ಕಲಬುರಗಿ: ಬಿಜೆಪಿಗೆ ಸೇರ್ಪಡೆಯಾಗಲಿರುವ ಅಫಜಲಪುರದ ಕೈ ಶಾಸಕ ಮಾಲೀಕಯ್ಯ ಗುತ್ತೇದಾರ್ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ ಮತ್ತು ಪ್ರಿಯಾಂಕ ಖರ್ಗೆ ವಿರುದ್ಧ ಕಿಡಿಕಾರುತ್ತಿರುವ ಆಡಿಯೋ ಈಗ ಲಭ್ಯವಾಗಿದೆ.
ವಿಧಾನಸಭಾ ಚುನಾವಣೆಯಲ್ಲಿ ಸಚಿವ ಪ್ರಿಯಾಂಕ ಖರ್ಗೆ ಅವರನ್ನು ಸೋಲಿಸುವುದಾಗಿ ಗುತ್ತೇದಾರ್ ಆಡಿಯೋದಲ್ಲಿ ಗುಡುಗಿದ್ದಾರೆ.
ಆಡಿಯೋದಲ್ಲಿ ಏನಿದೆ?
ಕಲಬುರಗಿಯಲ್ಲಿ ಖರ್ಗೆ ಒಬ್ಬೊಬರನ್ನು ಮುಗಿಸುತ್ತಾ ಬರುತ್ತಿದ್ದಾರೆ. ಯಾಕೆಂದರೆ ಆತನ ಮನೆಯಲ್ಲಿ ಆತನಿಗೆ ಶೂ ಹಾಕುವಂತಹ ಶರಣಪ್ರಕಾಶ ಪಾಟೀಲ್ ನಂತಹ ವ್ಯಕ್ತಿಗಳು ಬೇಕು. ಸಿಎಂ ವಿವೇಚನಾ ಖೋಟಾದಲ್ಲಿ ನನ್ನ ಕ್ಷೇತ್ರಕ್ಕೆ 25 ಕೋಟಿ ರೂ. ನೀಡುವುದಾಗಿ ಹೇಳಿ ನಂತರ ಕೇವಲ 5 ಕೋಟಿ ರೂ. ನೀಡಿ ವಂಚಿಸಿದ್ದಾರೆ. ಕಾಂಗ್ರೆಸ್ ನವರು ಈ ಹಿಂದೆ ನನ್ನನ್ನು ಕಾಡಿಸಿದ್ದಾರೆ. ನಾನು ಕಾಂಗ್ರೆಸ್ ನಿಂದ ಹೊರಬಂದರೆ ಈಡಿಗ ಶಕ್ತಿ ಏನು ಎನ್ನುವುದನ್ನು ತೋರಿಸಿಕೊಡುತ್ತೇನೆ. ದಲಿತರಿಗೆ ಖರ್ಗೆ ಏನು ಮಾಡಿದ್ದಾರೆ ಎಂದು ಪ್ರಶ್ನಿಸಿ ಗುತ್ತೇದಾರ್ ಆಡಿಯೋದಲ್ಲಿ ಕಿಡಿಕಾರಿದ್ದಾರೆ.
1985, 1989, 1994, 1999, 2008, 2013 ರಲ್ಲಿ ಮಾಲೀಕಯ್ಯ ಗುತ್ತೇದಾರ್ ಅಫಜಲಪುರ ಕ್ಷೇತ್ರದಿಂದ ಆಯ್ಕೆ ಆಗಿದ್ದಾರೆ. 2013ರಲ್ಲಿ ಗುತ್ತೇದಾರ್ 5,238 ಮತಗಳ ಅಂತರದಿಂದ ಜಯಗಳಿಸಿದ್ದರು. ಗುತ್ತೇದಾರ್ 38,093 ಮತಗಳನ್ನು ಪಡೆದಿದ್ದರೆ, ಕೆಜೆಪಿಯಿಂದ ಸ್ಪರ್ಧಿಸಿದ್ದ ಎಂವೈ ಪಟೀಲ್ 32,855 ಮತಗಳನ್ನು ಪಡೆದಿದ್ದರು.