ನವದೆಹಲಿ: 8 ವರ್ಷದ ಬಾಲಕಿ ಮೇಲೆ ಅತ್ಯಾಚಾರ ನಡೆಸಿದ ಕಾಮುಕನನ್ನು ಬಾಲಕಿಯ ಕುಟುಂಬಸ್ಥರು ಹಾಗೂ ಸ್ಥಳೀಯರು ಸೆರೆ ಹಿಡಿದು ಥಳಿಸಿ ಕೊಲೆ ಮಾಡಿರುವ ಘಟನೆ ಘಜಿಯಾಬಾದ್ ಚಾಮನ್ ವಿಹಾರ್ ಪ್ರದೇಶದಲ್ಲಿ ನಡೆಸಿದೆ.
ಜಿತೇಂದ್ರ ಕುಮಾರ್ ಸ್ಥಳೀಯರಿಂದ ಥಳಿತಕ್ಕೆ ಒಳಗಾಗಿ ಮೃತಪಟ್ಟ ಕಾಮುಕ. ಈತ ಹಳೆಯ ವಸ್ತುಗಳ ವ್ಯಾಪಾರ ನಡೆಸುತ್ತಿದ್ದ. ಶುಕ್ರವಾರ ಸಂಜೆ ನೆರೆ ಮನೆಯ ಬಾಲಕಿಯನ್ನು ಸ್ಥಳೀಯ ಧಾರ್ಮಿಕ ಕಾರ್ಯಕ್ರಮಕ್ಕೆ ಹೋಗುವುದಾಗಿ ತಿಳಿಸಿ ಕರೆದುಕೊಂಡು ಹೋಗಿದ್ದ. ಆದರೆ ಕಾರ್ಯಕ್ರಮ ಮುಗಿದ ಬಳಿಕ ಬಾಲಕಿಯನ್ನು ಬೇರೆಡೆ ಕರೆದುಕೊಂಡು ಹೋಗಿ ಅತ್ಯಾಚಾರ ನಡೆಸಿದ್ದ. ಅಲ್ಲದೇ ತನ್ನ ಕೃತ್ಯದ ಕುರಿತು ಪೋಷಕರಿಗೆ ಹೇಳಿದರೆ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದ.
ಬಾಲಕಿ ಮನೆಗೆ ಬಂದ ಬಳಿಕ ತನ್ನ ಮೇಲೆ ನಡೆದ ಅತ್ಯಾಚಾರದ ಕುರಿತು ಪೋಷಕರಿಗೆ ಮಾಹಿತಿ ನೀಡಿದ್ದಾಳೆ. ಮಾಹಿತಿ ತಿಳಿದ ತಕ್ಷಣ ಬಾಲಕಿಯ ಸಹೋದರ ಹಾಗೂ ಸ್ಥಳೀಯರು ಆತನ್ನು ಹಿಡಿದು ಥಳಿಸಿದ್ದಾರೆ.
ಬಾಲಕಿಯ ತಂದೆ ಘಟನೆ ಕುರಿತು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಮಾಹಿತಿ ಪಡೆದು ಸ್ಥಳಕ್ಕೆ ಆಗಮಿಸಿದ ಪೊಲೀಸರು ಹಿಗ್ಗಾಮುಗ್ಗ ಥಳಿಸಿಕೊಂಡಿದ್ದ ಆತನನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಈ ವೇಳೆ ಕಾಮುಕ ಜಿತೇಂದ್ರ ಮೃತಪಟ್ಟಿದ್ದಾನೆ. ಸದ್ಯ ಬಾಲಕಿಯನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗಿದೆ. ಘಟನೆಯ ಸಂಬಂಧ ಬಾಲಕಿಯ ಸಹೋದರ ಸೇರಿ ನಾಲ್ವರನ್ನು ವಶಕ್ಕೆ ಪಡೆದಿದ್ದು, ಮತ್ತಿಬ್ಬರಿಗಾಗಿ ಶೋಧ ನಡೆಸುತ್ತಿರುವುದಾಗಿ ಪೊಲೀಸರು ತಿಳಿಸಿದ್ದಾರೆ.