ನವದೆಹಲಿ: ಲೋಕಾಪಾಲ್ ಆಯ್ಕೆ ಸಮಿತಿಗೆ ವಿಶೇಷ ಆಹ್ವಾನಿತರಾಗಿ ಭಾಗವಹಿಸುವಂತೆ ಪ್ರಧಾನಿ ನರೇಂದ್ರ ಮೋದಿ ಬರೆದ ಪತ್ರದ ಆಹ್ವಾನವನ್ನ ಲೋಕಸಭೆಯ ಕಾಂಗ್ರೆಸ್ ಸಂಸದೀಯ ನಾಯಕ ಮಲ್ಲಿಕಾರ್ಜುನ್ ಖರ್ಗೆ ಅವರು ತಿರಸ್ಕರಿಸಿದ್ದಾರೆ.
ಈ ಕುರಿತು ನವದೆಹಲಿಯಲ್ಲಿ ಪ್ರತಿಕ್ರಿಯಿಸಿದ ಅವರು, ಸಭೆಯಲ್ಲಿ ಭಾಗವಹಿಸಲು ಪ್ರಧಾನಿ ಅವರು ಆಹ್ವಾನ ನೀಡಿದ್ದಾರೆ. ಆದರೆ ಈ ಆಹ್ವಾನದಲ್ಲಿ ನಮ್ಮನ್ನು ವಿಶೇಷ ಆಹ್ವಾನಿತರಾಗಿ ಪರಿಗಣಿಸಿದ್ದಾರೆ. ಒಂದು ವೇಳೆ ಈ ಸಭೆಯಲ್ಲಿ ನಾವು ಭಾಗವಹಿಸಿ ಲೋಕಾಪಾಲ್ ಸ್ಥಾನಕ್ಕೆ ಉತ್ತಮ ಅಭ್ಯರ್ಥಿಯನ್ನು ಆಯ್ಕೆ ಮಾಡದೆ ಇದ್ದರೆ, ವಿಶೇಷ ಆಹ್ವಾನಿತರಾಗಿರುವ ನಮಗೇ ಆದನ್ನು ವಿರೋಧಿಸುವ ಅಧಿಕಾರ ಇರುವುದಿಲ್ಲ ಎಂದು ತಮ್ಮ ಅಸಮಾಧಾನವನ್ನು ಹೊರಹಾಕಿದ್ದಾರೆ.
Advertisement
ವಿಶೇಷ ಆಹ್ವಾನಿತರಿತರಿಗೆ ಲೋಕಪಾಲ್ ನೇಮಕದಲ್ಲಿ ಮಹತ್ವವಿಲ್ಲ. ವಿಶೇಷ ಆಹ್ವಾನಿತರ ಮಾತಿಗೂ ಸಭೆಯಲ್ಲಿ ಬೆಲೆ ಇಲ್ಲ. ಲೋಕಪಾಲ್ ಕಾಯ್ದೆಯಾಗಿ ನಾಲ್ಕು ವರ್ಷವಾಗಿದೆ. ಅಲ್ಲದೇ ಕಾಯ್ದೆಗೆ ತಿದ್ದುಪಡಿಯನ್ನು ತರಲಾಗಿದೆ. ನಂತರ ಮಸೂದೆಯನ್ನು ಸ್ಟ್ಯಾಂಡಿಂಗ್ ಕಮಿಟಿ ಮುಂದೆ ಕಳುಹಿಸಲಾಯಿತು. ಕಳೆದ ಅಧಿವೇಶನದಲ್ಲಿ ತಿದ್ದುಪಡಿ ಮಸೂದೆಗೆ ಅನುಮೋದನೆ ನೀಡಬಹುದಿತ್ತು. ಆದರೆ ಇಂತಹ ಯಾವುದೇ ಕಾರ್ಯವನ್ನು ಮಾಡಲಿಲ್ಲ ಎಂದು ದೂಷಿಸಿದರು.
Advertisement
INC COMMUNIQUE
Letter by LS LoP @MallikarjunINC to the Prime Minister declining invitation to the 'Selection Committee' of the Lokpal as a 'Special Invitee'. pic.twitter.com/GLqeWPH786
— INC Sandesh (@INCSandesh) March 1, 2018
Advertisement
ಲೋಕಪಾಲರ ನೇಮಕಕ್ಕೆ ಈಗಾಗಲೇ ಸುಪ್ರೀಂಕೋರ್ಟ್ ಸೂಚನೆ ನೀಡಿದೆ. ಆದರೆ ಕೇಂದ್ರ ಸರ್ಕಾರ ತರಾತುರಿಯಲ್ಲಿ ಲೋಕಪಾಲ್ ನೇಮಕಕ್ಕೆ ಮುಂದಾಗಿದ್ದಾರೆ. ಪ್ರಜಾಪ್ರಭುತ್ವದಲ್ಲಿ ವಿರೋಧಪಕ್ಷಗಳಿಗೂ ಅವಕಾಶ ನೀಡಬೇಕು. ಲೋಕಪಾಲ್ ತಿದ್ದುಪಡಿ ಮಸೂದೆಯನ್ನು ಅನುಷ್ಠಾನ ಗೊಳಿಸಬೇಕಿತ್ತು. ಲೋಕಪಾಲರ ನೇಮಕದಲ್ಲಿ ವಿಶೇಷ ಆಹ್ವಾನಿತರ ಪಾತ್ರ ಏನೂ ಇಲ್ಲ. ಸಭೆಗೆ ಹೋಗಿ ಮೂಲೆಯಲ್ಲಿ ಕೂತು ಬರಲು ಹೋಗಲ್ಲ. ಪ್ರಧಾನಿ ಮೋದಿಯವರಿಗೆ ಲೋಕಪಾಲರೆಂದರೆ ಅಲರ್ಜಿ. ಗುಜರಾತ್ ನಲ್ಲಿ 13 ವರ್ಷ ಆಡಳಿತ ನಡೆಸಿದರೂ ಲೋಕಾಯುಕ್ತರನ್ನೇ ನೇಮಕ ಮಾಡಲಿಲ್ಲ ಎಂದು ಆರೋಪಿಸಿದರು.
Advertisement
ದೇಶದಲ್ಲಿ ಭ್ರಷ್ಟಾಚಾರ ನಿಗ್ರಹಕ್ಕೆ ಲೋಕಪಾಲ ನೇಮಕ ಆಯ್ಕೆ ನಿರ್ಣಾಯಕವಾಗಿದ್ದು, ಇಂತಹ ಮಹತ್ವದ ಹುದ್ದೆಗೆ ಅರ್ಹರನ್ನು ನೇಮಕ ಮಾಡುವಾಗ ಪ್ರತಿಪಕ್ಷಗಳನ್ನು ಪರಿಗಣನೆಗೆ ತೆಗೆದುಕೊಳ್ಳುವುದು ಅನಿವಾರ್ಯ. ಆದರೆ ಮೋದಿ ಸರ್ಕಾರ ನಾಮಕಾವಸ್ತೆ ಎಂಬಂತೆ ವಿಶೇಷ ಆಹ್ವಾನಿತರಾಗಿ ಆಹ್ವಾನಿಸಿದೆ. ಆ ಮೂಲಕ ಪ್ರತಿಪಕ್ಷಗಳಿಲ್ಲದೇ ಲೋಕಪಾಲ ಆಯ್ಕೆ ಮಾಡುವುದು ಕೇಂದ್ರ ಸರ್ಕಾರದ ಹುನ್ನಾರ ನಡೆಸಿದೆ ಎಂದು ಆರೋಪಿಸಿದರು.
ಲೋಕಪಾಲ ಮತ್ತು ಲೋಕಾಯುಕ್ತ ಕಾಯ್ದೆ ಪ್ರಕಾರ, ಪ್ರಧಾನಿ ನೇತೃತ್ವದ ಆಯ್ಕೆ ಸಮಿತಿಯಲ್ಲಿ ಲೋಕಸಭಾ ಸ್ಪೀಕರ್, ಲೋಕಸಭೆಯ ವಿರೋಧ ಪಕ್ಷ ನಾಯಕ, ಸುಪ್ರೀಂ ಕೋರ್ಟ್‍ನ ಮುಖ್ಯ ನ್ಯಾಯಮೂರ್ತಿ ಅಥವಾ ಅವರು ನೇಮಕ ಮಾಡುವ ಸುಪ್ರೀಂ ಕೋರ್ಟ್‍ನ ಒಬ್ಬರು ನ್ಯಾಯಮೂರ್ತಿ ಮತ್ತು ರಾಷ್ಟ್ರಪತಿ ನೇಮಕ ಮಾಡುವ ಒಬ್ಬ ಕಾನೂನು ತಜ್ಞರು ಸದಸ್ಯರಾಗಿರುತ್ತಾರೆ.
ಲೋಕಸಭೆಯಲ್ಲಿ ವಿರೋಧ ಪಕ್ಷದ ಸ್ಥಾನವನ್ನು ಪಡೆಯಬೇಕಾದರೆ ಒಟ್ಟು ಸದಸ್ಯರ 10ನೇ ಒಂದು ಭಾಗದ ಸದಸ್ಯರು ಆಯ್ಕೆಯಾಗಬೇಕಾಗುತ್ತದೆ. 16ನೇ ಲೋಕಸಭೆಯಲ್ಲಿ ಯಾವೊಂದು ವಿರೋಧ ಪಕ್ಷವು 55 ಸ್ಥಾನಗಳನ್ನು ಗೆದ್ದುಕೊಂಡಿಲ್ಲ. ಕಾಂಗ್ರೆಸ್ 44 ಸ್ಥಾನ ಗೆದ್ದಿದ್ದರೂ ವಿರೋಧ ಪಕ್ಷಕ್ಕೆ ಬೇಕಾಗಿದ್ದ ಸಂಖ್ಯೆಯನ್ನು ತಲುಪದ ಕಾರಣ ಮಲ್ಲಿಕಾರ್ಜುನ ಖರ್ಗೆ ಅವರಿಗೆ ವಿರೋಧ ಪಕ್ಷದ ನಾಯಕನ ಸ್ಥಾನಮಾನ ಸಿಗದೇ ಕಾಂಗ್ರೆಸ್ ಸಂಸದೀಯ ಪಕ್ಷದ ನಾಯಕನ ಸ್ಥಾನಮಾನ ಸಿಕ್ಕಿತ್ತು.