ಕೋಲ್ಕತ್ತಾ: ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ (Mamata Banerjee) ಅವರು, ಪೌರತ್ವ (ತಿದ್ದುಪಡಿ) ಕಾಯ್ದೆ (CAA), ರಾಷ್ಟ್ರೀಯ ನಾಗರಿಕರ ನೋಂದಣಿ (NRC) ಮತ್ತು ಏಕರೂಪ ನಾಗರಿಕ ಸಂಹಿತೆ (UCC)ಗೆ ವಿರೋಧವನ್ನು ಪುನರುಚ್ಚರಿಸಿದ್ದಾರೆ. ಚುನಾವಣಾ ಸಮಯದಲ್ಲಿ ಕೆಲವರ ಅಜೆಂಡಾಗಳ ಬಗ್ಗೆ ಜಾಗರೂಕರಾಗಿರಿ ಎಂದು ಮತದಾರರಿಗೆ ಎಚ್ಚರಿಕೆ ನೀಡಿದ್ದಾರೆ.
ಈದ್ ಪ್ರಾರ್ಥನೆಯಲ್ಲಿ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ದೇಶಕ್ಕಾಗಿ ರಕ್ತ ಸುರಿಸಲು ನಾವು ಸಿದ್ಧರಿದ್ದೇವೆ. ಆದರೆ ಹಿಂಸೆಯನ್ನು ಸಹಿಸುವುದಿಲ್ಲ. ಏಕರೂಪ ನಾಗರಿಕ ಸಂಹಿತೆ ಸ್ವೀಕಾರಾರ್ಹವಲ್ಲ. ನಾನು ಎಲ್ಲಾ ಧರ್ಮಗಳಲ್ಲಿ ಸಾಮರಸ್ಯವನ್ನು ಬಯಸುತ್ತೇನೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಜೈಲಿನಿಂದಲೇ ಬಿಆರ್‌ಎಸ್ ನಾಯಕಿಯನ್ನು ಬಂಧಿಸಿದ ಸಿಬಿಐ
ನಾವು ಸಿಎಎ, ಎನ್‌ಆರ್‌ಸಿ, ಯುಸಿಸಿಯನ್ನು ಒಪ್ಪಿಕೊಳ್ಳುವುದಿಲ್ಲ. ಚುನಾವಣೆ ಸಮಯದಲ್ಲಿ ಕೆಲವರು ಗಲಭೆ ಸೃಷ್ಟಿಸಲು ಬಯಸುತ್ತಿದ್ದಾರೆ. ಅವರ ಸಂಚಿಗೆ ಒಳಗಾಗಬೇಡಿ. ನಾವು ಒಗ್ಗಟ್ಟಿನಿಂದ ಇದ್ದರೆ, ಯಾರೂ ನಮಗೆ ತೊಂದರೆ ಕೊಡಲು ಸಾಧ್ಯವಿಲ್ಲ ಎಂದು ಮತದಾರರನ್ನು ಎಚ್ಚರಿಸಿದ್ದಾರೆ.
ಬ್ಯಾನರ್ಜಿ ಅವರು ಈ ಹಿಂದೆ ರಾಜ್ಯದಲ್ಲಿ ಸಿಎಎ ಜಾರಿಗೊಳಿಸುವುದರ ವಿರುದ್ಧ ಪ್ರತಿಜ್ಞೆ ಮಾಡಿದ್ದರು. ಸಿಎಎ ವಿಚಾರವಾಗಿ ತೃಣಮೂಲ ಕಾಂಗ್ರೆಸ್ ಸೇರಿದಂತೆ ಅನೇಕ ವಿಪಕ್ಷಗಳು ಜನರಿಗೆ ತಪ್ಪು ಸಂದೇಶ ರವಾನಿಸುತ್ತಿವೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ವಾಗ್ದಾಳಿ ನಡೆಸಿದ್ದರು. ಇದನ್ನೂ ಓದಿ: ಪ್ರಧಾನಿಯಾಗಲು ದೀದಿ ಎಲ್ಲಾ ಅರ್ಹತೆ ಹೊಂದಿದ್ದಾರೆ: ಟಿಎಂಸಿ ಸಂಸದ