ಬೆಂಗಳೂರು: ಐದು ವರ್ಷದೊಳಗೆ ಮಲೆಮಹದೇಶ್ವರ ದೇವಸ್ಥಾನ ದಕ್ಷಿಣ ಭಾರತದಲ್ಲಿ ಅತ್ಯಂತ ಪ್ರಸಿದ್ಧ ದೇವಾಲಯಗಳಲ್ಲಿ ಒಂದಾಗಲಿದೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ಹೇಳಿದರು.
ವಿಧಾನಸೌಧ ಸಭಾಂಗಣದಲ್ಲಿ ಇಂದು ಮಲೆಮಹದೇಶ್ವರ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರ ವತಿಯಿಂದ ಹಮ್ಮಿಕೊಂಡಿದ್ದ ಸಭೆಯಲ್ಲಿ ಮಾತನಾಡಿದ ಅವರು, ದಕ್ಷಿಣ ಕರ್ನಾಟಕದ ಧಾರ್ಮಿಕ ಕ್ಷೇತ್ರವಾದ ಮಲೆಮಹದೇಶ್ವರ ದೇವಸ್ಥಾನಕ್ಕೆ ಕಾಲ್ನಡಿಗೆಯಲ್ಲಿ ತೆರಳುವ ಭಕ್ತರೇ ಹೆಚ್ಚು. ಬೆಂಗಳೂರು, ಮೈಸೂರು ಭಾಗದವರು ಮಾತ್ರವಲ್ಲ ರಾಜ್ಯದ ನಾನಾ ಭಾಗಗಳಿಂದ ಇಲ್ಲಿಗೆ ಭಕ್ತರು ಆಗಮಿಸುತ್ತಾರೆ. ಇದರ ಜೊತೆಗೆ ದೇವಸ್ಥಾನದ ಅಭಿವೃದ್ಧಿ ಕೂಡ ವೇಗ ಪಡೆದುಕೊಂಡಿದೆ. ದೇವಸ್ಥಾನದ ಅಭಿವೃದ್ಧಿಗೆ ಸರ್ಕಾರ ಬದ್ಧವಾಗಿದೆ. ಸಮಯ ನಿಗದಿ ಮಾಡಿಕೊಂಡು ಕ್ಷೇತ್ರಕ್ಕೆ ಆಗಮಿಸಲಾಗುವುದು ಎಂದು ಭರವಸೆ ನೀಡಿದರು.
ಪ್ರಾಧಿಕಾರದ ಅಭಿವೃದ್ಧಿ ಕುರಿತಂತೆ ನಡೆದ ಸಭೆಯಲ್ಲಿ ಮಾತನಾಡಿದ ಸಹಕಾರ ಸಚಿವರು ಹಾಗೂ ಮೈಸೂರು, ಚಾಮರಾಜನಗರ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್, ನಿತ್ಯ ಸಾವಿರಾರು ಭಕ್ತರು ಆಗಮಿಸುವ ಮಲೆಮಹದೇಶ್ವರ ದೇವಸ್ಥಾನದ ಅಭಿವೃದ್ಧಿಗೆ ಸರ್ಕಾರ ಬದ್ಧವಾಗಿದೆ. ಪ್ರಾಧಿಕಾರದ ವತಿಯಿಂದ ಕೈಗೊಂಡಿರುವ ಅಭಿವೃದ್ಧಿ ಕಾಮಗಾರಿಗಳ ಪರಿಶೀಲನೆ ನಡೆಸಿದ ಸಚಿವರು, ದೇವಸ್ಥಾನದಲ್ಲಿ ಎಲ್ಲಾ ಸೌಲಭ್ಯಗಳ ಜೊತೆಗೆ ಸೂಕ್ತ ಮಾರ್ಗದರ್ಶನದ ಅವಶ್ಯಕತೆ ಇದೆ ಎಂದು ತಿಳಿಸಿದರು. ಇದನ್ನೂ ಓದಿ: ರೋಡಿಗೆ ಬಂದ ನಾಗರಹಾವು- ಅರ್ಧ ಗಂಟೆ ಸಂಚಾರ ಬಂದ್
ದೇವಸ್ಥಾನದ ಹಿಂಭಾಗದ ದೀಪದಗಿರಿ ಒಡ್ಡಿನಲ್ಲಿ ಮಹದೇಶ್ವರ ಸ್ವಾಮಿ ಪ್ರತಿಮೆ ನಿರ್ಮಾಣದ ಬಗ್ಗೆ ಅಧಿಕಾರಿಗಳು ಸಚಿವರ ಗಮನಕ್ಕೆ ತಂದರು. ನಂತರ ದೇವಸ್ಥಾನದ ಅಭಿವೃದ್ಧಿ ಕಾಮಗಾರಿಗಳನ್ನು ಅವರು ಪರಿಶೀಲನೆ ನಡೆಸಿದರು.
ಇದೇ ವೇಳೆ ಪ್ರಾಧಿಕಾರದ ಕ್ರಿಯಾ ಯೋಜನೆ ಹಾಗೂ ಮುಂದುವರಿದ ಕಾಮಗಾರಿಗಳಿಗೆ 141.20 ಕೋಟಿ ರೂ. ಗಳ ಆಡಳಿತಾತ್ಮಕ ಅನುಮೋದನೆ ನೀಡಲಾಯಿತು. ಕಾರ್ ಪಾರ್ಕಿಂಗ್ ಗೆ 40 ಕೋಟಿ ರೂ. ವೆಚ್ಚದಲ್ಲಿ ಟೆಂಡರ್ ಕರೆಯಲು, ಹೊಸದಾಗಿ ಸ್ನಾನಘಟ್ಟ ನಿರ್ಮಾಣಕ್ಕೆ 4.95 ಕೋಟಿ ರೂ.ಗೆ ಅನುಮೋದನೆ ಸೇರಿದಂತೆ 49 ವಿವಿಧ ವಿಷಯಗಳಿಗೆ ಅನುಮೋದನೆ ನೀಡಲಾಯಿತು. ಇದನ್ನೂ ಓದಿ: ಮೈಸೂರು ಅರಮನೆಗೆ ಸೇರಿದ 4 ಆನೆಗಳು ಗುಜರಾತಿಗೆ ಶಿಫ್ಟ್
ಕ್ಷೇತ್ರದಲ್ಲಿ ಮಹದೇಶ್ವರ ಸ್ವಾಮಿ ಪ್ರತಿಮೆ ನಿರ್ಮಿಸಲು ಪ್ರಾಧಿಕಾರಕ್ಕೆ 450 ಕೆಜಿ ಬೆಳ್ಳಿಯ ಅವಶ್ಯಕತೆಯಿತ್ತು. ಆದರೆ ಭಕ್ತರು 500 ಕೆಜಿಯಷ್ಟು ಬೆಳ್ಳಿ ನೀಡಿದ್ದಾರೆ ಎಂದು ಪ್ರಾಧಿಕಾರದ ಕಾರ್ಯದರ್ಶಿ ಜಯವಿಭವಸ್ವಾಮಿ ಸಭೆಯ ಗಮನಕ್ಕೆ ತಂದರು.
ಸಭೆಯಲ್ಲಿ ಮುಜರಾಯಿ ಇಲಾಖೆ ಸಚಿವರಾದ ಶಶಿಕಲಾ ಜೊಲ್ಲೆ, ಶಾಸಕರಾದ ನಿರಂಜನ್ ಕುಮಾರ್, ಎನ್.ಮಹೇಶ್, ಪುಟ್ಟರಂಗಶೆಟ್ಟಿ, ನರೇಂದ್ರ, ವಿಧಾನಪರಿಷತ್ ಸದಸ್ಯ ಸಂದೇಶ್ ನಾಗರಾಜ್, ಸಹಕಾರ ಸಚಿವರ ವಿಶೇಷ ಕರ್ತವ್ಯಾಧಿಕಾರಿ ದಿನೇಶ್ ಗೂಳಿಗೌಡ, ಕೇಂದ್ರ ಪರಿಹಾರ ಸಮಿತಿ ಅಧ್ಯಕ್ಷರಾದ ರಾಮಚಂದ್ರ, ನಗರಸಭೆ ಅಧ್ಯಕ್ಷರಾದ ಆಶಾ ನಟರಾಜು, ಜಿಲ್ಲಾಧಿಕಾರಿ ಎಂ.ಆರ್.ರವಿ, ಜಿಪಂ ಸಿಇಒ ಹರ್ಷಲ್ ಭೋಯರ್ ನಾರಾಯಣರಾವ್, ಮಲೆಮಹದೇಶ್ವರ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಜಯವಿಭವಸ್ವಾಮಿ ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು ಹಾಗೂ ಮುಖಂಡರು ಭಾಗವಹಿಸಿದ್ದರು.