ಶಿವಮೊಗ್ಗ: ಅರಣ್ಯ ಭೂಮಿ ಒತ್ತುವರಿ ಪ್ರಕರಣದಲ್ಲಿ ಕರ್ನಾಟಕ ಭೂ ಒತ್ತುವರಿ ನಿಷೇಧ ವಿಶೇಷ ನ್ಯಾಯಾಲಯವೂ ಕರ್ನಾಟಕ ಭೂ ಕಬಳಿಕೆ ನಿಷೇಧ ಕಾಯ್ದೆ 2011 ಅನ್ವಯ ಮಲೆನಾಡಿನ ಇಬ್ಬರು ರೈತರಿಗೆ ಜೈಲು ಶಿಕ್ಷೆ ವಿಧಿಸಿ ಆದೇಶ ನೀಡಿದೆ. ವಿಶೇಷ ನ್ಯಾಯಾಲಯ ರಚನೆ ಆದ ಮೇಲೆ ಇದು ಜೈಲು ಶಿಕ್ಷೆಗೆ ಗುರಿಯಾದ ಜಿಲ್ಲೆಯ ಮೊದಲ ಪ್ರಕರಣವಾಗಿದೆ.
ಸಾಗರ ತಾಲೂಕು ಆವಿನಹಳ್ಳಿ ಗ್ರಾಮದಲ್ಲಿ ಮೂರು ಎಕರೆ ಅರಣ್ಯ ಭೂಮಿ ಒತ್ತುವರಿ ಮಾಡಿದ್ದ ವಾಸು, ಹಾಗೂ ಎರಡು ಎಕರೆ ಒತ್ತುವರಿ ಮಾಡಿದ್ದ ಗಣಪತಿ ಶಿಕ್ಷೆಗೆ ಒಳಗಾದ ರೈತರು. ಈ ಅರಣ್ಯ ಒತ್ತುವರಿ ಬಗ್ಗೆ ಸಾಗರ ವಲಯ ಅರಣ್ಯಾಧಿಕಾರಿ ದೂರು ಸಲ್ಲಿಸಿದ್ದರು. ದೂರಿನ ಹಿನ್ನೆಲೆಯಲ್ಲಿ ವಿಚಾರಣೆ ನಡೆಸಿದ ಬಳಿಕ, ಇವರಿಬ್ಬರಿಗೂ ಒಂದು ವರ್ಷ ಜೈಲು, 10 ಸಾವಿರ ರೂಪಾಯಿ ದಂಡ ವಿಧಿಸಿ ಬೆಂಗಳೂರಿನ ಕರ್ನಾಟಕ ಭೂಒತ್ತುವರಿ ನಿಷೇಧ ವಿಶೇಷ ನ್ಯಾಯಲಯದ ತೀರ್ಪು ನೀಡಿದೆ.
Advertisement
Advertisement
ಮಲೆನಾಡಿನಲ್ಲಿ ಅರಣ್ಯ ಭೂಮಿ ಒತ್ತುವರಿ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಇನ್ನೂ ಐನೂರಕ್ಕೂ ಹೆಚ್ಚು ಪ್ರಕರಣಗಳು ವಿಲೇವಾರಿ ಹಂತದಲ್ಲಿದ್ದು, ಇಷ್ಟೂ ಜನ ತಮ್ಮ ಬದುಕು ಕಟ್ಟಿಕೊಂಡ ತೋಟ, ಗದ್ದೆ, ಮನೆಗಳನ್ನು ತೆರವು ಮಾಡಬೇಕಾಗಿದೆ. ಇಷ್ಟೇ ಅಲ್ಲದೆ, ಇವರೆಲ್ಲರೂ ಜೈಲು ಶಿಕ್ಷೆ ಅಥವಾ ದಂಡ ಪಾವತಿಸಿ, ಬೀದಿಗೆ ಬೀಳುವಂತ ಪರಿಸ್ಥಿತಿ ನಿರ್ಮಾಣವಾಗಿದೆ.
Advertisement
Advertisement
ಇದೇ ಪ್ರಕರಣ ಮಾದರಿಯಲ್ಲಿ ವಿಚಾರಣೆಗಳು ನಡೆದಲ್ಲಿ ಶಿವಮೊಗ್ಗ ಜಿಲ್ಲೆಯೊಂದರಲ್ಲೇ ಸರಿ ಸುಮಾರು ಒಂದು ಲಕ್ಷ ಜನ ಜೈಲು ಶಿಕ್ಷೆಗೆ ಗುರಿಯಾಗುವ ಸಾಧ್ಯತೆ ಇದೆ. ಬಗರ್ ಹುಕುಂ, ಅರಣ್ಯ ಹಕ್ಕು ಇನ್ನಿತರ ಕಾಯ್ದೆಗಳ ಅಡಿ ಭೂ ಮಂಜೂರಾತಿಗೆ ಲಕ್ಷಾಂತರ ಜನ ಅರ್ಜಿ ಸಲ್ಲಿಸಿದ್ದರು. ಇವುಗಳಲ್ಲಿ ತಿರಸ್ಕೃತ ಅರ್ಜಿಗಳನ್ನು ಸಾರಾಸಗಟಾಗಿ ಅಕ್ರಮ ಎಂದು ಅರಣ್ಯ ಇಲಾಖೆ ಹಾಗೂ ಕಂದಾಯ ಇಲಾಖೆ ಪರಿಗಣಿಸಿ, ಪ್ರಕರಣ ದಾಖಲಿಸಲು ಆರಂಭಿಸಿವೆ.
ಇಡೀ ಮಲೆನಾಡು ಈ ತೀರ್ಪಿನಿಂದಾಗಿ ಬೆಚ್ಚಿ ಬಿದ್ದಿದೆ. ಲೋಕಸಭಾ ಚುನಾವಣಾ ಹೊಸ್ತಿಲಲ್ಲಿ ಈ ಘಟನೆ ಮಹತ್ವದ ಪಾತ್ರ ವಹಿಸುವ ಸಾಧ್ಯತೆ ಇದೆ. ಅಲ್ಲದೆ ಕರ್ನಾಟಕ ಭೂ ಕಬಳಿಕೆ ನಿಷೇಧ ಕಾಯ್ದೆ 2011ರ ಅನ್ವಯ ಮಲೆನಾಡಿನ ಲಕ್ಷಾಂತರ ಕೃಷಿಕರು ಭೂಮಿ ಕಳೆದುಕೊಳ್ಳಲಿದ್ದಾರೆ. ಇದೂವರೆಗೆ ಬಂದ ಎಲ್ಲಾ ಸರ್ಕಾರಗಳೂ, ರಾಜಕೀಯ ಪಕ್ಷಗಳೂ ಈ ಕಾಯ್ದೆ ರದ್ದು ಮಾಡುತ್ತೇವೆ ಎಂದು ಮೊಸಳೆ ಕಣ್ಣೀರು ಸುರಿಸಿವೆ. ಆದರೆ, ಮಲೆನಾಡಿನ ರೈತರು ಭೂಗಳ್ಳರು ಎಂಬ ಹಣೆಪಟ್ಟೆ ಕಟ್ಟಿಕೊಳ್ಳುವುದು ತಪ್ಪಿಲ್ಲ. ಚುನಾವಣೆ ಮುಗಿಯುತ್ತಿದ್ದಂತೆ ಇಂಥ ಪ್ರಕರಣಗಳು ಮಲೆನಾಡಿನಾದ್ಯಂತ ತಲ್ಲಣ ಮೂಡಿಸಲಿವೆ.
ಕರ್ನಾಟಕ ಭೂ ಕಬಳಿಕೆ ನಿಷೇಧ ಕಾಯ್ದೆ 2011 ಯ ಸೆಕ್ಷನ್ 7ರ ಪ್ರಕಾರ ಭೂಕಬಳಿಕೆ ಪ್ರಕರಣಗಳ ವಿಚಾರಣೆಗೆ ವಿಶೇಷ ನ್ಯಾಯಾಲಯ ಸ್ಥಾಪನೆ ಮಾಡಬಹುದು. ಇದರ ಅನ್ವಯ ಸಿದ್ದರಾಮಯ್ಯ ಸರ್ಕಾರ ಅಸ್ತಿತ್ವದಲ್ಲಿ ಇದ್ದಾಗ ವಿಶೇಷ ನ್ಯಾಯಾಲಯ ಸ್ಥಾಪನೆಯಾಯಿತು. ಇಡೀ ರಾಜ್ಯದ ಯಾವುದೇ ಭಾಗದಲ್ಲಿ ಕಂದಾಯ, ಅರಣ್ಯ, ನಗರಸಭೆ, ಗ್ರಾಪಂ ಸೇರಿದಂತೆ ಯಾವುದೇ ರೀತಿಯ ಸರ್ಕಾರಿ ಭೂಮಿ ಕಬಳಿಕೆ ವ್ಯಾಜ್ಯಗಳು ಇದೊಂದೇ ನ್ಯಾಯಾಲಯದಲ್ಲಿ ನಡೆಯುತ್ತವೆ.
ಮಲೆನಾಡಿನ ಯಾವುದೋ ಮೂಲೆಯಲ್ಲಿ ಒಂದು ಎಕರೆ ಭೂಮಿಯನ್ನು ಜೀವನಕ್ಕಾಗಿ ಸಾಗುವಳಿ ಮಾಡಿದ್ದರೆ, ಆ ರೈತ ಬೆಂಗಳೂರಿನ ವಿಶೇಷ ನ್ಯಾಯಾಲಯಕ್ಕೆ ಓಡಾಡಬೇಕು. ಮಲೆನಾಡಿನ ರೈತರಿಗೆ ಈ ಬಿಸಿ ತಟ್ಟತೊಡಗಿದೆ.