ಮಂಗಳೂರು: ಡಿಸೆಂಬರ್ 19 ರಂದು ಪೌರತ್ವ ಮಸೂದೆಯನ್ನು ವಿರೋಧಿಸಿ ಮಂಗಳೂರಿನಲ್ಲಿ ನಡೆದ ಪ್ರತಿಭಟನೆ ಹಿಂಸಾಚಾರದ ರೂಪ ಪಡೆದು, ಬಳಿಕ ಗೋಲಿಬಾರ್ ನಡೆದು ಇಬ್ಬರು ಸಾವನ್ನಪ್ಪಿದ್ದರು. ಗಲಭೆ ಹೆಚ್ಚಾಗಬಹುದೆಂದು ಎಚ್ಚೆತ್ತ ಪೊಲೀಸರು ಎರಡು ದಿನಗಳ ಕಾಲ ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಇಂಟರ್ ನೆಟ್ ಸೇವೆ ಸ್ಥಗಿತಗೊಳಿಸಿದ್ದರು. ಆದರೆ ಯಾವಾಗ ಇಂಟರ್ ನೆಟ್ ಮರು ಸಂಪರ್ಕ ಆರಂಭಗೊಂಡಿತೋ ಅಂದಿನಿಂದ ಕೆಲ ದುಷ್ಕರ್ಮಿಗಳು ಸಾಮಾಜಿಕ ಜಾಲತಾಣದಲ್ಲಿ ಪ್ರಚೋದನಕಾರಿ ಪೋಸ್ಟ್ ಗಳನ್ನು ಹಾಕಲಾರಂಭಿಸಿದ್ದರು. ಪೊಲೀಸರು ಎಷ್ಟೇ ಎಚ್ಚರಿಸಿದರೂ ಕೆಲವರು ಮತ್ತೆ ಮತ್ತೆ ಪೋಸ್ಟ್ ಗಳನ್ನು ಹಾಕುತ್ತಲೇ ಇದ್ದರು. ಕೆಲವರನ್ನು ಪೊಲೀಸರು ದಾಖಲೆ ಸಮೇತ ಬಂಧಿಸಿ ಜೈಲಿಗಟ್ಟಿದ್ದಾರೆ.
ಇದೀಗ ಮತ್ತೋರ್ವ ಪೊಲೀಸ್ ಬಲೆಗೆ ಬಿದ್ದಿದ್ದಾನೆ. ಮಂಗಳೂರಿನ ಉಳ್ಳಾಲದ ನಿವಾಸಿ ಅಬೂಬಕ್ಕರ್ ಸಿದ್ದಿಕ್ ಯಾನೆ ಜಲ್ಲಿ ಸಿದ್ದಿಕ್ ಬಂಧಿತ ಆರೋಪಿ. ಈತ ಮಂಗಳೂರು ಗಲಭೆಯ ಬಳಿಕ ಸಾಮಾಜಿಕ ಜಾಲತಾಣದಲ್ಲಿ ಪ್ರಚೋದನಕಾರಿ ಪೋಸ್ಟ್ ಗಳನ್ನು ಹಾಕುತ್ತಿದ್ದನು. ಮಾತ್ರವಲ್ಲ ಸಿರಿಯಾ ಹಾಗೂ ಅಫ್ಘಾನಿಸ್ತಾನದ ಹಿಂಸಾ ದೃಶ್ಯಗಳನ್ನು ಮಂಗಳೂರಿನ ಹಿಂಸಾ ದೃಶ್ಯವೆಂದು ಪೋಸ್ಟ್ ಮಾಡಿ ಅದಕ್ಕೆ ಪ್ರಚೋದನಕಾರಿ ಬರಹಗಳನ್ನು ಹಾಕುತ್ತಿದ್ದನು. ಇದನ್ನು ಗಮನಿಸಿದ್ದ ಸೈಬರ್ ಕ್ರೈಂ ವಿಭಾಗದ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿ ಸಿದ್ದಿಕ್ ನನ್ನು ಬಂಧಿಸಿದ್ದಾರೆ.
Advertisement
ಕೆಲ ದುಷ್ಕರ್ಮಿಗಳು ಪ್ರಚೋದನಕಾರಿ, ಕೋಮುದ್ವೇಷವನ್ನು ಹರಡುವ ಪೋಸ್ಟ್ ಗಳನ್ನು ಹಾಕುತ್ತಿದ್ದು ಪೊಲೀಸರು ಅಂತವರ ಮೇಲೂ ಹದ್ದಿನ ಕಣ್ಣು ಇಟ್ಟಿದ್ದಾರೆ. ಯಾರೂ ಪ್ರಚೋದನಕಾರಿ ಪೋಸ್ಟ್ ಗಳನ್ನು ಹಾಕಬೇಡಿ ಎಂದು ಪೊಲೀಸರು ವಿನಂತಿಸಿಕೊಂಡಿದ್ದಾರೆ.
Advertisement