ಕಲಬುರಗಿ/ಯಾದಗಿರಿ: ಶಹಾಪುರ ತಾಲೂಕಿನ ಮಹಲರೋಜ್ ಮಲ್ಲಿಕಾರ್ಜುನ ಮುತ್ಯಾ (Mallikarjuna Mutya) ಬಾಲಕಿಯನ್ನ ತನ್ನ ತೊಡೆ ಮೇಲೆ ಕೂಡಿಸಿಕೊಂಡು ಮುದ್ದಿಸಿರುವ ವಿಡಿಯೋ ವೈರಲ್ ಆಗಿದೆ. ಈ ಬೆನ್ನಲ್ಲೇ ಗೋಗಿ ಪೊಲೀಸ್ ಠಾಣೆಯಲ್ಲಿ ಪೋಕ್ಸೋ ಕೇಸ್ ದಾಖಲಾಗಿದ್ದು, ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ. ಈ ಮಧ್ಯೆ ವೈರಲ್ ಆದ ವಿಡಿಯೋ ಕುರಿತು ʻಪಬ್ಲಿಕ್ ಟಿವಿʼಗೆ (Public TV) ಮಲ್ಲಿಕಾರ್ಜುನ ಮುತ್ಯಾ ಪ್ರತಿಕ್ರಿಯೆ ನೀಡಿದ್ದಾರೆ.
ಬಾಲಕಿ ಇರುವ ವಿಡಿಯೋ (Viral Video) ಎಲ್ಲೆಡೆ ಹರಿಬಿಟ್ಟಿರೋದು ತಪ್ಪು. ಇದರಿಂದ ಆ ಕುಟುಂಬಕ್ಕೆ ನಷ್ಟವಾಗಿದೆ. ಆ ಬಾಲಕಿ ನನ್ನ ಮಗಳು ಇದ್ದಂತೆ, ಒಬ್ಬ ತಂದೆ ಮಗಳ ಜೊತೆ ಹೇಗೆ ಇರ್ತಾರೋ ಅದೇ ರೀತಿ ನಾನು ನಡೆದುಕೊಂಡಿದ್ದೇನೆ. ತಂದೆ ಮಗಳನ್ನ ಪ್ರೀತಿ ಮಾಡಲ್ವಾ? ತಂದೆ ಮಗಳನ್ನ ಪ್ರೀತಿ ಮಾಡೋದೇ ತಪ್ಪಾ ಅಂತ ಪ್ರಶ್ನಿಸಿದ್ದಾರೆ.
ಈ ಪ್ರಕರಣದಲ್ಲಿ ಯಾರ ಕೈವಾಡ ಇದೆ ಎಂಬುದು ಮುಖ್ಯ ಅಲ್ಲ. ಆ ಬಾಲಕಿಯನ್ನ ಬಳಸಿಕೊಂಡು ಈ ರೀತಿ ಮಾಡಿರೋದು ತಪ್ಪು. ಸರ್ಕಾರ ಏನ ಕ್ರಮ ತೆಗೆದುಕೊಳ್ಳುತ್ತೆ ಅದಕ್ಕೆ ನಾನು ಸಿದ್ಧ. ಪೊಲೀಸರು ನನ್ನನ್ನ ತನಿಖೆಗೆ ಕರೆದ್ರೆ ಖಂಡಿತಾ ಹೋಗುತ್ತೇನೆ, ಎಲ್ಲಾ ರೀತಿಯಿಂದಲೂ ತನಿಖೆಗೆ ಸಹಕರಿಸುತ್ತೇನೆ. ಇದು ನಮ್ಮದೇ ಹೋರಾಟ, ಕಾನೂನು ಹೋರಾಟದಲ್ಲಿ ಜಯವಾಗಲಿದೆ ಎಂದು ತಿಳಿಸಿದ್ದಾರೆ.

ಜೊತೆಗೆ ವೀಡಿಯೋದಲ್ಲಿ ನನ್ನ ಬಗ್ಗೆ ಅಪಪ್ರಚಾರ ಮಾಡಲಾಗುತ್ತದೆ, ಮಠದ ಭಕ್ತರು ಇದಕ್ಕೆ ತಲೆ ಕೆಡಿಕೊಳ್ಳಬೇಡಿ ಎಂದಿದ್ದಾರೆ. ಇದನ್ನೂ ಓದಿ: ಬಾಲಕಿ ಜೊತೆ ಅನುಚಿತ ವರ್ತನೆ – ಮುತ್ಯಾ ವಿರುದ್ಧ ಪೋಕ್ಸೋ ಕೇಸ್; ಯಾವುದೇ ಕ್ಷಣದಲ್ಲಿ ಅರೆಸ್ಟ್?
ಏನಿದು ಪ್ರಕರಣ?
ಸ್ವಯಂ ಘೋಷಿತ ದೇವಮಾನವ ಮಲ್ಲಿಕಾರ್ಜುನ ಮುತ್ಯಾ ತೊಡೆ ಮೇಲೆ ಬಾಲಕಿ ಕೂರಿಸಿಕೊಂಡು ಅನುಚಿತ ವರ್ತನೆ ತೋರಿದ್ದಾರೆ ಎಂಬ ಆರೋಪ ಬಂದಿತ್ತು. ಮುತ್ಯಾನ ತೊಡೆಯ ಮೇಲೆ ಬಾಲಕಿ ಕುಳಿತುಕೊಂಡಿರುವ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. ಈ ಬೆನ್ನಲ್ಲೇ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ ಅಧ್ಯಕ್ಷ ಶಶಿಧರ ಕೋಸಂಬೆ, ಕ್ರಮ ತೆಗೆದುಕೊಳ್ಳುವಂತೆ ಯಾದಗಿರಿ ಎಸ್ಪಿಗೆ ಪತ್ರ ಬರೆದಿದ್ದರು.
ʻಪಬ್ಲಿಕ್ ಟಿವಿʼಗೆ ಪ್ರತಿಕ್ರಿಯಿಸಿದ್ದ ಶಶಿಧರ ಕೋಸಂಬೆ, ಮಲ್ಲಿಕಾರ್ಜುನ ಮುತ್ಯಾ ಅಪ್ರಾಪ್ತೆ ಜೊತೆ ಅನುಚಿತ ವರ್ತನೆ ತೋರಿದ ವಿಡಿಯೋ ವೈರಲ್ ಆಗಿದೆ. ಈ ಸಂಬಂಧ ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡಿದ್ದು, ಯಾದಗಿರಿ ಎಸ್‌ಪಿಗೆ ಕ್ರಮ ತೆಗೆದುಕೊಳ್ಳಲು ಪತ್ರ ಬರೆಯಲಾಗಿತ್ತು. ಶಹಾಪುರ ತಾಲೂಕು ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು ನೀಡಿದ ದೂರಿನ ಮೇರೆಗೆ ಶಹಾಪುರ ತಾಲ್ಲೂಕಿನ ಗೋಗಿ ಪೊಲೀಸ್ ಠಾಣೆಯಲ್ಲಿ ಪೋಕ್ಸೋ ಪ್ರಕರಣ ದಾಖಲಾಗಿದೆ.
ಯಾದಗಿರಿ ಜಿಲ್ಲೆಯ ಶಹಾಪುರದ ಮಹಲ್ ರೋಜಾದ ಮಲ್ಲಿಕಾರ್ಜುನ ಕಲ್ಯಾಣ ಕರ್ನಾಟಕ ಭಾಗದಲ್ಲಿ ಮುತ್ಯಾ ಎಂದೇ ಫೇಮಸ್ ಆಗಿದ್ದಾರೆ. ಇದನ್ನೂ ಓದಿ: ಬಾಲಕಿ ಜೊತೆ ಅನುಚಿತ ವರ್ತನೆ, ದೂರು ದಾಖಲು – ಮಲ್ಲಿಕಾರ್ಜುನ ಮುತ್ಯಾಗೆ ಸಂಕಷ್ಟ

