ಬೆಂಗಳೂರು: ಬಿಜೆಪಿಯವರು ಯಾವಗಲೂ ರೈತರ ಹೆಸರು ಹೇಳುತ್ತಾರೆ. ಆದರೆ ಅವರ ಸರ್ಕಾರ ರೈತರ ಪರ ಇಲ್ಲ ಎಂದು ಕಾಂಗ್ರೆಸ್ ಹಿರಿಯ ಮುಖಂಡ ಮಲ್ಲಿ ಕಾರ್ಜುನ ಖರ್ಗೆ ಹೇಳಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಾರು ಸಮಾಧಾನ ಪಡುತ್ತಾರೋ, ಅಸಮಾಧಾನ ಪಡುತ್ತಾರೋ ಗೊತ್ತಿಲ್ಲ. ಅದು ಬಿಜೆಪಿಯ ಆಂತರಿಕ ವಿಚಾರವಾಗಿದೆ. ಅಧಿಕಾರಕ್ಕೆ ಬಂದು ಒಂದು ತಿಂಗಳಾದರೂ ಸಿಎಂ ಒಬ್ಬರೇ ಓಡಾಡುತ್ತಿದ್ದಾರೆ ಎಂದು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು.
ಮಂತ್ರಿ ಮಂಡಲ ರಚನೆ ಮಾಡಲು 25 ದಿನ ತೆಗೆದುಕೊಂಡರು. ಅದಾದ ಬಳಿಕ ಖಾತೆ ಹಂಚಿಕೆಗೆ ನಾಲ್ಕೈದು ದಿನ ಆಯ್ತು. ಒಗ್ಗಟ್ಟಾಗಿ ನಿರ್ಣಯ ತೆಗೆದುಕೊಳ್ಳಲು ಯಡಿಯೂರಪ್ಪಗೆ ಸಾಧ್ಯವಾಗುತ್ತಿಲ್ಲ ಎಂದರು.
ರಾಜ್ಯದಲ್ಲಿ ಒಂದು ಕಡೆ ಪ್ರವಾಹ ಪೀಡಿತರಾಗಿ ಸಾಕಷ್ಟು ಜನ ತೊಂದರೆಗೀಡಾಗಿದ್ದಾರೆ. ತೊಂದರೆ ಕೇಳುವವರು, ನೋಡುವವರು ಯಾರೂ ಇಲ್ಲ. ಇನ್ನೊಂದು ಕಡೆ ಬರ ಕೂಡ ಎದುರಾಗಿದೆ. ಹೈದರಾಬಾದ್ ಕರ್ನಾಟಕ ಭಾಗದಲ್ಲಿ ಎಲ್ಲಿ ಮಳೆ ಬೀಳಬೇಕೋ ಅಲ್ಲಿ ಮಳೆ ಇಲ್ಲ. ಸರ್ಕಾರದವರು ತ್ವರಿತವಾದ ಕೆಲಸ ಮಾಡುವುದು ಬಿಟ್ಟು ಕಚ್ಚಾಡಿಕೊಂಡು ಕೂತಿದ್ದಾರೆ ಎಂದು ಕಿಡಿಕಾರಿದರು.
ನಾನು ಮೇಲೆ, ನೀನು ಮೇಲೆ ಎಂದು ನಾಯಕರು ಅಂತಿದ್ದಾರೆ. ಎರಡು ತಿಂಗಳಿಂದ ರಾಜ್ಯದ ಜನರಿಗೆ ತೊಂದರೆ ಆಗುತ್ತಿದೆ. ಯಾವತ್ತೂ ರೈತರ ಹೆಸರೇಳುವವರು ಈಗ ಅವರದ್ದೇ ಸರ್ಕಾರ ರಾಜ್ಯದಲ್ಲಿ ಇದೆ. ಆದರೆ ಸರ್ಕಾರ ರೈತರ ಪರ ಇಲ್ಲ ಎಂದು ಹೇಳಿದರು.
ಬರಗಾಲದ ದುಡ್ಡು ನಮ್ಮ ರಾಜ್ಯಕ್ಕೆ ಕೊಟ್ಟಿದ್ದಾರೆ. ಪ್ರವಾಹಕ್ಕೂ ಮೊದಲು ಅಡ್ವಾನ್ಸ್ ಕೊಟ್ಟು ಆ ಬಳಿಕ ಪರಿಶೀಲನೆ ಮಾಡಲಿ. ಮಾತು ಮಾತಿಗೆ ಹೈಕಮಾಂಡ್, ದಿಲ್ಲಿಗೆ ಹೋಗುತ್ತಾರೆ ಎಂದು ಬಿಜೆಪಿಯವರು ನಮ್ಮನ್ನು ಕಿಚಾಯಿಸುತ್ತಿದ್ದರು. ಆದರೆ ಈವಾಗ ಅವರು ಏನು ಮಾಡುತ್ತಿದ್ದಾರೆ ಎಂದು ಪ್ರಶ್ನಿಸಿದರು.
ಇದೇ ವೇಳೆ ಸಿದ್ದರಾಮಯ್ಯ ಹಾಗೂ ದೇವೇಗೌಡ ಫ್ಯಾಮಿಲಿ ವಾರ್ ಬಗ್ಗೆ ಪ್ರತಿಕ್ರಿಯಿಸಿದ ಖರ್ಗೆ, ಅವರು ಇವರ ಬಗ್ಗೆ ಮಾತಾಡಿದ್ದಾರೆ. ಇವರು ಅವರ ಬಗ್ಗೆ ಹೇಳಿದ್ದಾರೆ. ಇದರಲ್ಲಿ ನಾವು ಮೂರನೇಯವರು ಮಾತನಾಡೋದು ಸರಿಯಲ್ಲ ಎಂದರು.