ಬೆಂಗಳೂರು: ರಾಜ್ಯ ಕಾಂಗ್ರೆಸ್‌ನಲ್ಲಿ (Congress) ಪವರ್ ಶೇರಿಂಗ್-ನಾಯಕತ್ವ ಬದಲಾವಣೆ ಕಚ್ಚಾಟ ಮತ್ತಷ್ಟು ಜೋರಾಗಿದೆ. ಅಧಿಕಾರ ಹಸ್ತಾಂತರಿಸುವಂತೆ ಡಿಕೆಶಿ ಬೆಂಬಲಿಗರು ದೆಹಲಿ ಪರೇಡ್ ಮಾಡುತ್ತಿದ್ದಂತೆ ಕಾಂಗ್ರೆಸ್ ಹೈಕಮಾಂಡ್ ಹೈ ಅಲರ್ಟ್ ಆಗಿದೆ. ದೆಹಲಿಯಿಂದ ಬೆಂಗಳೂರಿಗೆ ವಾಪಸ್ಸಾಗಿರೋ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ (Mallikarjun Kharge), ಡಿಕೆ ಬ್ರದರ್ಸ್‌ಗೆ ತುರ್ತು ಬುಲಾವ್ ನೀಡಿದ್ದಾರೆ.
ಇಂದು ರಾತ್ರಿ ಅಥವಾ ಶನಿವಾರ ಖುದ್ದಾಗಿ ಭೇಟಿ ನೀಡುವಂತೆ ಫರ್ಮಾನು ನೀಡಿದ್ದಾರೆ. ಇನ್ನೂ ಸಿದ್ದರಾಮಯ್ಯ ಬಣ ಕೂಡ ಆಕ್ಟೀವ್ ಇಂದು ರಾತ್ರಿ ಕೆಲ ಸಚಿವರು ಖರ್ಗೆ ಭೇಟಿಯಾಗೋ ಸಾಧ್ಯತೆಗಳಿವೆ. ಶನಿವಾರ ಸಿಎಂ ಸಿದ್ದರಾಮಯ್ಯ (Siddaramaiah) ಕೂಡ ಭೇಟಿಗೆ ಟೈಂ ಕೇಳಿದ್ದಾರೆ. ಡಿಕೆ ಹಾಗೂ ಸಿಎಂ ಜೊತೆ ಪ್ರತ್ಯೇಕ ಮಾತುಕತೆ ಬಳಿಕ ತಿಂಗಳಾಂತ್ಯಕ್ಕೆ ಕೇಂದ್ರ ನಾಯಕರ ಜೊತೆ ಸಭೆ ನಡೆಯೋ ಸಾಧ್ಯತೆಗಳಿವೆ.

ಈ ಬೆಳವಣಿಗೆ ಮಧ್ಯೆಯೇ ರಾಜ್ಯ ಉಸ್ತುವಾರಿ ಸುರ್ಜೇವಾಲ ರಾಜ್ಯ ನಾಯಕರಿಗೆ ಸಂದೇಶ ನೀಡಿದ್ದು, ಬಹಿರಂಗ ಹೇಳಿಕೆ ನೀಡದಂತೆ ಸೂಚಿಸಿದ್ದಾರೆ. ಈ ಮಧ್ಯೆ, ಮೈಸೂರಿನಲ್ಲಿ ಮಾತನಾಡಿರೋ ಸಿಎಂ ಸಿದ್ದರಾಮಯ್ಯ, 5 ವರ್ಷವೂ ನಾನೇ ಸಿಎಂ ಅಂದಿದ್ದಾರೆ. ಇನ್ನೂ, 2 ಬಜೆಟ್ ಮಂಡಿಸಲಿದ್ದು ಹೈಕಮಾಂಡ್ ಕೈಗೊಳ್ಳೋ ನಿರ್ಧಾರಕ್ಕೆ ನಾನು ಡಿಕೆಶಿ ಹಾಗೂ ಎಲ್ಲರೂ ಬದ್ಧ ಆಗಿರಬೇಕು ಅಂದಿದ್ದಾರೆ. ಇನ್ನೊಂದೆಡೆ, ಐದು ವರ್ಷವೂ ನಾನೇ ಸಿಎಂ ಅಂದಿರೋ ಸಿದ್ದರಾಮಯ್ಯಗೆ ಡಿಸಿಎಂ ಡಿ.ಕೆ. ಶಿವಕುಮಾರ್, ಆಲ್ ದಿ ಬೆಸ್ಟ್ ಹೇಳಿದ್ದಾರೆ. ಶಾಸಕರು ಹೈಕಮಾಂಡ್ ಭೇಟಿ ಮಾಡೋದರಲ್ಲಿ ತಪ್ಪೇನಿಲ್ಲ. ನಾನು ಅವರನ್ನು ತಡೆಯೋಕೆ ಆಗಲ್ಲ. 140 ಶಾಸಕರಿಗೆ ನಾನು ಅಧ್ಯಕ್ಷ, ಗುಂಪುಗಾರಿಕೆ ನನ್ನ ರಕ್ತದಲ್ಲೇ ಇಲ್ಲ ಅಂದಿದ್ದಾರೆ.
ಸಿಎಂ-ಡಿಸಿಎಂ ಮುಖಾಮುಖಿ?
ಕಾಂಗ್ರೆಸ್‌ನಲ್ಲಿನ ಕುರ್ಚಿ ಕಿತ್ತಾಟ ದಿಲ್ಲಿ ಅಂಗಳ ತಲುಪಿದೆ. ನಿನ್ನೆ ಕೆಲ ಶಾಸಕರು ಖರ್ಗೆ ಭೇಟಿಯಾದ ಬೆನ್ನಲ್ಲೇ ಇವತ್ತು ಸಚಿವ ಚಲುವರಾಯಸ್ವಾಮಿ ನೇತೃತ್ವದಲ್ಲಿ ಕೆಲ ಶಾಸಕರು ಖರ್ಗೆ ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ. ಪಕ್ಷ ಸಂಘಟನೆ, ಒಕ್ಕಲಿಗ ಕ್ಷೇತ್ರಗಳ ಮೇಲಿನ ಹಿಡಿತಕ್ಕೆ ಡಿ.ಕೆ. ಶಿವಕುಮಾರ್‌ಗೆ ನಾಯಕತ್ವ ವಹಿಸಬೇಕೆಂಬ ಪ್ರಸ್ತಾಪ ಮುಂದಿಟ್ಟಿದ್ದಾರೆ. ಚಲುವರಾಯಸ್ವಾಮಿ ದಿಲ್ಲಿ ಪ್ರವಾಸದಲ್ಲಿ ಇರೋ ಹೊತ್ತಲ್ಲೇ ಸಿಎಂ ಸಿದ್ದರಾಮಯ್ಯ ಕರೆ ಮಾಡಿ, ದಿಲ್ಲಿ ಪ್ರವಾಸದ ಮಾಹಿತಿ ಪಡೆದಿದ್ದಾರೆ.
ದೆಹಲಿಯಿಂದ ವಾಪಸ್ ಬಂದ ಚಲುವರಾಯಸ್ವಾಮಿ, ಪಕ್ಷದಲ್ಲಿ ಸಮಸ್ಯೆ ಇದೆ ಅಂತ ಪರೋಕ್ಷವಾಗಿ ಒಪ್ಪಿಕೊಂಡಿದ್ದು, ಹೈಕಮಾಂಡ್ ಸಮರ್ಥವಾಗಿದೆ ಅಂದಿದ್ದಾರೆ. ಇನ್ನು, ಡಿಕೆಶಿ ಬೆಂಬಲಿಗರು ಬಹಿರಂಗವಾಗಿಯೇ ಪಟ್ಟಕ್ಕೆ ಬೇಡಿಕೆ ಇಟ್ಟಿದ್ದಾರೆ. ಡಿಕೆಶಿ ಅವಕಾಶ ಕೊಡಬೇಕು ಅನ್ನೋ ಬೇಡಿಕೆ ಮುಂದಿಟ್ಟಿದ್ದಾರೆ. ಈ ಬೆಳವಣಿಗೆಗಳ ಮಧ್ಯೆ, ಸದಾಶಿವನಗರದ ನಿವಾಸಕ್ಕೆ ಡಿ.ಕೆ. ಸುರೇಶ್ ಭೇಟಿ ಕೊಟ್ಟು, ಒನ್ ಟು ಒನ್ ಪ್ರತ್ಯೇಕ ಮಾತುಕತೆ ನಡೆಸಿದ್ದಾರೆ. ಆದ್ರೆ ಭೇಟಿಯ ಉದ್ದೇಶ ಏನು ಅನ್ನೋ ಮಾಹಿತಿ ಕೊಡಲು ಡಿ.ಕೆ. ಸುರೇಶ್ ನಿರಾಕರಿಸಿದ್ದಾರೆ.
ಸತೀಶ್ ಜಾರಕಿಹೊಳಿ ನಿವಾಸದಲ್ಲಿ ಡಿನ್ನರ್ ಮೀಟಿಂಗ್!
ಒಂದು ಕಡೆ ಡಿಸಿಎಂ ಡಿ.ಕೆ. ಶಿವಕುಮಾರ್ ಬಣ ದೆಹಲಿ ಮಟ್ಟದಲ್ಲಿ ರಾಜಕೀಯ ದಾಳ ಉರುಳಿಸಿದ್ರೆ, ಸಿಎಂ ಬಣವೇನೂ ಕಮ್ಮಿ ಇಲ್ಲ. ನಿನ್ನೆ ರಾತ್ರಿ ಸತೀಶ್ ಜಾರಕಿಹೊಳಿ ನಿವಾಸದಲ್ಲಿ ಪರಮೇಶ್ವರ್, ದಿನೇಶ್ ಗುಂಡೂರಾವ್, ಮಹದೇವಪ್ಪ, ವೆಂಕಟೇಶ್ ಸೇರಿ ಹಲವು ಸಚಿವರು ಡಿನ್ನರ್ ಮೀಟಿಂಗ್ ನಡೆಸಿದ್ದಾರೆ. ಇವತ್ತು ಬೆಳಗ್ಗೆಯೂ ಸಿಎಂ ನಿವಾಸದಲ್ಲಿ ಬ್ಯಾಕ್ ಟು ಬ್ಯಾಕ್ ಮೀಟಿಂಗ್‌ಗಳೂ ನಡೆದಿವೆ. ಸಚಿವ ಬೈರತಿ ಸುರೇಶ್, ಜಮೀರ್ ಅಹ್ಮದ್, ಹೆಚ್‌ಕೆ ಪಾಟೀಲ್ ಸೇರಿದಂತೆ, ಹಲವು ಸಚಿವರು ಹಾಗೂ ಶಾಸಕರು ಸಭೆ ನಡೆಸಿದ್ದಾರೆ. ಡಿನ್ನರ್ ಪಾಲಿಟಿಕ್ಸ್ ಅನ್ನು ಕೆಲವು ಸಚಿವರು ಸಮರ್ಥಿಸಿಕೊಂಡಿದ್ದರೆ, ಡಿಕೆ ಶಿವಕುಮಾರ್ ವ್ಯಂಗ್ಯವಾಡಿದ್ದಾರೆ.
ಕಾಂಗ್ರೆಸ್‌ನಲ್ಲಿ ನಂಬರ್ ಗೇಮ್ ಶುರುವಾದಂತೆ ಕಾಣುತ್ತಿದೆ. ಒಂದು ವೇಳೆ ಸಂಖ್ಯಾಬಲಕ್ಕೆ ಹೈಕಮಾಂಡ್ ಮುಂದಾದ್ರೆ ತಮ್ಮ ತಮ್ಮ ಬಲಾಬಲ ಸಾಬೀತಿಗೆ ಸಿಎಂ ಹಾಗೂ ಡಿಸಿಎಂ ಮುಂದಾದಂತೆ ಕಾಣುತ್ತಿದೆ. ತಟಸ್ಥ ಬಣದಲ್ಲಿರೋರನ್ನ ವಿಶ್ವಾಸಕ್ಕೆ ತೆಗೆದುಕೊಳ್ಳಲು ಡಿಕೆ ಬಣ ಮುಂದಾಗಿದೆ. ಇನ್ನು, ಅಪರಾಧ ಪ್ರಕರಣದಲ್ಲಿ ಸಿಲುಕಿ ಪರಪ್ಪನ ಅಗ್ರಹಾರ ಜೈಲು ಸೇರಿರೋ ವಿನಯ್ ಕುಲಕರ್ಣಿ ಹಾಗೂ ವೀರೇಂದ್ರ ಪಪ್ಪಿಯನ್ನೂ ಕೂಡ ಡಿಕೆಶಿ ಸಂಪರ್ಕಿಸಿದ್ದಾರೆ. ಜೈಲು ಪರಿಶೀಲನೆ ನೆಪದಲ್ಲಿ ಇಬ್ಬರೊಂದಿಗೂ ಡಿಕೆ ಚರ್ಚಿಸಿದ್ದಾರೆ.
ಸಿದ್ದು ಬಣದ ಲೆಕ್ಕಾಚಾರ ಏನು..?
* ಬರೋಬ್ಬರಿ 38-40 ಶಾಸಕರು ಹೈಕಮಾಂಡ್ ಲೆಕ್ಕದಲ್ಲಿ ಇದ್ದಾರೆ
* ಹೈಕಮಾಂಡ್ ಹೇಳಿದಂಗೆ ನಾವು ಎಂಬ ಸಂದೇಶ ರವಾನಿಸಿರುವ ಶಾಸಕರು
* ಉಳಿದ 100 ಶಾಸಕರಲ್ಲಿ ಯಾರ ಪರ…ಯಾರು ಅನ್ನೋದು ಕುತೂಹಲ
* ಇಂದು ರಾತ್ರಿಯೇ ಖರ್ಗೆ ಭೇಟಿಗೆ ಸಿಎಂ ಬಣ ತೀರ್ಮಾನ
* ಗೊಂದಲ ಬಗೆಹರಿಸಿ ಅಂತ ಹೈಕಮಾಂಡ್‌ಗೆ ಮನವಿ ಸಾಧ್ಯತೆ
* ಡಿಕೆ ಬಣದ ಡೆಲ್ಲಿ ಪರೇಡ್ ವಿರುದ್ಧ ದೂರು ನೀಡೋ ಸಾಧ್ಯತೆ
ಡಿಕೆ ಬಣದ ಲೆಕ್ಕಾಚಾರ ಏನು..?
* ಹೈಕಮಾಂಡ್ ಮುಂದೆ ಡಿಕೆ ಬಣ ಒಕ್ಕಲಿಗ ದಾಳ
* ದೆಹಲಿ ಚಲೋ ಅನಿವಾರ್ಯವಾದ್ರೆ 2 ಹಂತದಲ್ಲಿ ಪರೇಡ್?
* ಡಿಕೆ ಆಪ್ತ ವಲಯದ ಶಾಸಕರಿಂದ ತಟಸ್ಥ ಶಾಸಕರಿಗೆ ಗುಪ್ತ ಕರೆ?
* ಮುಂದಿನ 15 ವರ್ಷದ ರಾಜಕೀಯ ಭವಿಷ್ಯದ ಆಮಿಷ
* ನಂಬರ್ ಹೆಚ್ಚಿಸಿಕೊಳ್ಳಲು ವಿನಯ್, ಪಪ್ಪಿ ಭೇಟಿಯಾದ್ರಾ ಡಿಕೆ…?
