ನವದೆಹಲಿ: ಏಳನೇ ತರಗತಿ ವಿದ್ಯಾರ್ಥಿನಿಯೊಬ್ಬಳು ಆತ್ಮಹತ್ಯೆ ಮಾಡಿಕೊಂಡ ಘಟನೆ ನವದೆಹಲಿಯ ಇಂದೇರ್ ಪುರಿ ಎಂಬಲ್ಲಿ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ.
ಡಿಸೆಂಬರ್ 1 ರಂದು ಸಂಜೆ 3 ಗಂಟೆ ಸುಮಾರಿಗೆ ಬಾಲಕಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. 12 ವರ್ಷದ ಬಾಲಕಿ ಮನೆಯ ಕೋಣೆಯಲ್ಲಿ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಆಕೆಯ ಸಾವಿಗೆ ಶಾಲೆಯ ಶಿಕ್ಷಕರೇ ಕಾರಣ ಅಂತ ಬಾಲಕಿ ತಾಯಿ ನೇರವಾಗಿ ಆರೋಪಿಸಿರುವುದಾಗಿ ಪೊಲೀಸ್ ಉಪ ಆಯುಕ್ತ ಸಮೀರ್ ಶರ್ಮಾ ತಿಳಿಸಿದ್ದಾರೆ.
Advertisement
ಆತ್ಮಹತ್ಯೆಗೂ ಮುನ್ನ ಬಾಲಕಿ ತನ್ನ ಕೈಯಲ್ಲಿ, “ಅಮ್ಮ.. ಐ ಲವ್ ಯೂ.. ನಾನು ಈ ಜಗತ್ತನ್ನೇ ಬಿಟ್ಟು ಹೋಗುತ್ತಿದ್ದೇನೆ” ಅಂತ ಬರೆದುಕೊಂಡಿದ್ದಾಳೆ. ಬಾಲಕಿಗೆ ಶಾಲೆಯಲ್ಲಿ ಟೀಚರ್ ಬೈದಿದ್ದಾರೆ. ಇದರಿಂದ ಆಕೆ ಮನನೊಂದಿದ್ದಳು ಅಂತ ತಾಯಿ ಆರೋಪಿಸಿದ್ದು, ಸದ್ಯ ತಾಯಿಯ ಹೇಳಿಕೆಯ ಕುರಿತು ತನಿಖೆ ನಡೆಸುತ್ತಿರುವುದಾಗಿ ಅಂತ ಶರ್ಮಾ ಹೇಳಿದ್ದಾರೆ.
Advertisement
Advertisement
ಬಾಲಕಿಯ ತಾಯಿ ತೀಸ್ ಹಜಾರಿ ಕೋರ್ಟ್ ನಲ್ಲಿ ವಕೀಲೆಯಾಗಿದ್ದು, ಕೆಲಸಕ್ಕೆ ಹೋಗುವ ಮೊದಲೇ ನಾನು ಆಕೆಯನ್ನು ಕೊನೆಯ ಬಾರಿ ಜೀವಂತವಾಗಿ ನೋಡಿದ್ದೆ. ಸಂಜೆ 4 ಗಂಟೆ ಸುಮಾರಿಗೆ ನಾನು ಮನೆಗೆ ವಾಪಸ್ ಬಂದು ನೋಡಿದಾಗ ಆಕೆ ಶವವಾಗಿದ್ದಳು ಅಂತ ತಾಯಿ ಹೇಳಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
Advertisement
ಶಾಲೆಯಲ್ಲಿ ಶಿಕ್ಷಕರಿಂದಾಗಿ ನಾನು ಅವಮಾನಿತಳಾಗಿದ್ದೇನೆ ಅಂತ ಆಕೆ ನನ್ನ ಬಳಿ ದೂರಿದ್ದಳು. ನನ್ನ ಮಗಳು ಯಾವ ಟೀಚರ್ ವಿರುದ್ಧ ದೂರು ನೀಡಿದ್ದಳೋ, ಆ ಟೀಚರ್ ಪ್ರತೀ ನಿತ್ಯ ಆಕೆಯನ್ನು ಅವಮಾನಿಸುತ್ತಿದ್ದರಂತೆ. ಅಲ್ಲದೇ ಶುಕ್ರವಾರವೂ ಕೂಡ ಬಯೋಲಾಜಿ ಲ್ಯಾಬ್ ನಲ್ಲಿ ಸುಮಾರು 10 ನಿಮಿಷಗಳ ಕಾಲ ಇತರ ವಿದ್ಯಾರ್ಥಿಗಳ ಮುಂದೆ ಅವಮಾನ ಮಾಡಿದ್ದರಂತೆ. ಇದರಿಂದ ಬೇಸರಗೊಂಡ ಆಕೆ ಶಾಲೆಯ ಬಾತ್ ರೂಮಿನಲ್ಲಿ ಹೋಗಿ ಅತ್ತಿದ್ದಾಳೆ ಅಂತ ಬಾಲಕಿ ಹೇಳಿರುವುದಾಗಿ ತಾಯಿ ಪೊಲೀಸರಿಗೆ ತಿಳಿಸಿದ್ದಾರೆ.
ಆಕೆ ಹಲವು ಬಾರಿ ಶಾಲೆ ಬದಲಾವಣೆ ಮಾಡುವಂತೆ ನನಗೆ ಒತ್ತಾಯಿಸಿದ್ದಳು. ಆದ್ರೆ ನಾನು, ಇವತ್ತೋ ನಾಳೆಯೋ ಸರಿಹೋಗಬಹುದೆಂದು ಸುಮ್ಮನಾಗಿದ್ದೆ. ಅಲ್ಲದೇ ಈ ವಿಚಾರ ಇಷ್ಟೊಂದು ಮುಂದುವರಿದು, ಆಕೆ ಆತ್ಮಹತ್ಯೆ ಮಾಡಿಕೊಳ್ಳುವ ಯೋಚನೆ ಮಾಡುತ್ತಾಳೆ ಅಂತ ಅಂದುಕೊಂಡಿರಲಿಲ್ಲ ಅಂತ ತಾಯಿ ತನ್ನ ಅಳಲು ತೋಡಿಕೊಂಡಿದ್ದಾರೆ.
ಹುಟ್ಟುಹಬ್ಬಕ್ಕೆ ಮಗಳೇ ಇಲ್ಲ:
ಡಿಸೆಂಬರ್ 20ರಂದು ಆಕೆಯ ಹುಟ್ಟುಹಬ್ಬವಾಗಿದ್ದು, ಆಕೆಯನ್ನು ಹೊರಗಡೆ ಕರೆದುಕೊಂಡು ಹೋಗಿ ಬರ್ತ್ ಡೇಯನ್ನು ಅದ್ಧೂರಿಯಾಗಿ ಆಚರಣೆ ಮಾಡಬೇಕು ಅಂತ ಯೋಚನೆ ಮಾಡಿದ್ದೆನು. ಆದ್ರೆ ಇದೀಗ ಆಕೆಯೇ ನಮ್ಮನ್ನ ಬಿಟ್ಟು ಹೋಗಿದ್ದಾಳೆ. ಆಕೆ ಒತ್ತಾಯಿಸುವಾಗಲೇ ನಾನು ಅರ್ಥಮಾಡಿಕೊಂಡು ಆಕೆಯನ್ನು ಬೇರೆ ಶಾಲೆಗೆ ಕಳುಹಿಸಬೇಕಿತ್ತು. ನಾನು ತಪ್ಪು ಮಾಡಿದೆ ಅಂತ ತಾಯಿ ಕಣ್ಣೀರು ಹಾಕಿದ್ದಾರೆ.
ಸದ್ಯ ಶಾಲೆಯ ಆಡಳಿತ ಮಂಡಳಿ ಈ ಬಗ್ಗೆ ತನಿಖೆ ನಡೆಸಿ ವರದಿಯನ್ನು ದೆಹಲಿ ಪೊಲೀಸರಿಗೆ ಸಲ್ಲಿಸಲಿದೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv