ಬೆಂಗಳೂರು: 2 ವರ್ಷದ ಹೆಣ್ಣು ಮಗುವಿನ ಮೇಲೆ ತನ್ನ ದೊಡ್ಡಪ್ಪನೇ ಅತ್ಯಾಚಾರ ಎಸಗಿದ್ದು, ತೀವ್ರ ರಕ್ತಸ್ರಾವದಿಂದ ಮಗು ಮೃತಪಟ್ಟಿರುವ ಘಟನೆ ಆನೆಕಲ್ ತಾಲೂಕಿನಲ್ಲಿ ನಡೆದಿದೆ. ಆರೋಪಿಯನ್ನು ದೀಪು ಎಂದು ಗುರುತಿಸಲಾಗಿದ್ದು, ಸದ್ಯ ಈತನನ್ನು ಪೊಲೀಸರು ಬಂಧಿಸಿದ್ದಾರೆ.
ಏನಿದು ಘಟನೆ?
ದೀಪು ಕಳೆದ 10 ದಿನಗಳ ಹಿಂದೆ ದೊಡ್ಡಬಳ್ಳಾಪುರದಿಂದ ತನ್ನ ತಮ್ಮನ 2 ವರ್ಷದ ಹೆಣ್ಣುಮಗಳನ್ನು ಊರಿನಿಂದ ಅತ್ತಿಬೆಲೆಗೆ ಕರೆತಂದಿದ್ದ. ಅಂತೆಯೇ ಒಂದು ದಿನ ನೆರಳೂರು ಗೇಟ್ ಬಳಿ ಚಿಕನ್ ತರಲು ಸ್ನೇಹಿತನ ಜೊತೆಗೂಡಿ ಮಗುವನ್ನೂ ಕರೆದೊಯ್ದಿದ್ದ. ಮಾರ್ಗಮಧ್ಯದಲ್ಲಿ ಸ್ನೇಹಿತನನ್ನು ಮದ್ಯ ತರಲು ಕಳುಹಿಸಿದ್ದಾನೆ. ಇದೇ ವೇಳೆ ಕಾರಿನಲ್ಲೇ ಮಗುವಿನ ಮೇಲೆ ಅತ್ಯಾಚಾರ ಎಸಗಿದ್ದಾನೆ. ಈ ಪೈಶಾಚಿಕ ಕೃತ್ಯದಿಂದ ನಲುಗಿದ್ದ ಮಗುವಿನ ಗುಪ್ತಾಂಗದಿಂದ ರಕ್ತಸ್ರಾವವಾಗಿ ಸ್ಥಳದಲ್ಲೇ ಮೃತಪಟ್ಟಿದೆ. ಇದನ್ನೂ ಓದಿ: ಟ್ರಾನ್ಸ್‌ಫಾರ್ಮರ್ ಸ್ಫೋಟ- ಮೃತರ ಕುಟುಂಬಕ್ಕೆ 20 ಲಕ್ಷ ರೂ. ಪರಿಹಾರ ಘೋಷಿಸಿದ ಸುನೀಲ್ ಕುಮಾರ್
ಅತ್ಯಾಚಾರ ಎಸಗಿದ ಬಳಿಕ ಮಗು ಸ್ತಬ್ಧವಾಗಿದ್ದನ್ನು ಕಂಡು ಆತಂಕಗೊಂಡ ದೀಪು, ಅತ್ತಿಬೆಲೆಯ ಖಾಸಗಿ ಆಸ್ಪತ್ರೆಗಳಿಗೆ ಹೋಗಿ ಮಗುವಿನ ತಲೆಗೆ ಗಾಯ ಆಗಿದೆ ಎಂದು ಸುಳ್ಳು ಹೇಳಿ ಚಿಕಿತ್ಸೆ ಕೊಡಿಸಲು ಯತ್ನಿಸಿದ್ದಾನೆ. ಆದರೆ ಮಗು ಮೃತಪಟ್ಟಿತ್ತು. ನಂತರ ಸ್ಥಳೀಯ ಪೊಲೀಸ್ ಠಾಣೆಗೆ ತಾನೇ ಹೋಗಿ, ಹಠಾತ್ತನೆ ಕಾರಿನ ಬ್ರೇಕ್ ಹಾಕಿದ್ದರಿಂದ ಬಿದ್ದು ಮಗುವಿನ ತಲೆಗೆ ಪೆಟ್ಟಾಗಿ ಮೃತಪಟ್ಟಿದೆ ಎಂದು ದೂರು ದಾಖಲಿಸಿದ್ದ.
ಇತ್ತ ಈತನ ನಡವಳಿಕೆ ಬಗ್ಗೆ ಪೊಲೀಸರು ಅನುಮಾನಗೊಂಡಿದ್ದು, ಮಗುವಿನ ಮರಣೋತ್ತರ ಪರೀಕ್ಷೆಗೆ ಶಿಫಾರಸು ಮಾಡಿದ್ದರು. ಈಗ ಮಗುವಿನ ಮರಣೋತ್ತರ ಪರೀಕ್ಷೆ ವರದಿ ಬಂದಿದ್ದು, ಮಗುವನ್ನು ಅತ್ಯಾಚಾರ ಮಾಡಿ, ಕೊಲೆ ಮಾಡಲಾಗಿದೆ ಎಂಬುದು ಸ್ಪಷ್ಟವಾಗಿದೆ. ಆರೋಪಿ ದೀಪು ಎಂಬಾತನನ್ನು ಪೊಲೀಸರು ಪೋಕ್ಸೋ ಕಾಯ್ದೆಯಡಿ ಬಂಧಿಸಿದ್ದಾರೆ.