ಬೇಕಿದ್ರೆ ನಮ್ಮ ಸರ್ಕಾರ ವಜಾಗೊಳಿಸಿ, ಪೌರತ್ವ ಕಾಯ್ದೆ ಜಾರಿಗೆ ತರಲ್ಲ: ಮಮತಾ ಗುಡುಗು

Public TV
2 Min Read
831103 mamata

ಕೋಲ್ಕತ್ತಾ: ಪೌರತ್ವ ತಿದ್ದುಪಡಿಯನ್ನು ಅನುಷ್ಠಾನ ಮಾಡದ್ದಕ್ಕೆ ನನ್ನ ಸರ್ಕಾರವನ್ನು ವಜಾಗೊಳಿಸಿದರೂ, ನಾನು ಇದನ್ನು ಜಾರಿ ಮಾಡಲು ಬಿಡುವುದಿಲ್ಲ ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕೋಲ್ಕತ್ತಾದ ಹೃದಯ ಭಾಗಗಳಲ್ಲಿ ತೃಣಮೂಲ ಕಾಂಗ್ರೆಸ್ ಪಕ್ಷದ ಸಾವಿರಾರು ಕಾರ್ಯಕರ್ತರೊಂದಿಗೆ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಿ ಕೇಂದ್ರ ಸರ್ಕಾರದ ವಿರುದ್ಧ ಗುಡುಗಿದ್ದಾರೆ. ಪೌರತ್ವ ತಿದ್ದುಪಡಿ ಕಾಯ್ದೆಯನ್ನು ಅನುಷ್ಠಾನಗೊಳಿಸದ್ದಕ್ಕೆ ನನ್ನ ಸರ್ಕಾರವನ್ನು ವಜಾಗೊಳಿಸಿ. ಆದರೆ ನಾನು ಮಾತ್ರ ಪೌರತ್ವ ತಿದ್ದುಪಡಿ ಕಾಯ್ದೆ ಹಾಗೂ ಎನ್‍ಆರ್‍ಸಿಯನ್ನು ರಾಜ್ಯದಲ್ಲಿ ಅನುಷ್ಠಾನಗೊಳಿಸಲು ಬಿಡುವುದಿಲ್ಲ ಎಂದು ಸವಾಲು ಎಸೆದಿದ್ದಾರೆ.

ಮಮತಾ ಬ್ಯಾನರ್ಜಿ ಒಬ್ಬರೆ ಇದ್ದಾರೆ ಎಂದು ಅವರು ಅಂದುಕೊಂಡಿದ್ದಾರೆ. ಆದರೆ ಇಂದು ನನ್ನೊಂದಿಗೆ ಹಲವು ಜನರಿದ್ದಾರೆ. ನಿಮ್ಮ ಕಾರಣ ಸರಿಯಾಗಿದೆ ಜನ ನಮ್ಮೊಂದಿಗೆ ಬರುತ್ತಾರೆ. ಇದು ಧರ್ಮದ ಆಧಾರದಲ್ಲಿ ನಡೆಯುತ್ತಿರುವ ಹೋರಾಟವಲ್ಲ. ಸತ್ಯಕ್ಕಾಗಿ ನಡೆಯುತ್ತಿರುವ ಹೋರಾಟ ಎಂದು ಗುಡುಗಿದರು.

ಮಮತಾ ಬ್ಯಾನರ್ಜಿ ಅವರು ಡಾ.ಬಿ.ಆರ್.ಅಂಬೇಡ್ಕರ್ ಕೆಂಪು ರಸ್ತೆಯಿಂದ ರವೀಂದ್ರನಾಥ್ ಠಾಗೋರ್ ಅವರ ಮನೆ ಜೋರಸಂಕೋ ಠಾಕುರ್‍ಬಾರಿ ವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿದರು. ಆದರೆ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ನಡೆಯನ್ನು ಅಸಂವಿಧಾನಿಕ ಎಂದು ರಾಜ್ಯಪಾಲ ಜಗದೀಪ್ ಧಂಖರ್ ಅವರು ಕರೆದಿದ್ದಾರೆ.

ಅಸಂವಿಧಾನಿಕ, ಇಂತಹ ಆಕ್ರೋಶ ಭರಿತ ನಡೆಯನ್ನು ಬಿಡಿ. ಇದರಿಂದಾಗಿ ರಾಜ್ಯದಲ್ಲಿ ಶಾಂತಿ ಸುವ್ಯವಸ್ಥೆ ಹದಗೆಡುತ್ತದೆ ಎಂದು ಮಮತಾ ಬ್ಯಾನರ್ಜಿ ವಿರುದ್ಧ ರಾಜ್ಯಪಾಲರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇತ್ತ ಪ್ರಿಯಾಂಕಾ ಗಾಂಧಿಯವರು ಇಂಡಿಯಾ ಗೇಟ್ ಬಳಿ ಧರಣಿ ಆರಂಭಿಸಿದ್ದು, ಕಾಂಗ್ರೆಸ್ ಕಾರ್ಯಕರ್ತರು ಹಾಗೂ ಕಾಯ್ದೆ ವಿರುದ್ಧ ಹೋರಾಟ ನಡೆಸುತ್ತಿರುವ ವಿದ್ಯಾರ್ಥಿ ಸಂಘಟನೆಗಳು ಅವರಿಗೆ ಬೆಂಬಲ ವ್ಯಕ್ತಪಡಿಸಿವೆ.

ಪೌರತ್ವ ತಿದ್ದುಪಡಿ ಕಾಯ್ದೆ ಕುರಿತು ವಿರೋಧ ಪಕ್ಷಗಳು ಆಕ್ರೋಶ ವ್ಯಕ್ತಪಡಿಸಿದ್ದು, ಕೇಂದ್ರ ಸರ್ಕಾರದ ವಿರುದ್ಧ ತೀವ್ರ ಟೀಕಾಪ್ರಹಾರ ನಡೆಸುತ್ತಿವೆ. ಈ ಮಧ್ಯೆಯೇ ಈಶಾನ್ಯ ರಾಜ್ಯಗಳು ಹಾಗೂ ಪಶ್ಚಿಮ ಬಂಗಾಳದಲ್ಲಿ ಹಿಂಸಾಚಾರ ಹೆಚ್ಚಾಗಿದೆ. ಪೌರತ್ವ ತಿದ್ದುಪಡಿ ಮಸೂದೆಯು ಮೇಲ್ಮನೆ ಹಾಗೂ ಕೆಳಮನೆ ಎರಡರಲ್ಲೂ ಪಾಸ್ ಆಗಿ ರಾಷ್ಟ್ರಪತಿ ರಾಮ್‍ನಾಥ್ ಕೋವಿಂದ್ ಸಹ ಅಂಕಿತ ಹಾಕಿದ್ದು, ಕಾಯ್ದೆಯಾಗಿದೆ. ಇದರ ಬೆನ್ನಲ್ಲೇ ದೇಶದ ಬಹುತೇಕ ರಾಜ್ಯಗಳಲ್ಲಿ ಹೋರಾಟ ತೀವ್ರಗೊಂಡಿದೆ.

ಅಸ್ಸಾಂ, ಮೆಘಾಲಯ ಸೇರಿದಂತೆ ಈಶಾನ್ಯದ ರಾಜ್ಯಗಳು ಹಾಗೂ ಪಶ್ಚಿಮ ಬಂಗಾಳದಲ್ಲಿ ಹಿಂಸಾಚಾರ ಹೆಚ್ಚಾಗಿದ್ದು, ಬಸ್, ರೈಲುಗಳಿಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *