ಯಾದಗರಿ: ನಗರದಿಂದ ಹತ್ತು ಕಿಲೋ ಮೀಟರ್ ದೂರದಲ್ಲಿರುವ ಮೈಲಾಪುರದ ಬೆಟ್ಟದ ಮೇಲೆ ನೆಲಸಿರುವ ಮಲ್ಲಯ್ಯನ ಜಾತ್ರೆ ವರ್ಷಕ್ಕೊಮ್ಮೆ ನಡೆಯುತ್ತದೆ. ಅದರಲ್ಲೂ ಮಹಾ ಸಂಕ್ರಾಂತಿಯ ಹಬ್ಬದಂದು ಈ ಜಾತ್ರೆ ಅದ್ಧೂರಿಯಾಗಿ ನಡೆಯುತ್ತದೆ.
ಈ ಜಾತ್ರೆ ಅಂದರೆ ನಮ್ಮ ರಾಜ್ಯ ಮಾತ್ರವಲ್ಲದೆ, ಅಕ್ಕಪಕ್ಕದ ಆಂಧ್ರ, ತೆಲಂಗಾಣ ಮತ್ತು ಮಹಾರಾಷ್ಟ್ರದ ಲಕ್ಷಾಂತರ ಭಕ್ತರು ಇಲ್ಲಿಗೆ ಬಂದು ಮಲ್ಲಯ್ಯನ ದರ್ಶನ ಪಡೆಯುತ್ತಾರೆ. ಹೀಗೆ ಬರುವ ಭಕ್ತರು ದೇವಸ್ಥಾನದ ಕೆಳಗಿರುವ ಕೆರೆಯಲ್ಲಿ ಸ್ನಾನ ಮಾಡಿದರೆ, ಮಲ್ಲಯ್ಯ ಭಕ್ತರ ಪಾಪ ಕಳೆಯುತ್ತಾನೆ ಎಂಬ ನಂಬಿಕೆ ಇಲ್ಲಿದೆ. ಹೀಗಾಗಿ ಇಲ್ಲಿ ಜಾತ್ರೆಯ ದಿನ ಮತ್ತು ಜಾತ್ರೆಯ ಮುಂದಿನ ದಿನ ಸಾವಿರಾರು ಭಕ್ತರು ಈ ಕೆರೆಯಲ್ಲಿ ಪುಣ್ಯ ಸ್ನಾನ ಮಾಡುವುದು ವಾಡಿಕೆಯಾಗಿದೆ.
ಜಾತ್ರೆಯ ದಿನ ಬೆಟ್ಟದಿಂದ ಕೇಳಗಿಳಿದು ಕುದುರೆ ಮೇಲೇರಿ, ಗಂಗಾ ಪೂಜೆಗೆ ತೆರಳುವ ಮಲ್ಲಯ್ಯನ ಮೂರ್ತಿಯ ಪಲ್ಲಕ್ಕಿ ಸವಾರಿ ಒಂದು ವಿಶಿಷ್ಟವಾದ ಆಚರಣೆ. ಹೀಗೆ ಬೆಟ್ಟದಿಂದ ಕೆರೆಯ ಸ್ನಾನಕ್ಕೆ ತೆರಳುವ ಮಲ್ಲಯ್ಯ ಭಕ್ತರನ್ನು ನೋಡುವುದು ಕಣ್ಣಿಗೆ ಹಬ್ಬ.
ಮಲ್ಲಯ್ಯನ ಪ್ರಿಯವಾದ ಭಂಡಾರವನ್ನು ಚೆಲ್ಲುತ್ತಾ, ಹರಕೆ ಕಟ್ಟಿದ ಭಕ್ತರು ಬಣ್ಣ ಬಣ್ಣದ ಛತ್ರಿಯನ್ನು ಮತ್ತು ರೈತರು ತಾವು ಹೊಲದಲ್ಲಿ ಬೆಳೆಯುವ ಫಸಲುಗಳನ್ನು ಪಲ್ಲಕಿ ಮೆರವಣಿಗೆ ವೇಳೆ ಮಲ್ಲಯ್ಯ ಮೂರ್ತಿಯತ್ತ ಎಸೆಯುತ್ತಾರೆ. ಯಾಕೆಂದರೆ ಮೂರ್ತಿಯ ವೇಳೆ ಫಸಲುಗಳನ್ನು ಎಸೆದರೆ ಒಳಿತು ಆಗುತ್ತೆ ಅನ್ನುವುದು ಇಲ್ಲಿಗೆ ಭಕ್ತರ ನಂಬಿಕೆಯಾಗಿದೆ.