ಚಾಮರಾಜನಗರ: ದೇಶದ ಆರ್ಥಿಕ ಪರಿಸ್ಥಿತಿ ಹದೆಗಟ್ಟು ಹೋಗಿದೆ, ಪ್ರಧಾನಮಂತ್ರಿ ಮೋದಿ ದೇಶವನ್ನು ಪಾಪರ್ ಮಾಡುತ್ತಿದ್ದಾರೆ ಎಂದು ಕೇಂದ್ರದ ಮಾಜಿ ಸಚಿವ, ಕಾಂಗ್ರೆಸ್ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ವಾಗ್ದಾಳಿ ನಡೆಸಿದ್ದಾರೆ.
ನಗರದಲ್ಲಿ ಮಾತನಾಡಿದ ಅವರು, ಮೋದಿ ಆರ್ಥಿಕ ಪರಿಸ್ಥಿತಿ ಸುಧಾರಿಸುವ ಬದಲು ದೇಶವನ್ನು ದಿವಾಳಿ ಮಾಡುತ್ತಿದ್ದಾರೆ. ಅವರು ಬೇರೆಯವರ ಮಾತನ್ನು ಕೇಳಲ್ಲ. ತಾವೇ ನೇಮಿಸಿದ ತಜ್ಞರ ಮಾತನ್ನು ಕೇಳಲ್ಲ. ನೋಟ್ ಬ್ಯಾನ್ ಆದ ಮೇಲೆ ದೇಶದ ಆರ್ಥಿಕ ಪರಿಸ್ಥಿತಿ ಸುಧಾರಿಸುತ್ತಿಲ್ಲ. ಮೋದಿ ನೀಡಿದ ಭರವಸೆಗಳೆಲ್ಲ ಹುಸಿಯಾಗಿವೆ. ತಮ್ಮ ವೈಫಲ್ಯ ಮುಚ್ಚಿ ಹಾಕಲು ಧರ್ಮದ, ರಾಷ್ಟ್ರೀಯತೆ ಹೆಸರಿನಲ್ಲಿ ಜನರನ್ನು ದಿಕ್ಕು ತಪ್ಪಿಸುತ್ತಿದ್ದಾರೆ ಎಂದು ಕಿಡಿಕಾರಿದರು.
Advertisement
Advertisement
ಅವರ ತಪ್ಪಿನ ಬಗ್ಗೆ ಮಾತನಾಡಿದವರನ್ನು ದೇಶ ದ್ರೋಹಿಗಳೆಂದು, ಪಾಕಿಸ್ತಾನದ ಏಜೆಂಟ್‍ಗಳೆಂದು ಬಿಂಬಿಸುತ್ತಾರೆ. ನಾನು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರನ್ನು ದೂಷಿಸಲು ಹೋಗಲ್ಲ. ಅವರು ಮೋದಿ ಹೇಳಿದ್ದನ್ನು ಕೇಳುತ್ತಾರೆ, ಕೇಂದ್ರದಲ್ಲಿ ಯಾವ ಮಂತ್ರಿಗೂ ಸ್ವಾತಂತ್ರ್ಯ ಇಲ್ಲ. ಎಲ್ಲ ನೀತಿ ನಿಯಮಗಳು ಮೋದಿ ಹೇಳಿದಂತೆ ಆಗುತ್ತಿವೆ ಎಂದು ಮೋದಿ ವಿರುದ್ಧ ಖರ್ಗೆ ಗುಡುಗಿದರು.
Advertisement
ಇದೇ ವೇಳೆ ಕೆಪಿಸಿಸಿ ಅಧ್ಯಕ್ಷರ ನೇಮಕ ಶೀಘ್ರದಲ್ಲೇ ಆಗಲಿದೆ ಎಂದು ಹೇಳಿದರು. ಖರ್ಗೆ ಮುಖ್ಯಮಂತ್ರಿಯಾಗಬೇಕು ಎಂಬ ದೇವೇಗೌಡರ ಹೇಳಿಕೆಗೆ ಖಾರವಾಗಿ ಪ್ರತಿಕ್ರಿಯಿಸಿದ ಅವರು, ನನ್ನನ್ನು ಹಲವು ಬಾರಿ ಸಿಎಂ ಮಾಡಾಯ್ತು, ನಡೀರಿ ಎಂದರು.