-ದೀಪಕ್ ಜೈನ್
ಉಡುಪಿ: ಅಂಡರ್ ವರ್ಲ್ಡ್ ಡಾನ್ ರವಿ ಪೂಜಾರಿಯನ್ನು ಆಫ್ರಿಕಾದ ಸೆನೆಗಲ್ ನಲ್ಲಿ ಬಂಧಿಸಲಾಗಿದೆ. ಈ ಮೂಲಕ ಕಳೆದ 15 ವರ್ಷಗಳಿಂದ ರಾಜಕೀಯ- ಸಿನೆಮಾ- ಉದ್ಯಮಿಗಳ ನೆಮ್ಮದಿ ಕೆಡಿಸಿದ್ದ ಪೂಜಾರಿಯ ಉಪಟಳಕ್ಕೆ ಬ್ರೇಕ್ ಬಿದ್ದಿದೆ. ರವಿ ಪೂಜಾರಿ ಬಂಧನ ಯಾರಿಗೆ ಖುಷಿ ಯಾರಿಗೆ ಬೇಸರವಾಗಿದೆಯೋ ಗೊತ್ತಿಲ್ಲ ಮಲ್ಪೆಯ ಈ ಕುಟುಂಬ ಮಾತ್ರ ನೆಮ್ಮದಿಯ ನಿಟ್ಟುಸಿರು ಬಿಟ್ಟಿದೆ.
ಆಫ್ರಿಕಾ.. ಆಸ್ಟ್ರೇಲಿಯಾ.. ದುಬೈನಲ್ಲಿ ಕುಳಿತು ಭಾರತದ ಮೂಲೆ ಮೂಲೆಯ ಶ್ರೀಮಂತರನ್ನು ಕಾಡುತ್ತಿದ್ದ ರವಿ ಪೂಜಾರಿ ಅಂದರ್ ಆಗಿದ್ದಾನೆ. ಆಫ್ರಿಕಾದ ಸೆನೆಗಲ್ ನಲ್ಲಿ ರವಿ ಪೂಜಾರಿಯ ಅರೆಸ್ಟ್ ಆಗಿದೆ. ಶೂಟೌಟ್, ಕೊಲೆ ಬೆದರಿಕೆ, ಹಫ್ತಾ ವಸೂಲಿಯಲ್ಲಿ ನೂರು ಪ್ರಕರಣಗಳು ರವಿ ಪೂಜಾರಿ ಮೇಲಿದೆ. ಮೋಸ್ಟ್ ವಾಂಟೆಡ್ ಪಟ್ಟಿಯಲ್ಲಿರುವ ರವಿ ಪೂಜಾರಿ ಕರಾವಳಿ ಜಿಲ್ಲೆ ಉಡುಪಿಯ ಮಲ್ಪೆಯವನು.
Advertisement
Advertisement
ಮಲ್ಪೆಯ ವಡಭಾಂಡೇಶ್ವರ ವಾರ್ಡ್ ನಲ್ಲಿರುವ ನೇರ್ಗಿಯ ನಿವಾಸಿ. ತಂದೆ ಕಟ್ಟಿಸಿದ ಮನೆ ಈಗಲೂ ಇದೆ. 11 ವರ್ಷದ ಹಿಂದೆ ರವಿ ಪೂಜಾರಿ ತಂದೆ ಸೂರ್ಯ ಪೂಜಾರಿ ತಾವಿದ್ದ ಮನೆಯನ್ನು ಮಾರಾಟ ಮಾಡಿದ್ದಾರೆ. ವಾಸುದೇವ ಎಂಬ ಮೀನುಗಾರಿಕಾ ವೃತ್ತಿ ಮಾಡುವವರಿಗೆ 25 ಲಕ್ಷ ರೂಪಾಯಿಗೆ ಮಾರಾಟ ಮಾಡಿ ಮುಂಬೈ ಸೇರಿಕೊಂಡಿದ್ದರು. ಅದಾಗಿ ಮನೆ ಖರೀದಿಸಿದ ಮಾಲಕರಿಗೆ ನಿರಂತರ ವಿಚಾರಣೆ ಆರಂಭವಾಗಿದೆ. ರವಿ ಪೂಜಾರಿ ಕುಟುಂಬಕ್ಕೂ ನಿಮಗೂ ಹೇಗೆ ಲಿಂಕ್ , ವ್ಯವಹಾರವಿದೆಯೇ..? ಈಗಲೂ ಸಂಪರ್ಕವಿದೆಯೇ..? ಹೀಗೆ ಕಳೆದ 10 ವರ್ಷಗಳಿಂದ ಮುಂಬೈ- ಮಂಗಳೂರು ಸಿಸಿಬಿ ನಿರಂತರ ವಿಚಾರಣೆ ಎಂಬ ಹಿಂಸೆ ಕೊಟ್ಟಿದ್ದಾರೆ. ಇದೀಗ ರವಿ ಪೂಜಾರಿ ಬಂಧನವಾಗಿದೆ ಎಂಬ ಸುದ್ದಿಕೇಳಿ ವಾಸುದೇವ ಸುಗುಣ ದಂಪತಿ ನೆಮ್ಮದಿಯ ನಗು ಬೀರಿದ್ದಾರೆ.
Advertisement
Advertisement
ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಮನೆ ಮಾಲಕಿ ಸುಗುಣ, ಮನೆ ಖರೀದಿಸುವಾಗ ರವಿ ಪೂಜಾರಿ ಮನೆ ಅಂತ ನಮಗೆ ಗೊತ್ತಿರಲಿಲ್ಲ. 10 ವರ್ಷದಿಂದ ನಿರಂತರ ನಮಗೆ ಬರೀ ಟೆನ್ಶನ್. ಪೊಲೀಸರು ಆಗಾಗ ಬಂದು ರವಿಪೂಜಾರಿ ಬಗ್ಗೆ ವಿಚಾರಣೆ ಮಾಡುತ್ತಿದ್ದರು. ಮುಂಬೈ ಪೊಲೀಸರಂತು ಆಗಾಗ ಬಂದು ಪ್ರಶ್ನೆ ಮಾಡುತ್ತಿದ್ದರು. ಶೂ ಹಾಕಿಕೊಂಡು ಮನೆಯೊಳಗೆ ಬರ್ತಾಯಿದ್ರು. ನಮ್ಮ ಮನೆಗೆ ನಾವು ಚಪ್ಪಲಿ ಹಾಕಲ್ಲ. ಇವರ್ಯಾರು ಶೂ ಹಾಕಿಕೊಂಡು ಬರಲು ಅಂತ ಕೋಪ ಬರ್ತಾಯಿತ್ತು. ಕನ್ನಡ, ತುಳು ಬಾರದ ಪೊಲೀಸರು ನಮ್ಮತ್ರ ಎಂತ ಪ್ರಶ್ನೆ ಕೇಳೂದು ಅರ್ಥವಾಗುತ್ತಾ ಇರಲಿಲ್ಲ. ಈಗ ಆ ವ್ಯಕ್ತಿಯ ಬಂಧನವಾಗಿದೆ ಅಂತ ನೆಮ್ಮದಿಯಾಗಿದೆ. ಇನ್ನಾದ್ರೂ ಚಿಂತೆಯಿಲ್ಲದೆ ಭಯವಿಲ್ಲದೆ ಜೀವನ ನಡೆಸಬಹುದು ಎಂದು ಹೇಳಿದರು.
ಮನೆ ಖರೀದಿಸಿದ ವಾಸುದೇವ ಮಾತನಾಡಿ, ನಮಗೆ ಭಯ ಇಲ್ಲ. 25 ಲಕ್ಷ ಕೊಟ್ಟು 20 ಸೆಂಟ್ಸ್ ಜಾಗದಲ್ಲಿ ಮನೆ ಸಮೇತ ಖರೀದಿ ಮಾಡಿದ್ದೇವೆ. 10 ವರ್ಷದ ಹಿಂದೆ ಅಗ್ರಿಮೆಂಟ್ ಆಗಿದೆ. ನಾವು ರವಿಪೂಜಾರಿಯನ್ನು ನೋಡ್ಲೇ ಇಲ್ಲ. ನಮಗೂ ಅವರಿಗೂ ಯಾವುದೇ ಲಿಂಕ್ ಇಲ್ಲ. ನಾವು ಸಮುದ್ರದಲ್ಲಿ ಕಸುಬು ಮಾಡುವವರು ನಮಗ್ಯಾಕೆ ಭಯ ಅಂತ ಹೇಳಿದರು.
ರವಿ ಪೂಜಾರಿ ಉಡುಪಿಯ ಮಲ್ಪೆ ಮೂಲದವರಾದ್ರೂ ಪೂಜಾರಿ ಬಗ್ಗೆ ಸ್ಥಳೀಯರಿಗೆ ಗೊತ್ತಿರೋದು ಕಡಿಮೆ. ಐದಾರು ತಿಂಗಳ ಹಿಂದೆ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿಗೆ ಧಮ್ಕಿ ಹಾಕಿ ಹಫ್ತಾಕ್ಕೆ ಬೇಡಿಕೆಯಿಟ್ಟಿದ್ದ. ದೊಡ್ಡ ಸುದ್ದಿಯಾಗಿ ಹಾಲಾಡಿ ಒಬ್ಬ ಸಜ್ಜನ ಅಂತ ತೀರ್ಮಾನಕ್ಕೆ ಬಂದು ಕ್ಷಮೆ ಕೇಳಿದ್ದ. ರವಿ ಪೂಜಾರಿ ಮೇಲೆ ಉಡುಪಿ ಜಿಲ್ಲೆಯಲ್ಲಿ 10 ಪ್ರಕರಣಗಳು ದಾಖಲಾಗಿರುವ ಬಗ್ಗೆ ಪೊಲೀಸರು ಮಾಹಿತಿ ನೀಡಿದ್ದಾರೆ.
ರವಿ ಪೂಜಾರಿ ಬಂಧನಕ್ಕೂ ಮೊದಲು ಆತನ ಸಹಚರರನ್ನು ಬಂಧಿಸಿ ತೀವ್ರವಾಗಿ ವಿಚಾರಣೆ ನಡೆಸಿದ್ದರು. ಕೆಲವೇ ದಿನಗಳಲ್ಲಿ ಬಂಧನವಾಗಿದೆ. ರವಿ ಪೂಜಾರಿ ಹೆಸರು ಹೇಳಿಕೊಂಡು ಸಾಕಷ್ಟು ಯುವಕರ ಗುಂಪುಗಳು ಕರಾವಳಿಯಲ್ಲಿ ಕಾರ್ಯಾಚರಿಸುತ್ತಿತ್ತು. ರವಿಪೂಜಾರಿ ಬಂಧನದ ಮೂಲಕ ಅದಕ್ಕೆಲ್ಲಾ ಫುಲ್ ಸ್ಟಾಪ್ ಬೀಳಲಿದೆ ಅಂತ ಪೊಲೀಸರು ಹೇಳುತ್ತಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv