Connect with us

Chamarajanagar

ಮಲೆ ಮಹದೇಶ್ವರ ಬೆಟ್ಟದ ಪ್ರಸಾದ ವಿತರಣೆಗೆ ತೀವ್ರ ಕಟ್ಟೆಚ್ಚರ

Published

on

ಚಾಮರಾಜನಗರ: ಮಲೆ ಮಹದೇಶ್ವರ ಬೆಟ್ಟದ ಪ್ರಸಾದ ವಿತರಣೆ ಕುರಿತು ತೀವ್ರ ಕಟ್ಟೆಚ್ಚರ ವಹಿಸಲಾಗಿದ್ದು, ಮುನ್ನೆಚ್ಚರಿಕಾ ಕ್ರಮವಾಗಿ ಪ್ರಸಾದ ತಯಾರಿಸುವ ಅಡುಗೆ ಮನೆ, ಲಾಡು ತಯಾರಿಕಾ ಘಟಕ, ದಾಸೋಹ ಭವನದಲ್ಲಿ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ.

ದೇಶವನ್ನೇ ಬೆಚ್ಚಿ ಬೀಳಿಸಿದ ಸುಳ್ವಾಡಿ ವಿಷ ಪ್ರಸಾದ ದುರಂತಕ್ಕೆ ಒಂದು ವರ್ಷ ತುಂಬುತ್ತಿರೋ ಬೆನ್ನಲ್ಲೇ ಸರ್ಕಾರ ಮುಜರಾಯಿ ಇಲಾಖೆಯಿಂದ ಆದೇಶ ಹೊರಡಿಸಲು ರೆಡಿಯಾಗಿದೆ. ಪ್ರಸಾದ ವಿತರಣೆಗೆ ಆರೋಗ್ಯ ಇಲಾಖೆಯಿಂದ ಅನುಮತಿ ಕಡ್ಡಾಯ ಮಾಡಲು ಹೊರಟಿದ್ದು, ಇದು ನಿಯಮ ಇತಿಹಾಸ ಪ್ರಸಿದ್ಧ ದೇವಾಲಯಗಳ ಪ್ರಸಾದ ವಿತರಣೆಗೂ ಅನ್ವಯವಾಗಲಿದೆ. ಈ ಆದೇಶ ಹಿನ್ನೆಲೆಯಲ್ಲಿ ದೇವಸ್ಥಾನ ಆಡಳಿತ ಮಂಡಳಿಯಿಂದ ಅಗತ್ಯ ಸಿದ್ಧತೆ ಕೈಗೊಳ್ಳಲಾಗಿದೆ. ಇದನ್ನೂ ಓದಿ: ಸುಳ್ವಾಡಿ ಪ್ರಕರಣದ ಆರೋಪಿಯ ಜಾಮೀನು ಅರ್ಜಿ ವಜಾ

ಕಳೆದ ವರ್ಷ ಸಂಭವಿಸಿದ ಸುಳ್ವಾಡಿ ವಿಷ ಪ್ರಸಾದ ದುರಂತದ ಹಿನ್ನೆಲೆಯಲ್ಲಿ ಪ್ರಸಿದ್ಧ ಯಾತ್ರಾ ಸ್ಥಳ ಮಲೆ ಮಹದೇಶ್ವರ ಬೆಟ್ಟದಲ್ಲಿ ಮುಂಜಾಗ್ರತಾ ಕ್ರಮ ಕೈಗೊಳ್ಳಲಾಗಿದೆ. ಪ್ರಸಾದ ತಯಾರಿಸಿ, ವಿತರಿಸುವ ದಾಸೋಹ ಭವನ ಹಾಗೂ ಲಾಡು ತಯಾರಿಕಾ ಘಟಕಗಳಲ್ಲಿ 330 ಡಿಗ್ರಿಯ 36 ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. ಅಡುಗೆ ಮನೆಗೆ ಅಪರಿಚಿತರಿಗೆ ಪ್ರವೇಶ ನಿಷೇಧಿಸಲಾಗಿದ್ದು, ಖಾಯಂ ನೌಕರರಿಂದ ಮಾತ್ರ ಪ್ರಸಾದ ಹಾಗೂ ಲಾಡು ತಯಾರಿಸಲಾಗುತ್ತಿದೆ. ಪ್ರಸಾದ ತಯಾರಿಸುವ ಅಡುಗೆ ಮನೆ, ಲಾಡು ತಯಾರಿಕಾ ಘಟಕ ಹಾಗು ದಾಸೋಹ ಭವನದಲ್ಲಿ ಅಧೀಕ್ಷಕ ಮಟ್ಟದ ಅಧಿಕಾರಿಗಳಿಂದ ದಿನವಿಡೀ ಮೇಲ್ವಿಚಾರಣೆ ನಡೆಸಲಾಗುತ್ತಿದೆ.

ಅಲ್ಲದೆ ತಯಾರಿಸಿದ ಪ್ರಸಾದದ ಸ್ಯಾಂಪಲ್‍ನ್ನು 24 ಗಂಟೆಗಳ ಕಾಲ ಸಂಗ್ರಹಿಸಿ ಇಡಲು ಕ್ರಮವಹಿಸಲಾಗಿದ್ದು, ಈ ಅವಧಿಯಲ್ಲಿ ಪ್ರಸಾದದಿಂದ ಭಕ್ತರ ಆರೋಗ್ಯದಲ್ಲಿ ವ್ಯತ್ಯಾಸವಾದರೆ ಪ್ರಸಾದವನ್ನು ಪರೀಕ್ಷೆಗೆ ಒಳಪಡಿಸಲು ಕ್ರಮ ಕೈಗೊಳ್ಳಲಾಗಿದೆ.

ಸುಳ್ವಾಡಿ ವಿಷ ಪ್ರಸಾದ ದುರಂತದಲ್ಲಿ 17 ಮಂದಿ ಸಾವನ್ನಪ್ಪಿ, ಹಲವರು ವಿಷ ಪ್ರಸಾದ ಸೇವಿಸಿದರೂ ಅದೃಷ್ಟವಶಾತ್ ಬದುಕುಳಿದಿದ್ದಾರೆ. ಆದ್ದರಿಂದ ಪ್ರಸಾದ ನೀಡುವ ಸಮಯದಲ್ಲಿ ಮುಂಜಾಗ್ರತೆ ವಹಿಸುವುದು ಒಳ್ಳೆಯ ಬೆಳವಣಿಗೆ. ಇದರಿಂದ ಪ್ರಸಾದ ತಿನ್ನುವ ವೇಳೆ ಭಕ್ತರನ್ನು ಕಾಡುತ್ತಿದ್ದ ಭಯ ದೂರವಾಗಲಿದ್ದು, ಮಲೆ ಮಹದೇಶ್ವರ ಪ್ರಾಧಿಕಾರ ನಡೆಗೆ ಮೆಚ್ಚುಗೆ ವ್ಯಕ್ತವಾಗಿದೆ.

ಒಟ್ಟಿನಲ್ಲಿ ಸುಳ್ವಾಡಿ ವಿಷ ಪ್ರಸಾದ ದುರಂತದ ನಂತರ ದೇವಾಲಯದಲ್ಲಿ ಪ್ರಸಾದ ತಿನ್ನೊದಕ್ಕೂ ಕೂಡ ಭಕ್ತರು ಬೆಚ್ಚಿ ಬೀಳುತ್ತಿದ್ದರು. ಆದರೆ ಮಲೆ ಮಹದೇಶ್ವರ ಬೆಟ್ಟದಲ್ಲಿ ಪ್ರಸಾದ ವಿತರಣೆಗೆ ಮುಂಜಾಗ್ರತೆ ವಹಿಸಿರುವ ನಡೆ ಎಲ್ಲರ ಮನ ಗೆದ್ದಿದೆ.

Click to comment

Leave a Reply

Your email address will not be published. Required fields are marked *