Chamarajanagar
ಸಾರ್ವಕಾಲಿಕ ದಾಖಲೆ – ಮಾದಪ್ಪನ ಹುಂಡಿಗೆ ಹರಿದು ಬಂತು ಎರಡೂವರೆ ಕೋಟಿ ರೂ. ಕಾಣಿಕೆ

ಚಾಮರಾಜನಗರ: ದಕ್ಷಿಣ ಭಾರತದ ಪ್ರಸಿದ್ಧ ಯಾತ್ರಾ ಸ್ಥಳ ಮಲೆಮಹದೇಶ್ವರ ಬೆಟ್ಟಕ್ಕೆ ದಿನೇ ದಿನೇ ಭಕ್ತರ ಸಂಖ್ಯೆ ಹೆಚ್ಚುತ್ತಿದೆ. ಹೀಗಾಗಿ ಮಾದಪ್ಪನ ಆದಾಯವು ಅದೇ ರೀತಿ ಏರಿಕೆಯಾಗತೊಡಗಿದೆ. ಕಳೆದ ಒಂದು ತಿಂಗಳ ಅವಧಿಯಲ್ಲಿ ಮಹದೇಶ್ವರ ದೇವಸ್ಥಾನದ ಹುಂಡಿಯಲ್ಲಿ ಎರಡೂವರೆ ಕೋಟಿ ರೂ.ಗೂ ಹೆಚ್ಚು ಹಣ ಸಂಗ್ರಹವಾಗಿದ್ದು, ಇದೊಂದು ಸಾರ್ವಕಾಲಿಕ ದಾಖಲೆಯಾಗಿದೆ.
ನಾಡಿನ ಪ್ರಸಿದ್ಧ ದೇವಾಯಗಳ ಪೈಕಿ ಜಿಲ್ಲೆಯ ಮಲೆಮಹದೇಶ್ವರ ಬೆಟ್ಟವೂ ಒಂದು. ರಾಜ್ಯದಲ್ಲೇ ಅತಿಹೆಚ್ಚು ಆದಾಯ ಇರುವ ಎರಡನೇ ದೇವಸ್ಥಾನ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಮಲೆಮಹದೇಶ್ವರ ಬೆಟ್ಟಕ್ಕೆ ದಿನೇ ದಿನೇ ಭಕ್ತರ ಸಂಖ್ಯೆ ಹೆಚ್ಚುತ್ತಿದೆ. ಹಬ್ಬ ಹರಿದಿನ ಹಾಗೂ ಜಾತ್ರಾ ಮಹೋತ್ಸವದ ಸಂದರ್ಭಗಳಲ್ಲಿ ಲಕ್ಷಕ್ಕೂ ಹೆಚ್ಚು ಭಕ್ತರು ಭೇಟಿ ನೀಡುತ್ತಾರೆ.
ಬರುವ ಭಕ್ತರು ತಮ್ಮ ಇಷ್ಟಾರ್ಥ ಸಿದ್ಧಿಗಾಗಿ ಹರಕೆ ಹೊರುವುದು ಸಾಮಾನ್ಯ. ಬೇಡಿದ ವರವ ಕೊಡುವ ಮಾದಪ್ಪನಿಗೆ ಭಕ್ತರು ಹಣ ಹಾಗೂ ಆಭರಣಗಳ ರೂಪದಲ್ಲಿ ಹರಕೆ ಸಲ್ಲಿಸುವುದು ವಾಡಿಕೆ. ಹೀಗೆ ಭಕ್ತರು ಮಾದಪ್ಪನ ಹುಂಡಿಗೆ ಹಾಕುವ ಹಣ ಪ್ರತಿ ತಿಂಗಳು ಕೋಟಿ ರೂಪಾಯಿ ದಾಟುತ್ತಿದೆ. ಇದೇ ರೀತಿ ಮಲೆಮಹದೇಶ್ವರನ ಹುಂಡಿಯಲ್ಲಿ ಕಳೆದ ಒಂದು ತಿಂಗಳ ಅವಧಿಯಲ್ಲಿ ಬರೋಬ್ಬರಿ 2.52 ಕೋಟಿ ರೂ ಸಂಗ್ರಹವಾಗಿದೆ. ಅಲ್ಲದೆ 50 ಗ್ರಾಂ. ಚಿನ್ನ ಮತ್ತು 2.44 ಕೆ.ಜಿ. ಬೆಳ್ಳಿಯನ್ನು ಭಕ್ತರು ಮಾದಪ್ಪನಿಗೆ ಅರ್ಪಿಸಿದ್ದಾರೆ. ಇದರಲ್ಲಿ 15.21 ಲಕ್ಷ ರೂ.ಗಳಷ್ಟು ನಾಣ್ಯಗಳೇ ಸಂಗ್ರಹವಾಗಿವೆ. ಈ ಮೂಲಕ ಹಣ ಸಂಗ್ರಹಣೆಯಲ್ಲಿ ದಾಖಲೆ ನಿರ್ಮಾಣವಾಗಿದೆ. ಕೇವಲ ಒಂದು ತಿಂಗಳ ಅವಧಿಯಲ್ಲಿ ಹಿಂದೆಂದೂ ಇಷ್ಟೊಂದು ಹಣ ಹುಂಡಿಯಲ್ಲಿ ಸಂಗ್ರಹವಾಗಿರಲಿಲ್ಲ. ಇದೊಂದು ಸಾರ್ವಕಾಲಿಕ ದಾಖಲೆ ಎಂದು ಮಹದೇಶ್ವರ ಬೆಟ್ಟ ಕ್ಷೇತ್ರಾಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಜಯವಿಭವಸ್ವಾಮಿ ಮಾಹಿತಿ ನೀಡಿದ್ದಾರೆ.
ಕೇವಲ ಹುಂಡಿ ಅಷ್ಟೇ ಅಲ್ಲದೆ ಶಿವರಾತ್ರಿ ಜಾತ್ರಾ ಸಂದರ್ಭದಲ್ಲಿ ಲಾಡು ಮಾರಾಟದಿಂದ 1 ಕೋಟಿ 50 ಸಾವಿರ ರೂ., ಉತ್ಸವಗಳಿಂದ 99.50 ಲಕ್ಷ ರೂ., ವಸತಿ ಗೃಹಗಳ ಬಾಡಿಗೆ 86.57 ಲಕ್ಷ ರೂ., ವಿಶೇಷ ಪ್ರವೇಶ ಶುಲ್ಕ 98 ಲಕ್ಷ ರೂ., ವಿವಿಧ ಸೇವೆಗಳಿಂದ 8.39 ಲಕ್ಷ ರೂ. ಸೇರಿದಂತೆ ವಿವಿಧ ಮೂಲಗಳಿಂದ 3.54 ಕೋಟಿ ರೂ.ಗೂ ಹೆಚ್ಚು ಆದಾಯ ಮಾದಪ್ಪನ ಸನ್ನಿಧಿಗೆ ಹರಿದುಬಂದಿದೆ. ಅಲ್ಲದೆ ಶಿವರಾತ್ರಿ ಜಾತ್ರಾ ಸಂದರ್ಭ ಆರು ದಿನಗಳಲ್ಲಿ ಮಹದೇಶ್ವರ ಬೆಟ್ಟಕ್ಕೆ ರಾಜ್ಯದ ವಿವಿಧೆಡೆಯಿಂದ 10 ಲಕ್ಷಕ್ಕೂ ಹೆಚ್ಚು ಭಕ್ತರು ಭೇಟಿ ನೀಡಿದ್ದು, ಇದೂ ಸಹ ದಾಖಲೆ ಆಗಿದೆ.
