ಕೋಲ್ಕತ್ತಾ: ಶಿಕ್ಷಕರಿಂದ (Teachers) ಮಾತ್ರವಲ್ಲ ಯಾವುದೇ ಸರ್ಕಾರಿ ನೌಕರರಿಂದ ಬಿಜೆಪಿಗೆ ಒಂದೇ ಒಂದು ವೋಟು ಪಶ್ಚಿಮ ಬಂಗಾಳದಲ್ಲಿ ಬೀಳಲ್ಲ ಎಂದು ಸಿಎಂ ಮಮತಾ ಬ್ಯಾನರ್ಜಿ (Mamata Banerjee) ವಾಗ್ದಾಳಿ ನಡೆಸಿದ್ದಾರೆ.
ಮಹತ್ವದ ಬೆಳವಣಿಗೆಯೊಂದರಲ್ಲಿ ಪಶ್ಚಿಮ ಬಂಗಾಳದ (West Bengal) ಸರ್ಕಾರಿ ಮತ್ತು ಅನುದಾನಿತ ಶಾಲೆಗಳಿಗೆ ನೇಮಕಾತಿಗೆ ನಡೆದಿದ್ದ ರಾಜ್ಯ ಮಟ್ಟದ ಆಯ್ಕೆ ಪರೀಕ್ಷೆ-2016 (SLST) ಅನ್ನು ಅನೂರ್ಜಿತಗೊಳಿಸಿ ಕೋಲ್ಕತ್ತಾ ಹೈಕೋರ್ಟ್ ಇತ್ತೀಚೆಗೆ ಆದೇಶ ಹೊರಡಿಸಿತ್ತು. ಅಲ್ಲದೇ ಈ ಮೂಲಕ ಆಯ್ಕೆ ಮಾಡಲಾದ 25,753 ಶಿಕ್ಷಕರ ಹುದ್ದೆಯನ್ನು ವಜಾಗೊಳಿಸುವಂತೆ ಆದೇಶಿಸಿತು.
ಇದಕ್ಕೆ ಪ್ರತಿಕ್ರಿಯಿಸಿ ಮಾತನಾಡಿರುವ ಮಮತಾ ಬ್ಯಾನರ್ಜಿ, 26,000 ಶಿಕ್ಷಕರನ್ನ ವಜಾಗೊಳಿಸಿದ್ದು, ಚುನಾವಣಾ ತಂತ್ರಗಾರಿಕೆಯ ಭಾಗ. ಪಶ್ಮಿಮ ಬಂಗಾಳದಲ್ಲಿ ಈ ಬಾರಿ ಶಿಕ್ಷಕರು ಮಾತ್ರವಲ್ಲ ಯಾವುದೇ ಸರ್ಕಾರಿ ನೌಕರರಿಂದಲೂ ಬಿಜೆಪಿ, ಕಾಂಗ್ರೆಸ್, ಸಿಪಿಎಂ ಪಕ್ಷಗಳಿಗೆ ಒಂದೇ ಒಂದು ವೋಟು ಬೀಳಲ್ಲ. ಬಿಜೆಪಿ ನ್ಯಾಯಾಲಯವನ್ನು ಖರೀದಿಸಿದೆ. ಆದ್ರೆ ನನಗೆ ಸುಪ್ರೀಂ ಕೋರ್ಟ್‌ನಿಂದ ನ್ಯಾಯ ಸಿಗುತ್ತದೆ ಎಂಬ ವಿಶ್ವಾಸ ವಿದೆ ಎಂದು ಹೇಳಿದ್ದಾರೆ.
ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಕೋರ್ಟ್, ಸಿಬಿಐ, ಎನ್‌ಐಎ, ಬಿಎಸ್‌ಎಫ್ ಸೇರಿದಂತೆ ಮೊದಲಾದ ತನಿಖಾ ಸಂಸ್ಥೆಗಳನ್ನು ತನ್ನ ಅಧೀನದಲ್ಲಿಟುಕೊಂಡಿದೆ. ಇದು ಬಹಳ ದಿನ ನಡೆಯಲ್ಲ ಎಂದು ಕಿಡಿ ಕಾರಿದ್ದಾರೆ.
ಏನಿದು ಕೇಸ್?
ಪಶ್ಚಿಮ ಬಂಗಾಳದ ಸರ್ಕಾರಿ ಮತ್ತು ಅನುದಾನಿತ ಶಾಲೆಗಳಿಗೆ ನೇಮಕಾತಿಗೆ ನಡೆದಿದ್ದ ರಾಜ್ಯ ಮಟ್ಟದ ಆಯ್ಕೆ ಪರೀಕ್ಷೆ-2016 (SLST) ಅನ್ನು ಅನೂರ್ಜಿತಗೊಳಿಸಿ ಕೋಲ್ಕತ್ತಾ ಹೈಕೋರ್ಟ್ (Calcutta High Court) ಇತ್ತೀಚೆಗಷ್ಟೇ ಆದೇಶಿಸಿತ್ತು. ಅಷ್ಟೇ ಅಲ್ಲ, ಈ ಮೂಲಕ ಮಾಡಲಾದ ಎಲ್ಲಾ ನೇಮಕಾತಿಗಳನ್ನು ರದ್ದುಗೊಳಿಸುವಂತೆ ಆದೇಶಿಸಿದ್ದ ಕೋರ್ಟ್ ಕಾನೂನು ಬಾಹಿರವಾಗಿ ನೇಮಕಗೊಂಡ ಶಾಲಾ ಶಿಕ್ಷಕರು (Teachers Recruitment) 4 ವಾರಗಳಲ್ಲಿ ತಮ್ಮ ವೇತನ ಹಿಂದಿರುಗಿಸಬೇಕು ಎಂದೂ ಹೇಳಿದೆ. ಶಿಕ್ಷಕರಿಂದ ಹಣ ವಸೂಲಿ ಮಾಡುವ ಜವಾಬ್ದಾರಿಯನ್ನು ಆಯಾ ಜಿಲ್ಲಾ ವ್ಯಾಪ್ತಿಯ ಜಿಲ್ಲಾಧಿಕಾರಿಗಳಿಗೆ ಕೋರ್ಟ್ ವಹಿಸಿದೆ. ಇದರಿಂದ ಮಮತಾ ಬ್ಯಾನರ್ಜಿ ಸರ್ಕಾರಕ್ಕೆ (Mamata Banerjee Govt.) ದೊಡ್ಡ ಹಿನ್ನಡೆಯಾಗಿತ್ತು.
ಶಿಕ್ಷಕರ ನೇಮಕಾತಿ ನಡೆದಿದ್ದು ಹೇಗೆ?
ಈ ಹಿಂದೆ 24,640 ಖಾಲಿ ಹುದ್ದೆಗಳಿಗೆ 23 ಲಕ್ಷ ಅಭ್ಯರ್ಥಿಗಳು SLST-2016 ಪರೀಕ್ಷೆ ಬರೆದಿದ್ದರು. ಆದ್ರೆ ಸರ್ಕಾರ 24,640 ಖಾಲಿ ಹುದ್ದೆಗಳಿಗೆ ಒಟ್ಟು 25,753 ನೇಮಕಾತಿ ಪತ್ರಗಳನ್ನು ನೀಡಲಾಗಿತ್ತು ಎಂದು ಅರ್ಜಿದಾರರ ಪರ ವಕೀಲ ಫಿರ್ದೌಸ್ ಶಮೀಮ್ ಆರೋಪಿಸಿದ್ದರು. ಈ ಅರ್ಜಿಯನ್ನು ಕೋರ್ಟ್ ವಿಚಾರಣೆ ನಡೆಸಿ, ನೇಮಕಾತಿಯನ್ನು ರದ್ದುಪಡಿಸಿತು.
ಪ್ರಕರಣ ಸಂಬಂಧ ವಿಚಾರಣೆ ನಡೆಸಲು ಸುಪ್ರೀಂ ಕೋರ್ಟ್ ನಿರ್ದೇಶನದ ಮೇರೆಗೆ ಕೋಲ್ಕತ್ತಾ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಗಳು ವಿಭಾಗೀಯ ಪೀಠವನ್ನು ರಚಿಸಿದ್ದರು. 9, 10, 11, 12ನೇ ತರಗತಿಯ ಶಿಕ್ಷಕರು ಸಿ, ಡಿ ದರ್ಜೆ ಸಿಬ್ಬಂದಿ ನೇಮಕಾತಿಗೆ ಸಂಬಂಧಿಸಿದ 2016 ಎಎಲ್‌ಎಸ್‌ಟಿ ನೇಮಕಾತಿ ಬಗ್ಗೆ ನ್ಯಾಯಪೀಠ ಬಹಳಷ್ಟು ಅರ್ಜಿಗಳು ಮತ್ತು ಮನವಿಗಳನ್ನು ಆಲಿಸಿತ್ತು. ಸದ್ಯ ಕೋಲ್ಕತ್ತಾ ಕೋರ್ಟ್ ಆದೇಶ ಪ್ರಶ್ನಿಸಿ ಮಮತಾ ಬ್ಯಾನರ್ಜಿ ಸರ್ಕಾರ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದೆ.
2019ರ ಚುನಾವಣೆಯಲ್ಲಿ 42 ಸ್ಥಾನಗಳ ಬಲಾ-ಬಲಾಯಿರುವ ಪಶ್ಚಿಮ ಬಂಗಾಳದಲ್ಲಿ ಬಿಜೆಪಿ 18 ಸ್ಥಾನಗಳಲ್ಲಿ ಗೆಲುವು ಕಂಡಿತ್ತು. ಈ ಬಾರಿ ಬಿಜೆಪಿ ಅಧಿಕ ಸ್ಥಾನಗಳನ್ನು ಗೆಲ್ಲುವ ಗುರಿ ಹೊಂದಿದೆ.