ಭೋಪಾಲ್: ಕಳೆದ ಫೆಬ್ರವರಿ ತಿಂಗಳಲ್ಲಿ ದಕ್ಷಿಣ ಆಫ್ರಿಕಾದಿಂದ ತರಿಸಿದ್ದ 12 ಚೀತಾಗಳ (Cheetah) ಪೈಕಿ ಒಂದು ಚೀತಾ ಭಾನುವಾರ ಸಾವನ್ನಪ್ಪಿದೆ.
ಕುನೊ ರಾಷ್ಟ್ರೀಯ ಉದ್ಯಾನವನದಲ್ಲಿ (Kuno National Park) ಪರಿಚಯಿಸಲಾಗಿದ್ದ 8 ಚೀತಾಗಳ ಪೈಕಿ, ಕಿಡ್ನಿ ಸೋಂಕಿನಿಂದ ಬಳಲುತ್ತಿದ್ದ ಸಾಶಾ ಹೆಸರಿನ 3 ವರ್ಷದ ಹೆಣ್ಣು ಚೀತಾ ಮಾರ್ಚ್ ತಿಂಗಳಲ್ಲಿ ಮೃತಪಟ್ಟಿತ್ತು. ಇದೀಗ ಫೆಬ್ರವರಿ ತಿಂಗಳಲ್ಲಿ ದಕ್ಷಿಣ ಆಫ್ರಿಕಾದಿಂದ ತರಿಸಲಾಗಿದ್ದ ಉದಯ್ ಹೆಸರಿನ ಗಂಡು ಚೀತಾ ಅನಾರೋಗ್ಯದಿಂದ ಸಾವನ್ನಪ್ಪಿದೆ ಎಂದು ಮಧ್ಯಪ್ರದೇಶದ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಜೆ.ಎಸ್ ಚೌಹಾಣ್ ತಿಳಿಸಿದ್ದಾರೆ.
Advertisement
Advertisement
ಅನಾರೋಗ್ಯದಿಂದ ಬಳಲುತ್ತಿದ್ದ ಉದಯ್ ಹೆಸರಿನ ಚೀತಾ ಭಾನುವಾರ ಬೆಳಗ್ಗೆ ಅಸ್ವಸ್ಥಗೊಂಡಿತ್ತು. ಇದನ್ನು ಗಮನಿಸಿದ ಅರಣ್ಯಾಧಿಕಾರಿಗಳ ತಂಡ ಅದನ್ನು ವೈದ್ಯಕೀಯ ಕೇಂದ್ರಕ್ಕೆ ಕರೆತಂದು ಚಿಕಿತ್ಸೆ ನೀಡಲು ಪ್ರಾರಂಭಿಸಿತ್ತು. ಆದರೆ ಸಂಜೆ 4 ಗಂಟೆ ವೇಳೆಗೆ ಚಿಕಿತ್ಸೆ ವೇಳೆ ಸಾವನ್ನಪ್ಪಿದೆ. ಸೋಮವಾರ ಪಶುವೈದ್ಯಾಧಿಕಾರಿಗಳ ತಂಡ ಮರಣೋತ್ತರ ಪರೀಕ್ಷೆ ನಡೆಸಲಿದೆ.
Advertisement
Advertisement
ಅಳಿವಿನಂಚಿನಲ್ಲಿರುವ ವನ್ಯಜೀವಿಗಳನ್ನು (Wildlife) ಸಂರಕ್ಷಣೆ ಮಾಡುವ ಯೋಜನೆಯಡಿ ನಮೀಬಿಯಾದಿಂದ (Namibia) ಭಾರತಕ್ಕೆ 3 ಗಂಡು ಹಾಗೂ 5 ಹೆಣ್ಣು ಚೀತಾಗಳನ್ನು ವಿಶೇಷ ವಿಮಾನದಲ್ಲಿ ತರಲಾಗಿತ್ತು. ತಮ್ಮ ಜನ್ಮದಿನವಾದ ಸೆ.17 ರಂದು ಪ್ರಧಾನಿ ಮೋದಿ (Narendra Modi) ಈ ಚೀತಾಗಳನ್ನು ಕುನೊ ರಾಷ್ಟ್ರೀಯ ಉದ್ಯಾನವನಕ್ಕೆ ಬಿಡುಗಡೆ ಮಾಡಿದ್ದರು. ನವೆಂಬರ್‌ನಲ್ಲಿ ದೊಡ್ಡ ಆವರಣಕ್ಕೆ ಸ್ಥಳಾಂತರಿಸಿದ ಬಳಿಕ ಕಾಡಿಗೆ ಬಿಡುಗಡೆ ಮಾಡಲಾಗಿತ್ತು. ಬಳಿಕ ಚೀತಾಗಳು ಕಾಡಿನ ವಾತಾವರಣಕ್ಕೆ ಹೊಂದಿಕೊಂಡು ಸ್ವತಃ ಬೇಟೆಯಾಡಲು ಆರಂಭಿಸಿದ್ದವು. ಇದಾದ ತಿಂಗಳುಗಳ ಬಳಿಕ ದಕ್ಷಿಣ ಆಫ್ರಿಕಾದಿಂದ ಮತ್ತೆ 12 ಚೀತಾಗಳನ್ನು ಭಾರತಕ್ಕೆ ತರಿಸಲಾಯಿತು.
ಚೀತಾ ವಿಶೇಷತೆಯೇನು?
ಮಚ್ಚೆ ಗುರುತಿನ ಚೀತಾಗಳ ಸಂತತಿಯನ್ನು 1952ರಲ್ಲಿ ಭಾರತದಲ್ಲಿ ಅಳಿದುಹೋದ ಸಂತತಿ ಎಂದು ಘೋಷಣೆ ಮಾಡಲಾಗಿತ್ತು. ಭಾರತದಲ್ಲಿದ್ದ ಕೊನೆಯ ಚೀತಾ 1947ರಲ್ಲಿ ಸಾವನ್ನಪ್ಪಿತ್ತು. 2009ರಲ್ಲಿ ಆಫ್ರಿಕನ್ ಚಿರತೆ ಯೋಜನೆ ಮಾಡಲಾಗಿತ್ತು, ಆದರೆ ಕಾರಣಾಂತರಗಳಿಂದ ಅನುಷ್ಠಾನವಾಗಿರಲಿಲ್ಲ. ಅದಾದ 75 ವರ್ಷಗಳ ಬಳಿಕ ಭಾರತಕ್ಕೆ ಆಗಮಿಸಿದ ಚೀತಾಗಳಿಗೆ ಕುನೊ ಉದ್ಯಾನವನ ಪರಿಸರ ಅನುಕೂಲಕರವಾಗಿದ್ದು, ಅಲ್ಲಿನ ಸುತ್ತಮುತ್ತಲ 24 ಗ್ರಾಮಗಳ ಜನರನ್ನು ಖಾಲಿ ಮಾಡಿಸಲಾಗಿದೆ. 8 ಚೀತಾಗಳ ಸ್ಥಳಾಂತರಕ್ಕೆ 75 ಕೋಟಿ ರೂ. ಖರ್ಚು ಮಾಡಲಾಗಿದೆ.