ಕಲಬುರಗಿ: ಹಿಂದಿನ ಸರ್ಕಾರ ಸೈನಿಕರಿಗೆ ಸಂಪೂರ್ಣ ಸ್ವಾತಂತ್ರ್ಯ ನೀಡಿರಲಿಲ್ಲ ಎಂಬ ಪ್ರಧಾನಿಗಳ ಹೇಳಿಕೆ ಹಿನ್ನೆಲೆ ಮೋದಿಯವರ ಪ್ರತಿ ಮಾತಿಗೆ ಉತ್ತರ ಕೊಡುವ ಅವಶ್ಯಕತೆ ಇಲ್ಲ. ಬೇರೆಯವರ ಹೆಣದ ಮೇಲೆ ರಾಜಕೀಯ ಮಾಡೋದು, ನಮ್ಮ ಸೀಟ್ ಹೆಚ್ಚಿಗೆ ಬರ್ತಾವೆ ಅನ್ನೋದು ಸರಿಯಲ್ಲ ಎಂದು ಕಾಂಗ್ರೆಸ್ ಸಂಸದೀಯ ನಾಯಕ ಮಲ್ಲಿಕಾರ್ಜುನ ಖರ್ಗೆ ಬಿಜೆಪಿಗೆ ತಿರುಗೇಟು ನೀಡಿದ್ದಾರೆ.
ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಪ್ರಧಾನಿ ಮೋದಿ ಅವರ ಪ್ರತಿ ಮಾತಿಗೆ ಉತ್ತರ ಕೊಡುವ ಅವಶ್ಯಕತೆ ಇಲ್ಲ. ಚುನಾವಣೆ ವೇಳೆ ಇಂತಹ ಮಾತುಗಳನ್ನು ರಾಜಕೀಯಕ್ಕೆ ಬಳಸ್ತಿದಾರೆ ಎಂಬುದು ಸ್ಪಷ್ಟವಾಗುತ್ತದೆ. ಬಿ.ಎಸ್.ಯಡಿಯೂರಪ್ಪ ಸಹ ಇದರ ಪರಿಣಾಮ 22ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಗೆಲ್ಲುತ್ತೇವೆ ಎಂದು ಹೇಳಿಕೆ ಕೊಟ್ಟರು. ಅವರ ಬಾಯಲ್ಲಿ ಇಂತಹ ಮಾತು ಹೊರಬೀಳುತ್ತದೆ ಎಂದರೆ ಪಕ್ಷದಲ್ಲಿ ಈ ಬಗ್ಗೆ ಚರ್ಚೆಯಾಗ್ತಿದೆ ಎಂದೇ ಅರ್ಥವಲ್ಲ. ಬೇರೆಯವರ ಹೆಣದ ಮೇಲೆ ರಾಜಕೀಯ ಮಾಡೋದು, ನಮ್ಮ ಸೀಟ್ ಹೆಚ್ಚಿಗೆ ಬರ್ತಾವೆ ಎನ್ನೋದು ಸರಿಯಲ್ಲ ಎಂದು ಕಿಡಿಕಾಡಿದ್ದಾರೆ. ಇದನ್ನೂ ಓದಿ:ಪ್ರತಿಪಕ್ಷಗಳ ರಾಜಕಾರಣದಿಂದ ಶತ್ರುಗಳು ಲಾಭ ಪಡೆಯುತ್ತಿದ್ದಾರೆ: ಪ್ರಧಾನಿ ಮೋದಿ
ಪಾಕಿಸ್ತಾನ ಆಕ್ರಮಿತ ಕಾಶ್ಮೀರ ಮತ್ತು ನಮ್ಮ ಗಡಿ ಭಾಗದಲ್ಲಿ ಮೊದಲಿನಿಂದಲೂ ಉಗ್ರರು ಹಾಗೂ ಪಾಕ್ ಸೇನೆ ದಾಳಿ ಮಾಡ್ತಿದಾರೆ. ನಮ್ಮ ಇಂಟೆಲಿಜೆನ್ಸ್ ಈ ಬಗ್ಗೆ ಗಂಭೀರ ಚಿಂತನೆ ಮಾಡಿ ದೇಶಕ್ಕೆ ಒಳ್ಳೆಯದಾಗುವ ನಿರ್ಣಯ ಕೈಗೊಳ್ಳಬೇಕು. ಸೈನಿಕರು ಅಲರ್ಟ್ ಆಗಿದ್ದು, ಪಾಕ್ ಸೇನೆಗೆ ತಕ್ಕ ಪ್ರತ್ಯುತ್ತರ ನೀಡುತ್ತಿದ್ದಾರೆ. ಅಭಿನಂದನ್ ವಾಪಸ್ ಆಗಿದ್ದನ್ನು ಸ್ವಾಗತಿಸುತ್ತೇವೆ. ಈ ಬಗ್ಗೆ ನಿನ್ನೆ ಮುಂಬೈಯಲ್ಲಿ ಸಭೆ ನಡೆಸಿದಾಗ ಸ್ವಾಗತ ಮಾಡಿದ್ದೇನೆ ಎಂದು ಹೇಳಿದರು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv