ಕಲಬುರಗಿ: ರಾಜ್ಯದೆಲ್ಲೆಡೆ ಲೋಕಸಭಾ ಚುನಾವಣೆಯಲ್ಲಿ ದೋಸ್ತಿ ಪಕ್ಷಗಳು ಮೈತ್ರಿ ಮಾಡಿಕೊಂಡು ಪಕ್ಷದ ಅಭ್ಯರ್ಥಿಗಳ ಪರ ಭರ್ಜರಿ ಕ್ಯಾಂಪೆನ್ ಮಾಡ್ತಿದ್ರೆ, ಇತ್ತ ಹೈವೋಲ್ಟೆಜ್ ಕ್ಷೇತ್ರವೆಂದೇ ಬಿಂಬಿತವಾಗಿರುವ ಕಲಬುರಗಿ ಲೋಕಸಭಾ ಕ್ಷೇತ್ರದಲ್ಲಿ ದೋಸ್ತಿ ಸರ್ಕಾರದ ಪ್ರಮುಖ ಪಕ್ಷ ಜೆಡಿಎಸ್, ಕಾಂಗ್ರೆಸ್ ಜೊತೆ ಕುಸ್ತಿಗೆ ನಿಂತಿದೆ.
ಕಲಬುರಗಿಯಲ್ಲಿ ಖರ್ಗೆಯವರಿಗೆ ಸೋಲಿನ ಭೀತಿ ಎದುರಾಗುತ್ತಲೆ, ಇತ್ತ ಖರ್ಗೆ ಬೆಂಬಲಿಗರು ಜೆಡಿಎಸ್ ಅಲ್ಪಸಂಖ್ಯಾತ ಮುಖಂಡರು ಹಾಗೂ ಕಾರ್ಯಕರ್ತರನ್ನು ಆಪರೇಶನ್ ಮಾಡಲು ಮುಂದಾಗಿತ್ತು. ಇದರಿಂದ ಕಾಂಗ್ರೆಸ್ ವಿರುದ್ಧ ಆಕ್ರೋಶಗೊಂಡ ಜೆಡಿಎಸ್ ಅಲ್ಪಸಂಖ್ಯಾತ ಮುಖಂಡರು ಸಭೆ ಸೇರಿ ಬಿಜೆಪಿಗೆ ಮತ ಹಾಕಿ ಇಲ್ಲವಾದಲ್ಲಿ ನೋಟಾ ಚಲಾಯಿಸಿ ಎಂದು ಕಾರ್ಯಕರ್ತರು ಹಾಗೂ ಬೆಂಬಲಿಗರಿಗೆ ಕರೆ ನೀಡಿದ್ದಾರೆ.
ಅಲ್ಪಸಂಖ್ಯಾತರ ಈ ಖಡಕ್ ನಿರ್ಧಾರಕ್ಕೆ ಖರ್ಗೆ ಬೆಚ್ಚಿಬಿದ್ದಿದ್ದಾರೆ. ಸ್ಥಳೀಯವಾಗಿ ನೀವು ನಮ್ಮನ್ನು ಕಾಂಗ್ರೆಸ್‍ಗೆ ಸೆಳೆದುಕೊಂಡರೆ ಮುಂದೆ ಕಾರ್ಪೋರೇಶನ್ ಹಾಗೂ ವಿಧಾನಸಭೆ ಚುನಾವಣೆಯಲ್ಲಿ ನಮ್ಮನ್ನು ಮೂಲೆ ಗುಂಪು ಮಾಡುತ್ತೀರಿ. ಹೀಗಾಗಿ ನಾವು ಲೋಕಸಭಾ ಚುನಾವಣೆಯಲ್ಲಿ ಯಾವುದೇ ಕಾರಣಕ್ಕೂ ಕಾಂಗ್ರೆಸ್‍ಗೆ ಬೆಂಬಲ ನೀಡುವುದಿಲ್ಲ ಎಂದು ಘೋಷಣೆ ಮಾಡುವ ಮೂಲಕ ಎಚ್ಚರಿಕೆ ನೀಡಿದ್ದಾರೆ.
ಅಲ್ಲದೆ ಸಭೆಯಲ್ಲಿ ಕಾಂಗ್ರೆಸ್ ಹಾಗೂ ಮಲ್ಲಿಕಾರ್ಜುನ ಖರ್ಗೆ ವಿರುದ್ಧ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಚುನಾವಣೆ ಬಂದಾಗ ಮಾತ್ರ ನಿಮಗೆ ಅಲ್ಪಸಂಖ್ಯಾತರ ಮತಗಳು ನೆನಪಾಗುತ್ತವೆ ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ.