ಮಲೆ: ಪ್ರಧಾನಿ ಮೋದಿ ಅವರ ಲಕ್ಷದ್ವೀಪ ಭೇಟಿ ಕುರಿತು ಮಾಲ್ಡೀವ್ಸ್ (Maldives) ಸಚಿವರು ನೀಡಿದ್ದ ಹೇಳಿಕೆ ಉಭಯ ರಾಷ್ಟ್ರಗಳ ನಡುವಿನ ರಾಜತಾಂತ್ರಿಕ ಸಂಬಂಧವನ್ನು ಮತ್ತಷ್ಟು ಹದಗೆಡಿಸಿದೆ. ಸಚಿವರ ಹೇಳಿಕೆ ವಿವಾದದ ಸ್ವರೂಪ ಪಡೆದುಕೊಳ್ಳುತ್ತಿದ್ದಂತೆಯೇ ಅವರನ್ನು ಅಮಾನತುಗೊಳಿಸಿ ಮಾಲ್ಡೀವ್ಸ್ ಸರ್ಕಾರ ಆದೇಶ ಹೊರಡಿಸಿದೆ.
ಸಚಿವರಾದ ಮರಿಯಮ್ ಶಿಯುನಾ (Mariyam Shiuna), ಮಲ್ಶಾ ಮತ್ತು ಹಸನ್ ಜಿಹಾನ್ ಅವರನ್ನು ಅಮಾನತುಗೊಳಿಸಲಾಗಿದೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ. ನೆರೆಯ ಭಾರತವನ್ನು ಅವಮಾನಿಸುವಂತಹ ಪೋಸ್ಟ್‌ಗಳನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹಾಕಿದ್ದಕ್ಕೆ ಈ ಬೆಳವಣಿಗೆ ನಡೆದಿದೆ. ಇದನ್ನೂ ಓದಿ: ಮೋದಿ ಭೇಟಿ ಬಳಿಕ ಲಕ್ಷದ್ವೀಪ ಪ್ರವಾಸದತ್ತ ಭಾರತೀಯರ ಚಿತ್ತ – #BoycottMaldives ಫುಲ್ ಟ್ರೆಂಡ್
ಸರ್ಕಾರಿ ಹುದ್ದೆಗಳಲ್ಲಿದ್ದಾಗ ಸಾಮಾಜಿಕ ಜಾಲತಾಣಗಳಲ್ಲಿ ಇಂತಹ ಪೋಸ್ಟ್ ಮಾಡಿದವರನ್ನು ಈಗ ಅಮಾನತುಗೊಳಿಸಲಾಗಿದೆ ಎಂದು ಅಮಾನತುಗೊಂಡವರ ಹೆಸರನ್ನು ಬಹಿರಂಗಪಡಿಸದೆ ಹೇಳಿಕೆಯಲ್ಲಿ ತಿಳಿಸಲಾಗಿದೆ.
ಇತ್ತೀಚೆಗೆ ಪ್ರಧಾನಿ ನರೇಂದ್ರ ಮೋದಿ (Narendra Modi ) ಅವರು ಲಕ್ಷದ್ವೀಪಕ್ಕೆ (Lakshadweep) ಭೇಟಿ ನೀಡಿದ್ದರು. ಬೀಚ್‌ನಲ್ಲಿ ತಾವು ಕಳೆದ ಸುಂದರ ಕ್ಷಣಗಳ ವೀಡಿಯೋ ಹಾಗೂ ಫೋಟೋಗಳನ್ನು ಹಂಚಿಕೊಂಡಿದ್ದರು. ಮೋದಿ ಭೇಟಿ ಕುರಿತಂತೆ ಎಕ್ಸ್‌ನಲ್ಲಿ ಪೋಸ್ಟ್ ಹಾಕಿದ್ದ ಮಾಲ್ಡೀವ್ಸ್ ಸಚಿವರು, ಭಾರತ ಮಾಲ್ಡೀವ್ಸ್ ಅನ್ನು ಗುರಿಯಾಗಿಸಿಕೊಂಡಿದೆ ಎಂದು ಬರೆದುಕೊಂಡಿದ್ದರು. ಇದನ್ನೂ ಓದಿ: ಲಕ್ಷದ್ವೀಪಕ್ಕೆ ಮೋದಿ ಭೇಟಿ: ಮಾಲ್ಡೀವ್ಸ್‌ಗೆ ಬಿಗ್ ಶಾಕ್
ಮಾಲ್ಡೀವ್ಸ್ ಸಚಿವರ ಈ ಹೇಳಿಕೆಗಳಿಗೆ ವ್ಯಾಪಕ ವಿರೋಧ ವ್ಯಕ್ತವಾಗಿದ್ದು, ಮಾಲ್ಡೀವ್ಸ್‌ಗೆ ಹೋಗುವ ತಮ್ಮ ಪ್ರವಾಸವನ್ನು ರದ್ದುಗೊಳಿಸುವುದಾಗಿ ಭಾರತೀಯ ಪ್ರವಾಸಿಗರು ಹೇಳಿಕೊಂಡಿದ್ದಾರೆ. ಮಾಲ್ಡೀವ್ಸ್ ಪ್ರವಾಸದ ವಿಮಾನದ ಟಿಕೆಟ್ ರದ್ದುಗೊಳಿಸಿರುವ ಸ್ಕ್ರೀನ್ ಶಾಟ್ ತೆಗೆದು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡು ‘#BoycottMaldives’ ಅಭಿಯಾನ ನಡೆಸುತ್ತಿದ್ದಾರೆ.