ನವದೆಹಲಿ: ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಪ್ರಧಾನಿ ನರೇಂದ್ರ ಮೋದಿ ಅವರನ್ನು ಶುಕ್ರವಾರ ದೆಹಲಿಯಲ್ಲಿ ಭೇಟಿಯಾದರು.
ಈ ವೇಳೆ ದೀರ್ಘಕಾಲದ ಬೇಡಿಕೆಯಾಗಿರುವ ಸರಕು ಹಾಗೂ ಸೇವಾ ತೆರಿಗೆಯ ಬಾಕಿಗಳು, ಕೇಂದ್ರ ಯೋಜನೆಗಳ ಅಡಿಯಲ್ಲಿ ಬಾಕಿ ಉಳಿದಿರುವ 1,00,968.44 ಕೋಟಿ ರೂ. ಬಿಡುಗಡೆ ಮಾಡುವಂತೆ ಮನವಿ ಮಾಡಿದರು.
ಈ ಹಿಂದೆ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರವು ಜಿಎಸ್‍ಟಿ ಬಾಕಿಯನ್ನು ರಾಜ್ಯಗಳಿಗೆ ಅದರಲ್ಲೂ ಬಿಜೆಪಿಯೇತರ ರಾಜ್ಯಗಳಿಗೆ ನೀಡಲು ವಿಳಂಬ ಮಾಡುತ್ತಿದೆ ಎಂದು ಆರೋಪಿಸಿದ್ದರು. ಇದನ್ನೂ ಓದಿ: ಪಾರ್ಥ ಚಟರ್ಜಿ, ಆಪ್ತೆ ಅರ್ಪಿತಾ ಮುಖರ್ಜಿಗೆ 14 ದಿನ ನ್ಯಾಯಾಂಗ ಬಂಧನ
ಪ್ರಧಾನಿ ಭೇಟಿಯ ನಂತರ ನೂತನ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು ಭೇಟಿಯಾಗಲಿದ್ದಾರೆ. ಮಮತಾ ಬ್ಯಾನರ್ಜಿ 4 ದಿನಗಳ ದೆಹಲಿ ಪ್ರವಾಸದಲ್ಲಿದ್ದು, ಆ.7ರಂದು ನಡೆಯಲಿರುವ ನೀತಿ ಆಯೋಗದ ಸಭೆಯಲ್ಲಿ ಭಾಗಿಯಾಗಿ ನಂತರ ವಾಪಸ್ ತೆರಳಲಿದ್ದಾರೆ.
ನಿನ್ನೆ ದೆಹಲಿಗೆ ಬಂದಿರುವ ಮಮತಾ ಬ್ಯಾನರ್ಜಿ ಅವರು ಸಂಸತ್ತಿನ ಮುಂಗಾರು ಅಧಿವೇಶನದಲ್ಲಿ ಪಾಲ್ಗೊಳ್ಳಲು ಬಂದಿರುವ ತಮ್ಮ ಪಕ್ಷದ ಸಂಸದರನ್ನು ಭೇಟಿಯಾಗಿ ವಿವಿಧ ವಿಷಯಗಳ ಕುರಿತು ಚರ್ಚೆ ನಡೆಸಿದರು. ಇದನ್ನೂ ಓದಿ: ಎಲ್ಲಾ ಜಿಲ್ಲೆಗಳಲ್ಲಿ ಸಂಸ್ಕೃತ ಗ್ರಾಮ ಅಭಿವೃದ್ಧಿಪಡಿಸಲು ಮುಂದಾದ ಉತ್ತರಾಖಂಡ
ಇತ್ತೀಚೆಗಷ್ಟೇ ಜಾರಿ ನಿರ್ದೇಶನಾಲಯ(ಇಡಿ)ವು ದೀದಿ ನೇತೃತ್ವದ ಸರ್ಕಾರದಲ್ಲಿ ಸಚಿವರಾಗಿದ್ದ ಪಾರ್ಥ ಚಟರ್ಜಿಯನ್ನು ಬಂಧಿಸಿತ್ತು. ಇದಾದ ಬಳಿಕ ಮಮತಾ ಬ್ಯಾನರ್ಜಿಯೇ ಸಚಿವ ಸಂಪುಟದ ಸ್ಥಾನದಿಂದ ಪಾರ್ಥ ಚಟರ್ಜಿಯನ್ನು ವಜಾ ಗೊಳಿಸಿದ್ದರು. ಇದಾದ ನಂತರ ಪ್ರಧಾನಿ ಮೋದಿಯನ್ನು ಭೇಟಿಯಾಗಿರುವುದು ಹೆಚ್ಚು ಕುತೂಹಲವನ್ನು ಹಾಗೂ ಊಹಾಪೋಹಗಳು ಕೇಳಿ ಬರುತ್ತಿದೆ.