ಬೆಂಗಳೂರು: ನಗರದಲ್ಲಿ ಇಂದು ನಡೆದಿದ್ದ ರಾಜ್ಯ ಆದಿ ಜಾಂಬವ ಅಭಿವೃದ್ಧಿ ನಿಗಮ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ದಲಿತ ಎಡಗೈ, ಬಲಗೈ ಕಾಂಗ್ರೆಸ್ ನಾಯಕರ ನಡುವಿನ ಸಂಘರ್ಷ ಮತ್ತೊಮ್ಮೆ ಬಯಲಿಗೆ ಬಂದಿದೆ. ನ್ಯಾ.ಸದಾಶಿವ ಆಯೋಗದ ವರದಿ ಜಾರಿಗೆ ವಿಚಾರದಲ್ಲಿ ಕಾಂಗ್ರೆಸ್ ನಾಯಕರಾದ ಮಲ್ಲಿಕಾರ್ಜುನ ಖರ್ಗೆ ಮತ್ತು ಕೆ.ಎಚ್.ಮುನಿಯಪ್ಪ ಪರಸ್ಪರ ವಾಗ್ದಾಳಿ ನಡೆಸಿದ ಪ್ರಸಂಗ ನಡೆಯಿತು.
ಸಂಸದ ಕೆ.ಎಚ್.ಮುನಿಯಪ್ಪ ಅವರು ಮಾತನಾಡಿ, ಮೇಲ್ವರ್ಗದ ಬಡವರಿಗೆ ಶೇ.10ರಷ್ಟು ಮೀಸಲಾತಿ ನಿರ್ಧಾರ ಕೇಂದ್ರ ಸರ್ಕಾರದ ಚುನಾವಣೆಯ ರಾಜಕೀಯವಾಗಿದೆ. ಕಳೆದ ನಾಲ್ಕು ವರ್ಷಗಳಿಂದ ಸುಮ್ಮನಿದ್ದು ಈಗ ಮೀಸಲಾತಿ ಕೊಟ್ಟಿದ್ದಾರೆ. ಇದು ಮೂಗಿಗೆ ತುಪ್ಪ ಸವರುವ ಕೆಲಸ. ಆದರೂ ಕೇಂದ್ರದ ನಿರ್ಧಾರ ಸ್ವಾಗತಾರ್ಹ ಎಂದರು.
Advertisement
Advertisement
ಸಂಸದರ ಭಾಷಣದ ವೇಳೆ ಸಭಿಕರು ಸದಾಶಿವ ವರದಿ ಜಾರಿ ಮಾಡುವಂತೆ ಒತ್ತಾಯಿಸಿ ಕೂಗಲು ಆರಂಭಿಸಿದರು. ಈ ಕುರಿತು ಸಂಸತ್ತಿನಲ್ಲಿ ಆಗ್ರಹಿಸಿದ್ದೇವೆ. ಸದಾಶಿವ ಆಯೋಗದ ವರದಿ ಜಾರಿಯ ಹೋರಾಟವನ್ನು ಹಿರಿಯರಾದ ಮಲ್ಲಿಕಾರ್ಜುನ ಖರ್ಗೆ ಅವರ ಮುಂದಾಳತ್ವದಲ್ಲಿ ನಡೆಸುತ್ತೇವೆ. ಹೋರಾಟದ ಯಶಸ್ಸು ಖರ್ಗೆ ಅವರಿಗೇ ಸಿಗಲಿ ಎಂದು ಕೆಣಕಿದರು.
Advertisement
ಬಳಿಕ ಮಲ್ಲಿಕಾರ್ಜುನ ಖರ್ಗೆ ಅವರು ಮಾತನಾಡುವಾಗಲೂ ಸದಾಶಿವ ಆಯೋಗದ ಜಾರಿ ಮಾಡುವಂತೆ ಒತ್ತಾಯ ಕೇಳಿ ಬರುತ್ತಿತ್ತು. ಇದರಿಂದ ಸಂಕಷ್ಟಕ್ಕೆ ಒಳಗಾದ ಮಲ್ಲಿಕಾರ್ಜುನ ಖರ್ಗೆ ಅವರು, ನನಗೆ ನಾಲ್ಕು ನಿಮಿಷ ಅವಕಾಶ ಕೊಡಿ. ಮಾತನಾಡಿ ಹೋಗುತ್ತೇನೆ ಅಂತ ಭಾಷಣ ಆರಂಭಿಸಿದರು. ಸಂಸದ ಮುನಿಯಪ್ಪ ಹೆಸರು ಪ್ರಸ್ತಾಪಿಸದೇ ಕೆಲವರು ಪದೇ ಪದೇ ಎಲ್ಲ ವಿಚಾರದಲ್ಲಿಯೂ ನನ್ನನ್ನು ಮುಂದೆ ನೂಕಿ, ತಾವು ಹಿಂದೆ ಉಳಿದುಕೊಳ್ಳುತ್ತಾರೆ. ಇದು ಸಮುದಾಯ ಒಡೆಯುವ ಕೆಲಸ ಎಂದು ತಿರುಗೇಟು ನೀಡಿದರು.
Advertisement
ಭಾಷಣ ಮುಗಿಸಿ ವೇದಿಕೆ ಮೇಲೆ ಕೂತಿದ್ದಾಗಲೂ ಮಲ್ಲಿಕಾರ್ಜುನ ಖರ್ಗೆ ಅವರು ಸಂಸದ ಮುನಿಯಪ್ಪ ಅವರ ಪಕ್ಕದಲ್ಲೇ ಕುಳಿತಿದ್ದರೂ ಮಾತನಾಡದೇ ಸಿಟ್ಟಿನಲ್ಲಿದ್ದರು. ಖುದ್ದು ಮುನಿಯಪ್ಪ ಅವರು ಮಾತಾಡಿಸಿದರೂ ಖರ್ಗೆಯವರು ಮುಖ ಕೊಟ್ಟು ಮಾತನಾಡಲಿಲ್ಲ.
ಸಿಎಂ ಕುಮಾರಸ್ವಾಮಿ ಅವರು ಮಾತನಾಡಿ, ಆದಿ ಜಾಂಬವ ಸಮುದಾಯದ ಅಭಿವೃದ್ಧಿಗೆ ಸರ್ಕಾರ ಬದ್ಧವಾಗಿದೆ. ಮಲ್ಲಿಕಾರ್ಜುನ ಖರ್ಗೆ ಮತ್ತು ಮುನಿಯಪ್ಪ ಇಬ್ಬರೂ ಅಣ್ಣತಮ್ಮಂದಿರಂತೆ. ಅವರು ಸಮಾಜದ ಏಳಿಗೆಗೆ ಕೆಲಸ ಮಾಡುತ್ತಿದ್ದಾರೆ. ಈ ಶಕ್ತಿಗಳನ್ನು ಬೇರ್ಪಡಿಸುವ ಕೆಲಸ ಆಗಬಾರದು ಎಂದು ಮನವೊಲಿಸುವ ಕೆಲಸ ಮಾಡಿದರು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv