ಶಿವಮೊಗ್ಗ: ಉಪಮುಖ್ಯಮಂತ್ರಿ ಹಾಗೂ ಬೆಂಗಳೂರು ನಗರಾಭಿವೃದ್ಧಿ ಸಚಿವ ಡಾ.ಜಿ. ಪರಮೇಶ್ವರ್ ಮಲೆನಾಡಿನ ಜನರ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಬೆಂಗಳೂರಿಗರ ಬಾಯಾರಿಸಲು ಶರಾವತಿ ನದಿ ನೀರು ತರುತ್ತೇವೆ ಎಂದ ಪರಮೇಶ್ವರ್ ಅವರ ಹೇಳಿಕೆಗೆ ತೀವ್ರ ವಿರೋಧ ವ್ಯಕ್ತವಾಗಿದೆ.
ಲಿಂಗನಮಕ್ಕಿಯಿಂದ 425 ಕಿಲೋಮೀಟರ್ ದೂರದಲ್ಲಿರುವ ಬೆಂಗಳೂರಿಗೆ ನೀರನ್ನು ತರುವ ಬಗ್ಗೆ ವಿಸ್ತ್ರತ ಯೋಜನಾ ವರದಿ ತಯಾರಿಸಲು ಸೂಚಿಸಲಾಗಿದೆ ಎಂದು ಪರಮೇಶ್ವರ್ ಹೇಳಿದ್ದಾರೆ. ಬಿ.ಎನ್. ತ್ಯಾಗರಾಜನ್ ಸಮಿತಿ ವರದಿ ಆಧರಿಸಿ, 151 ಅಡಿ ಸಾಮರ್ಥ್ಯದ ಲಿಂಗನಮಕ್ಕಿ ಜಲಾಶಯದಿಂದ ಮೊದಲ ಹಂತದಲ್ಲಿ 30 ಟಿಎಂಸಿ ಹಾಗೂ ಎರಡನೇ ಹಂತದಲ್ಲಿ 60 ಟಿಎಂಸಿ ನೀರನ್ನು ಬೆಂಗಳೂರಿಗೆ ಪೂರೈಸಲು ಸರ್ಕಾರ ಉದ್ದೇಶಿಸಿದೆ.
ಕುಸಿದ ಅಂತರ್ಜಲ ಮಟ್ಟ: ಶರಾವತಿಗೆ ಲಿಂಗನಮಕ್ಕಿ ಅಣೆಕಟ್ಟು ನಿರ್ಮಾಣ ಮಾಡಿದಾಗ ಸುಮಾರು 12 ಸಾವಿರ ಎಕರೆ ದಟ್ಟ ಕಾಡು ಮುಳುಗಡೆ ಆಗಿದೆ. ಇದರಿಂದಾಗಿ ಈ ಭಾಗದಲ್ಲಿ ಮಳೆ ಪ್ರಮಾಣ ಅಗಾಧವಾಗಿ ಕಡಿಮೆ ಆಗಿದೆ. 320 ಇಂಚು ನೀರು ಬರುತ್ತಿದ್ದ ಈ ಪ್ರದೇಶದಲ್ಲಿ ಈಗ ಸರಾಸರಿ 70 ಇಂಚು ಬೀಳುತ್ತಿದೆ. ಇಷ್ಟು ನೀರು ವಿದ್ಯುತ್ ಉತ್ಪಾದನೆಗೆ ಸಾಕಾಗುವುದಿಲ್ಲ. ಇನ್ನು ಬೆಂಗಳೂರಿಗೆ ಕುಡಿಯಲು ನೀರು ಕೊಡಲು ಸಾಧ್ಯವೇ ಎಂದು ಹಿರಿಯ ಸಾಹಿತಿ ನಾ ಡಿಸೋಜಾ ಪ್ರಶ್ನಿಸಿದ್ದಾರೆ.
ಅಗಾಧ ಜೀವವೈವಿಧ್ಯತೆಯ ತಾಣವಾಗಿರುವ ಶರಾವತಿ ಲಿಂಗನಮಕ್ಕಿ ಪ್ರದೇಶದಿಂದ ನೀರನ್ನು ದೂರದ ಬೆಂಗಳೂರಿಗೆ ಸಾಗಿಸುವ ಬಗ್ಗೆ ಯೋಚಿಸುವುದು ಸರ್ಕಾರದ ಮೂರ್ಖತನ ಎನ್ನುತ್ತಾರೆ ಪರಿಸರವಾದಿಗಳು. ಸರ್ಕಾರ ಇದನ್ನು ಕೈಬಿಡದಿದ್ದಲ್ಲಿ ಮಲೆನಾಡಿನಲ್ಲಿ ಮತ್ತೊಂದು ದೊಡ್ಡ ಚಳವಳಿ ನಡೆಯಲಿದೆ ಎಂದು ಹಿರಿಯ ರಂಗಕರ್ಮಿ ಪ್ರಸನ್ನ ಎಚ್ಚರಿಸಿದ್ದಾರೆ.
ಅಧಿಕ ಹಣ ಬೇಡುವ, ಹೆಚ್ಚು ಅರಣ್ಯ ನಾಶವಾಗುವ ಇಂಥ ಯೋಜನೆಗಳನ್ನು ಕೈಬಿಡಿ, ಮಳೆ ಕೊಯ್ಲು, ಕೆರೆಗಳ ಪುನರುಜ್ಜೀವ ಇನ್ನಿತರ ಅಂಶಗಳ ಬಗ್ಗೆ ಗಮನ ಹರಿಸಿ. ವಿನಾಶಕಾರಿಯಾದ ಇಂಥ ಯೋಜನೆಗಳಿಗೆ ಕೈಹಾಕಬೇಡಿ ಎಂಬುದು ಶರಾವತಿ ನದಿ ಪಾತ್ರದ ಜನತೆ ಆಗ್ರಹಿಸಿದ್ದಾರೆ.
ಒಟ್ಟಿನಲ್ಲಿ ಲಿಂಗನಮಕ್ಕಿಯಿಂದ ಬೆಂಗಳೂರಿಗೆ ನೀರು ಪೂರೈಸುವ ಬಗ್ಗೆ ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಕಂಡ ಕನಸು ಆರಂಭದಲ್ಲೇ ಭಾರೀ ವಿರೋಧ ಕೇಳಿಬಂದಿದೆ. ಈ ವಿರೋಧ ಲೆಕ್ಕಿಸದೆ ಸರ್ಕಾರ ಮುಂದುವರಿದಲ್ಲಿ ಮಲೆನಾಡು ಇನ್ನೊಂದು ಚಳವಳಿಗೆ ಸಜ್ಜಾಗಿದೆ.
2030ಕ್ಕೆ ಬೆಂಗಳೂರು:
2030ರ ವೇಳೆಗೆ ಬೆಂಗಳೂರಿನ ಜನಸಂಖ್ಯೆ 2.5 ಕೋಟಿ ಆಗುವ ಸಾಧ್ಯತೆಗಳಿವೆ. ಬೆಂಗಳೂರಿಗೆ ವಾರ್ಷಿಕ 54 ಟಿಎಂಸಿ ನೀರಿನ ಅಗತ್ಯವಿದ್ದು, ಕಾವೇರಿಯಿಂದ ಈಗಾಗಲೇ 30 ಟಿಎಂಸಿ ನೀರು ಪಡೆಯಲಾಗುತ್ತಿದೆ. ಆದ್ರೆ ಕಾವೇರಿಯಿಂದ ಹೆಚ್ಚಿನ ನೀರು ಪಡೆಯುವುದು ಅಸಾಧ್ಯದ ಮಾತು. ಹಾಗದ್ರೆ 2030ಕ್ಕೆ ಬೆಂಗಳೂರಿಗೆ 24 ಟಿಎಂಸಿ ಕುಡಿಯುವ ನೀರಿನ ಸಮಸ್ಯೆ ಉಂಟಾಗುವ ಸಾಧ್ಯತೆ ಆಗಲಿದೆ.
ಟಿಎಂಸಿ ಅಂದರೆ ಎಷ್ಟು?
ಕ್ಯೂಸೆಕ್ ಎಂಬುದು Cubic feet per Second ಹ್ರಸ್ವರೂಪ ಪ್ರತಿ ಸೆಕೆಂಡಿಗೆ ಒಂದು ಘನ ಅಡಿ ನೀರು ಹರಿದರೆ ಅದು ಒಂದು ಕ್ಯೂಸೆಕ್ ನೀರು ಎಂದು ಕರೆಯಲ್ಪಡುತ್ತದೆ. ಒಂದು ಘನ ಅಡಿ ನೀರನ್ನು ಲೀಟರುಗಳಿಗೆ ಪರಿವರ್ತಿಸಿದರೆ ಸುಮಾರು 28.317 ಲೀಟರುಗಳಾಗುತ್ತವೆ. 11,524 ಕ್ಯೂಸೆಕ್ ನೀರು 24 ಗಂಟೆಯ ಕಾಲ ನಿರಂತರ ಹರಿದರೆ ಒಂದು ಟಿಎಂಸಿ ಎಂದು ಕರೆಯಲಾಗುತ್ತದೆ. 10 ಸಾವಿರ ಕ್ಯೂಸೆಕ್ ನೀರು 24 ಗಂಟೆ ನಿರಂತರ ಹರಿದರೆ 0.864 ಟಿಎಂಸಿ ಅಡಿ ಆಗುತ್ತದೆ. 35.87 ಅಡಿ ಅಳದಷ್ಟು ನೀರನ್ನು ಒಂದು ಚದರ ಮೈಲಿ ಪ್ರದೇಶದಲ್ಲಿ ಸಂಗ್ರಹಿಸಿದರೆ ಒಂದು ಟಿಎಂಸಿ ಅಡಿ ಆಗುತ್ತದೆ.