ಕುರ್ತಾ, ಸಿಹಿ ಉಡುಗೊರೆಯೊಂದಿಗೆ ಮೋದಿ ಭೇಟಿ ಮಾಡಿದ ದೀದಿ

Public TV
2 Min Read
modi mamata 1

ನವದೆಹಲಿ: ಸದಾ ಪ್ರಧಾನಿ ಮೋದಿಯವರನ್ನು ಟೀಕಿಸುತ್ತಿದ್ದ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ಇಂದು ಕುರ್ತಾ, ಸಿಹಿ ತಿನಿಸಿನ ಉಡುಗೊರೆಯೊಂದಿಗೆ ಪ್ರಧಾನಿ ನರೇಂದ್ರ ಮೋದಿಯವರನ್ನು ಭೇಟಿ ಮಾಡಿದ್ದಾರೆ.

ಬಂಗಾಳದ ವಿವಿಧ ಸಮಸ್ಯೆಗಳ ಕುರಿತು ಚರ್ಚಿಸುವುದರ ಹೊರತಾಗಿ ಮಮತಾ ಬ್ಯಾನರ್ಜಿಯವರು ಪ್ರಧಾನಿ ಮೋದಿಯೊಂದಿಗೆ ಖುಷಿಯ ಕ್ಷಣಗಳನ್ನು ಕಳೆದಿದ್ದು, ಕುರ್ತಾ, ಸಿಹಿ ನೀಡಿ ಆತ್ಮೀಯವಾಗಿ ಮಾತನಾಡಿದ್ದಾರೆ. ಭೇಟಿಯ ನಂತರ ಪ್ರತಿಕ್ರಿಯಿಸಿರುವ ಮಮತಾ ಪ್ರಧಾನಿ ಮೋದಿಯವರ ಭೇಟಿಯು ಸಂತೃಪ್ತಿ ತಂದಿದೆ ಹಾಗೂ ಫಲಪ್ರದವಾಗಿತ್ತು ಎಂದು ತಿಳಿಸಿದ್ದಾರೆ. ಇದನ್ನು ಓದಿ: ರಸಗುಲ್ಲಾ, ಗಿಫ್ಟ್ಸ್ ಕೊಡುತ್ತೇವೆ ಆದ್ರೆ ನಿಮಗೆ ಮತ ಕೊಡಲ್ಲ: ಮೋದಿಗೆ ದೀದಿ ಟಾಂಗ್

ಪ್ರಧಾನಿ ನರೇಂದ್ರ ಮೋದಿ ಅವರನ್ನೂ ಬಂಗಾಳಕ್ಕೆ ಆಹ್ವಾನಿಸಿದ್ದು, ಬಿರ್ಭಮ್‍ನಲ್ಲಿನ ಕಲ್ಲಿದ್ದಲು ಕ್ಷೇತ್ರ ಯೋಜನೆಗೆ ಚಾಲನೆ ನೀಡಲು ಆಗಮಿಸುವಂತೆ ತಿಳಿಸಿದ್ದೇನೆ. ಪಶ್ಚಿಮ ಬಂಗಾಳದಲ್ಲಿ ಸ್ಥಾಪನೆಯಾಗುತ್ತಿರುವ ವಿಶ್ವದ ಎರಡನೇ ಅತಿದೊಡ್ಡ ಕಲ್ಲಿದ್ದಲು ಬ್ಲಾಕ್‍ನ್ನು ಉದ್ಘಾಟಿಸಲು ಮೋದಿಯವರನ್ನು ಆಮಂತ್ರಿಸಿದ್ದೇನೆ ಎಂದು ಮಮತಾ ಬ್ಯಾನರ್ಜಿ ತಿಳಿಸಿದ್ದಾರೆ.

ರಾಜ್ಯದ ವೆಸ್ಟ್ ಬೆಂಗಾಲ್(ಪಶ್ಚಿಮ ಬಂಗಾಳ) ಹೆಸರನ್ನು ಬೆಂಗಾಲ್(ಬಂಗಾಳ) ಎಂದು ಮರುನಾಮಕರಣ ಮಾಡವುದು ಸೇರಿದಂತೆ ರಾಜ್ಯದ ವಿವಿಧ ಸಮಸ್ಯೆಗಳ ಕುರಿತು ಚರ್ಚಿಸಿದ್ದೇನೆ ಎಂದು ಭೇಟಿ ನಂತರ ಮಮತಾ ತಿಳಿಸಿದ್ದಾರೆ. ಇದನ್ನು ಓದಿಮಮತಾ ಬ್ಯಾನರ್ಜಿ ಪ್ರತಿ ವರ್ಷ ಕುರ್ತಾ ಉಡುಗೊರೆ ನೀಡ್ತಾರೆ: ಮೋದಿ

ಇತ್ತೀಚೆಗೆ ರಾಜ್ಯ ಸರ್ಕಾರ ಸಹ ರಾಜ್ಯದ ವಿವಿಧ ಸಮಸ್ಯೆಗಳ ಕುರಿತು ಗೃಹ ಸಚಿವಾಲಯಕ್ಕೆ ಪತ್ರ ಬರೆದಿತ್ತು. ಅಲ್ಲದೆ, ತೃಣಮೂಲ ಕಾಂಗ್ರೆಸ್(ಟಿಎಂಸಿ) ನಿಯೋಗ ಸಹ ಕಳೆದ ಅಧಿವೇಶನದ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿಯವರನ್ನು ಭೇಟಿ ಮಾಡಿತ್ತು.

ಸಾರ್ವಜನಿಕ ವಲಯದ ಉದ್ಯಮಗಳಲ್ಲಿ ಹೂಡಿಕೆ ಮಾಡುವುದರ ಕುರಿತು ಸಹ ಮೋದಿ ಅವರೊಂದಿಗೆ ಚರ್ಚಿಸಲಾಗಿದೆ. ಇದು ರಾಜಕೀಯ ಭೇಟಿಯಲ್ಲ ಕೇವಲ ಕುಶಲೋಪರಿಯ ಭೇಟಿ. ಅಮಿತ್ ಶಾ ಅವರು ಸಮಯ ನೀಡಿದರೆ ಸೌಜನ್ಯಕ್ಕಾಗಿ ನಾಳೆ ಅವರನ್ನೂ ಒಮ್ಮೆ ಭೇಟಿ ಮಾಡಲು ಬಯಸುತ್ತೇನೆ ಎಂದು ಇದೇ ವೇಳೆ ದೀದಿ ತಿಳಿಸಿದರು.

ಎನ್‍ಆರ್ ಸಿ  ಕುರಿತು ಪತ್ರಕರ್ತರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಮಮತಾ, ಮೋದಿಯವರೊಂದಿಗೆ ಎನ್‍ಆರ್ ಸಿ ಕುರಿತು ಯಾವುದೇ ಚರ್ಚೆ ನಡೆದಿಲ್ಲ. ಬಿಜೆಪಿಯವರು ಎಲ್ಲಿ ಬೇಕಾದರೂ ರಾಜಕೀಯ ಹೇಳಿಕೆಗಳನ್ನು ನೀಡಬಹುದು. ಆದರೆ ಪ್ರಧಾನಿಯವರೊಂದಿಗಿನ ನನ್ನ ಭೇಟಿ ರಾಜಕೀಯವಾಗಿರಲಿಲ್ಲ ಎಂದು ತಿಳಿಸಿ ರಾಜಕೀಯದ ಕುರಿತು ಪ್ರಶ್ನೆಗಳಿಗೆ ಉತ್ತರಿಸುವುದನ್ನೂ ನಿರಾಕರಿಸಿದ್ದಾರೆ.

modi mamata

ಮಂಗಳವಾರ ದೆಹಲಿಗೆ ತೆರಳುತ್ತಿರುವ ಸಂದರ್ಭದಲ್ಲಿ ಕೋಲ್ಕತ್ತಾ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ್ದ ಅವರು, ಕೇಂದ್ರ ಹಾಗೂ ರಾಜ್ಯಗಳ ಜಂಟಿ ಕಾರ್ಯಕ್ರಮಗಳಡಿ ಪಶ್ಚಿಮ ಬಂಗಾಳಕ್ಕೆ ನೀಡಲು ಬಾಕಿ ಇರುವ ಹಣವನ್ನು ಕೇಳಲು ಪ್ರಧಾನಿ ಮೋದಿಯರವನ್ನು ಭೇಟಿ ಮಾಡುತ್ತಿದ್ದೇನೆ ಎಂದು ತಿಳಿಸಿದ್ದರು.

Share This Article
Leave a Comment

Leave a Reply

Your email address will not be published. Required fields are marked *