ ಬಳಿಕ ಮದುಗೆ ಹಣ ಖರ್ಚಾಗಿದ್ದರಿಂದ ಸಾಲ ಆಗಿತ್ತು. ಇದೇ ಕಾರಣಕ್ಕೆ ಕುಟುಂಬಸ್ಥರು ಭೀಮಣ್ಣನಿಗೆ ಬೆಂಗಳೂರಿಗೆ ಹೋಗಿ ದುಡಿದು ಸಾಲ ಕಟ್ಟುವಂತೆ ಹೇಳಿದ್ದಾರೆ. ಇದರಿಂದ ಸಿಟ್ಟಿಗೆದ್ದ ಭೀಮಣ್ಣ ನಾನು ಬೆಂಗಳೂರಿಗೆ ಹೋಗಿ ದುಡಿದು ಸಾಲ ಕಟ್ಟಲ್ಲ ಅಂತ ಜಗಳ ಮಾಡಿಕೊಂಡಿದ್ದಾನೆ. ಮತ್ತೆ ಮನೆಯವರು ಒತ್ತಾಯ ಮಾಡಿದ್ದಕ್ಕೆ ಕೈಯಲ್ಲಿ ನಾಡಬಂದೂಕು ಹಿಡಿದುಕೊಂಡು ಬಂದ ಭೀಮಣ್ಣ ಕುಟುಂಬಸ್ಥರಿಗೆ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದಾನೆ. ಈ ಸಂಬಂಧ ಭೀಮಣ್ಣನ ಸಹೋದರ ಮೌನೇಶ್ ಯಾದಗಿರಿ ಗ್ರಾಮಾಂತರ ಠಾಣೆಯಲ್ಲಿ ತನ್ನ ಸಹೋದರನ ವಿರುದ್ಧ ಕೇಸ್ ದಾಖಲಿಸಿದ್ದಾನೆ. ಕೂಡಲೇ ಪೊಲೀಸರು ಗ್ರಾಮಕ್ಕೆ ಭೇಟಿ ನೀಡಿ ಭೀಮಣ್ಣನನ್ನ ಬಂಧಿಸಿ ಠಾಣೆಗೆ ಕರೆದುಕೊಂಡು ಹೋಗಿದ್ದಾರೆ. ಠಾಣೆಗೆ ಕರೆದುಕೊಂಡು ಹೋಗಿ ವಿಚಾರಣೆ ನಡೆಸಿದಾಗ ಈ ಭೀಮಣ್ಣ ಎಂತಹ ಖತರ್ನಾಕ್ ಅಂತ ಬಯಲಾಗಿದ್ದು, ಪೊಲೀಸರೇ ಶಾಕ್ ಆಗಿದ್ದಾರೆ.
Advertisement
Advertisement
ಭೀಮಣ್ಣ ನಾಡ ಬಂದೂಕಿನಿಂದ ಶೂಟ್ ಮಾಡಿ ಕೊಲೆ ಮಾಡುವುದಾಗಿ ಕುಟುಂಬಸ್ಥರಿಗೆ ಬೆದರಿಕೆ ಹಾಕಿದ್ದಾನೆ. ಕೂಡಲೇ ಸ್ಥಳೀಯರು ಬಂದು ಜಗಳ ಬಿಡಿಸುತ್ತಿದ್ದ ಹಾಗೆ ಭೀಮಣ್ಣ ಬಂದೂಕು ಬೇರೆ ಕಡೆ ಬಿಸಾಡಿ ಸ್ಥಳದಿಂದ ಓಡಿ ಹೋಗಿದ್ದ. ಇತ್ತ ಪೊಲೀಸರು ಭೀಮಣ್ಣನನ್ನ ವಿಚಾರಣೆ ಮಾಡುವ ವೇಳೆ ಹೊಸ ಸತ್ಯ ಬಯಲಾಗಿದೆ. ಈ ಭೀಮಣ್ಣ ನೋಡಲು ಅಮಾಯಕನ ತರ ಕಂಡ್ರು ಸಹ ಸ್ವತಃ ತಾನೇ ನಾಡಬಂದೂಕುಗಳನ್ನ ತಯಾರು ಮಾಡುತ್ತಿದ್ದ ಎನ್ನೋದು ಪೊಲೀಸರಿಗೆ ಗೊತ್ತಾಗಿದೆ. ಸ್ಥಳೀಯವಾಗಿ ಸಿಗುವ ಕಚ್ಚಾ ವಸ್ತುಗಳಿಂದ ಮದ್ದು ತಯಾರಿಸುತ್ತಿದ್ದ. ಜೊತೆಗೆ ಬಾಗಲಕೋಟೆ ಜಿಲ್ಲೆಯ ಮುಧೋಳ್ ಪಟ್ಟಣದ ದೇವಲಾ ಎಂಬಾತನಿಂದ ಬಂದೂಕು ತಯಾರಿಸಲು ಬೇಕಾದ ವಸ್ತುಗಳನ್ನ ಖರೀದಿ ಮಾಡಿಕೊಂಡು ಬರುತ್ತಿದ್ದ. ಗ್ರಾಮದ ಹೊರ ಭಾಗದ ಬೆಟ್ಟದಲ್ಲಿ ಕುಳಿತುಕೊಂಡು ಸಿಂಗಲ್ ಬ್ಯಾರಲ್ ನ ನಾಡಾ ಬಂದೂಕು ತಯಾರು ಮಾಡುವ ಕೆಲಸ ಮಾಡ್ತಾಯಿದ್ದ ಅಂತ ಪೊಲೀಸರ ವಿಚಾರಣೆ ವೇಳೆ ಗೊತ್ತಾಗಿದೆ.
Advertisement
Advertisement
ಬೆಟ್ಟದಲ್ಲಿ ಕುಳಿತುಕೊಂಡು ಬಂದೂಕು ತಯಾರು ಮಾಡಿ 25 ರಿಂದ 30 ಸಾವಿರಕ್ಕೆ ಒಂದು ಬಂದೂಕು ಮಾರಾಟ ಮಾಡಲು ಪ್ಲಾನ್ ಕೂಡ ಮಾಡಿಕೊಂಡಿದ್ದ ಅಂತ ಹೇಳಲಾಗುತ್ತಿದೆ. ಇದೇ ಗ್ರಾಮದ ಮಲ್ಲಿಕಾರ್ಜುನ್ ಎಂಬ ಕುರಿಗಾಯಿಗೆ ಈ ಭೀಮಣ್ಣ ತಾನು ತಯಾರು ಮಾಡಿದ ಬಂದೂಕು ಮಾರಾಟ ಮಾಡಿದ್ದ. ಹೀಗಾಗಿ ವಿಚಾರಣೆ ವೇಳೆ ಮಲ್ಲಿಕಾರ್ಜುನ್ ಗೆ ಮಾರಾಟ ಮಾಡಿರುವ ಬಗ್ಗೆ ಹೇಳಿದ್ದರಿಂದ ಪೊಲೀಸರು ಬಂದೂಕಿನ ಸಮೇತವಾಗಿ ಮಲ್ಲಿಕಾರ್ಜುನ್ ನನ್ನು ಸಹ ಅರೆಸ್ಟ್ ಮಾಡಿದ್ದಾರೆ. ಕೇಸ್ ದಾಖಲಾದ ಬಳಿಕ ಓಡಿ ಹೋಗಿ ಇದೇ ಬೆಟ್ಟದಲ್ಲಿ ಭೀಮಣ್ಣ ಅಡಗಿಕೊಂಡು ಕುಳಿತುಕೊಂಡಿದ್ದ. ಪೊಲೀಸರು ಭೀಮಣ್ಣನನ್ನ ಬಂಧಿಸಿ ಎರಡು ಸಿಂಗಲ್ ಬ್ಯಾರಲ್ ನ ನಾಡ ಬಂದೂಕುಗಳನ್ನ ವಶಕ್ಕೆ ಪಡೆದಿದ್ದಾರೆ.
ಬಡ ಕುಟುಂಬ, ನಿತ್ಯ ದುಡಿದ್ರೆ ಮಾತ್ರ ಮನೆಯಲ್ಲಿ ಒಲೆ ಉರಿಯುತ್ತೆ. ಹೀಗಾಗಿ ಸಾಲ ಆಗಿದೆ ಅಂತ ಸಾಲ ತೀರಿಸಲು ಹೇಳಿದ್ರೆ ಈ ಭೀಮಣ್ಣ ಬಂದೂಕು ತೋರಿಸಿ ಕುಟುಂಬಸ್ಥರಿಗೆ ಬೆದರಿಗೆ ಹಾಕಿ ಹೊಸ ಕೇಸ್ ನಲ್ಲಿ ಅಂದರ್ ಆಗಿದ್ದಾನೆ. ಆದ್ರೆ ಪೊಲೀಸರು ಈ ಕೇಸ್ ಇಷ್ಟಕ್ಕೆ ಬಿಡದೆ ಬಂದೂಕು ತಯಾರಿ ಮಾಡುವುದರ ಹಿಂದೆ ಯಾರಿದ್ದಾರೆ ಅಂತ ಸತ್ಯ ಬಯಲಿಗೆಳೆಯಬೇಕಾಗಿದೆ.
Web Stories