ಭೋಪಾಲ್: ಮಹಿಳೆಯೊಬ್ಬರ ಮದುವೆ ತಪ್ಪಿಸಲು ನಕಲಿ ಫೇಸ್ಬುಕ್ ಖಾತೆ ತೆರೆದು, ಅಸಭ್ಯವಾಗಿ ಕಮೆಂಟ್ ಮಾಡುತ್ತಾ, ಮಹಿಳೆಯ ವ್ಯಂಗ್ಯ ಚಿತ್ರ ಪೋಸ್ಟ್ ಮಾಡುತ್ತಿದ್ದ ಯುವಕನನ್ನು ಪೊಲೀಸರು ಬಂಧಿಸಿದ್ದಾರೆ.
ಪ್ರಶಾಂತ್ ರಾಜಕ್(22) ಬಂಧನಕ್ಕೊಳಗಾದ ಆರೋಪಿ. ಈತ ತನಗೆ ಪರಿಚಯವಿದ್ದ 26 ವರ್ಷದ ಮಹಿಳೆಯ ಮದುವೆ ತಪ್ಪಿಸಲು ಆಕೆಯ ಹೆಸರಿನಲ್ಲಿ ನಕಲಿ ಖಾತೆ ತೆರೆದು ಈಗ ಪೊಲೀಸರ ಅತಿಥಿಯಾಗಿದ್ದಾನೆ. ಮಹಿಳೆ ಪ್ರಶಾಂತ್ ಬಳಿ ತನಗೆ ಮದುವೆ ನಿಶ್ಚಯವಾಗಿರುವ ಬಗ್ಗೆ ಹೇಳಿದ್ದಳು. ಈ ಬಗ್ಗೆ ತಿಳಿದ ಬಳಿಕ ಪ್ರಶಾಂತ್ ಆಕೆಯ ಮದುವೆ ತಪ್ಪಿಸಲು ಪ್ರಯತ್ನಿಸಿದ್ದಾನೆ. ಆಕೆಯ ಹೆಸರಿನಲ್ಲಿ ನಕಲಿ ಫೇಸ್ಬುಕ್ ಖಾತೆ ತೆರೆದು, ಅದರಲ್ಲಿ ಮಹಿಳೆಯ ವ್ಯಂಗ್ಯಚಿತ್ರಗಳನ್ನು ಅಪ್ಲೋಡ್ ಮಾಡಿದ್ದಾನೆ.
ಅಷ್ಟೇ ಅಲ್ಲದೆ ನಕಲಿ ಖಾತೆಯಿಂದ ಅನೇಕರ ಪೋಸ್ಟ್ ಗೆ ಅಸಭ್ಯವಾಗಿ ಕಮೆಂಟ್ ಮಾಡಿದ್ದಾನೆ. ಈ ರೀತಿ ಮಾಡಿ ಮಹಿಳೆಯ ಬಗ್ಗೆ ಕೆಟ್ಟ ಅಭಿಪ್ರಾಯ ಉಂಟುಮಾಡಿದರೆ ಆಕೆಯ ಮದುವೆ ನಿಂತು ಹೋಗುತ್ತದೆ ಎಂದು ಆರೋಪಿ ಪ್ಲಾನ್ ಮಾಡಿದ್ದನು.
ತನ್ನ ಹೆಸರಿನಲ್ಲಿ ಹೀಗೆ ಕೆಟ್ಟ ಕೆಟ್ಟ ಕಮೆಂಟ್, ಪೋಸ್ಟ್ ಹಾಕುತ್ತಿದ್ದ ನಕಲಿ ಫೇಸ್ಬುಕ್ ಖಾತೆ ಬಗ್ಗೆ ಮಹಿಳೆಗೆ ತಿಳಿದಾಗ, ಪೊಲೀಸರಿಗೆ ದೂರು ನೀಡಿದ್ದಳು. ಈ ದೂರಿನ ಆಧಾರದ ಮೇಲೆ ಪೊಲೀಸರು ತನಿಖೆ ನಡೆಸಿದಾಗ ಆರೋಪಿಯ ನಿಜ ಬಣ್ಣ ಬಯಲಾಗಿದೆ. ಆತನನ್ನು ಪೊಲೀಸರು ಬಂಧಿಸಿ ವಿಚಾರಣೆ ನಡೆಸಿದಾಗ ನಕಲಿ ಖಾತೆ ತೆರೆಯಲು ಕಾರಣವೇನು ಎಂದು ಪೊಲೀಸರ ಬಳಿ ಆರೋಪಿ ಬಾಯಿಬಿಟ್ಟಿದ್ದಾನೆ.