ಕೊಚ್ಚಿ: ಸಾಮಾನ್ಯವಾಗಿ ಲಾಟರಿಯಲ್ಲಿ ಗೆಲುವು ಸಿಗುವುದು ಅತ್ಯಂತ ವಿರಳ. ಒಂದು ವೇಳೆ ಲಾಟರಿ ಗೆದ್ದರೆ ಅದು ಆತನ ಲಕ್ ಅಂತಾನೇ ಹೇಳಬಹುದು. ಈ ಲಕ್ ಅಬುದಾಭಿಯಲ್ಲಿ ವಾಸವಿರುವ ಕೇರಳ ಮೂಲದ ವ್ಯಕ್ತಿಗೆ ಖುಲಾಯಿಸಿದೆ.
ಹೌದು. ಕೇರಳದ ಶ್ರೀರಾಜ್ ಕೃಷ್ಣನ್(33) ಎಂಬವರು ಕಳೆದ ಭಾನುವಾರ ಅಬುದಾಭಿಯಲ್ಲಿ 12.72 ಕೋಟಿ ರೂ. ಲಾಟರಿ ಗೆದ್ದಿದ್ದಾರೆ. ಉದ್ಯೋಗದ ನಿಮಿತ್ತ ತೆರಳಿದ ಇವರು ಕಳೆದ 9 ವರ್ಷಗಳಿಂದ ಅಬುದಾಭಿಯಲ್ಲಿ ನೆಲೆಸಿದ್ದಾರೆ.
ಈ ಕುರಿತು ರಾಷ್ಟ್ರೀಯ ಪತ್ರಿಕೆಯೊಂದರ ಜೊತೆ ಹಂಚಿಕೊಂಡ ಅವರು, ಕಳೆದ ಭಾನುವಾರ ಲಾಟರಿ ಗೆದ್ದಿರುವ ಬಗ್ಗೆ ಕರೆಬಂದಾಗ ಅಚ್ಚರಿಗೊಳಗಾದೆ. ಆ ಕರೆಗೆ ಹೇಗೆ ಪ್ರತಿಕ್ರಿಯಿಸಬೇಕೆಂದು ತಿಳಿಯಲಿಲ್ಲ. ಒಟ್ಟಿನಲ್ಲಿ ಲಾಟರಿ ಗೆದ್ದಿರುವ ಕುರಿತು ನನಗಿನ್ನೂ ನಂಬಿಕೆ ಬರ್ತಾ ಇಲ್ಲ. ಕೊನೆಗೂ ನನ್ನ ಕನಸು ಈಡೇರಿತ್ತು. 44698 ನಂಬರ್ ನನ್ನ ಲಕ್ಕಿ ನಂಬರ್ ಅನ್ನೋದನ್ನ ಪ್ರೂವ್ ಮಾಡಿತ್ತು ಎಂದು ಹೇಳಿದ್ದಾರೆ.
ಅಬುದಾಭಿಯಲ್ಲಿ ಇವರು ಶಿಪ್ಪಿಂಗ್ ಕಂಪನಿ ಉದ್ಯೋಗಸ್ಥರಾದ್ರೆ, ಇವರ ಪತ್ನಿ ಅಶ್ವಥಿ, ಖಾಸಗಿ ಕಂಪನಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಲಾಟರಿ ಗೆದ್ದಿರುವ ಖುಷಿಯಲ್ಲಿರುವ ಈ ದಂಪತಿ, ಈ ಹಣವನ್ನು ಯಾವ ರೀತಿಯಲ್ಲಿ ಬಳಸಿಕೊಳ್ಳಬೇಕೆಂಬುವುದನ್ನು ಇನ್ನೂ ನಿರ್ಧರಿಸಿಲ್ಲ. ಒಟ್ಟಿನಲ್ಲಿ ಲಾಟರಿ ಗೆದ್ದ ಸಂತಸದಲ್ಲಿ ಮೌನವಹಿಸಿರುವ ಶ್ರೀರಾಜ್, ಯಾವುದೇ ಕಾರಣಕ್ಕೂ ಅಬುದಾಭಿಯಲ್ಲಿನ ಉದ್ಯೋಗವನ್ನು ತೊರೆಯುವ ಪ್ರಶ್ನೆಯೇ ಇಲ್ಲ ಅಂತಾ ಸ್ಪಷ್ಟವಾಗಿದೆ.
ಇತ್ತ ಕೇರಳದ ತ್ರಿಶೂರ್‍ನ ವರಂದರಪಿಲ್ಲಿಯಲ್ಲಿರುವ ಶ್ರೀರಾಜ್ ಪೋಷಕರು ಕೂಡ ಮಗ ಲಾಟರಿ ಗೆದ್ದಿರುವುದಕ್ಕೆ ಸಂತಸ ವ್ಯಕ್ತಪಡಿಸಿದ್ದು, ಮಗನ ಬರುವಿಕೆಯ ನಿರೀಕ್ಷೆಯಲ್ಲಿದ್ದಾರೆ. ಮಗ ಲಾಟರಿ ಗೆದ್ದ ವಿಚಾರ ಕೇಳಿ ತುಂಬಾ ಸಂತಸವಾಯ್ತು. ಅಂತೆಯೇ ಆತ ತವರೂರಿಗೆ ಬಂದು ಅದೇ ಹಣದಲ್ಲಿ ಸ್ವಂತ ಉದ್ಯಮವನ್ನು ಕೈಗೊಳ್ಳುತ್ತಾನೆಂಬ ನಂಬಿಕೆಯಿದೆ. ಅಂತೆಯೇ ಅದರಲ್ಲಿ ಸ್ವಲ್ಪ ಹಣವನ್ನು ಸೇವಾಕಾರ್ಯಗಳಿಗೆ ನೀಡಬೇಕು ಅಂತಾ ಶ್ರೀರಾಜ್ ತಂದೆ ಉನ್ನಿಕೃಷ್ಣನ್ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
2013ರಲ್ಲಿ ಶ್ರೀರಾಜ್ ತುಂಬಾ ಕಷ್ಟದಲ್ಲಿದ್ದರು. ಈ ವೇಳೆ ಜ್ಯೋತಿಷಿಯವರ ಬಳಿ ಹೋಗಿ ಕೇಳಿದಾಗ, ನೀವೇನೂ ಚಿಂತೆ ಮಾಡ್ಬೇಡಿ. ನಿಮ್ಮ ಮಗನ ಭವಿಷ್ಯ 2016-17ರ ವೇಳೆ ಬದಲಾಗಲಿದೆ ಅಂತಾ ಹೇಳಿದ್ರು. ಅವರ ಈ ಮಾತು ಇಂದು ನಿಜವಾಗಿದೆ ಅಂತಾ ಉನ್ನಿಕೃಷ್ಣನ್ ಹೇಳಿದ್ದಾರೆ.
ಒಟ್ಟಿನಲ್ಲಿ ಲಾಟರಿ ಗೆದ್ದ ಬಳಿಕ ಶ್ರೀರಾಜ್‍ಗೆ ಕರೆಗಳ ಸುರಿಮಳೆಯೇ ಹರಿದು ಬರುತ್ತಿದೆ. ಕುಟುಂಬ, ಸ್ನೇಹಿತರು ಅಂತಾ ಶುಭಾಶಯ ಕೋರಲು ದಿನದಲ್ಲಿ ಸಾವಿರಾರು ಕರೆಗಳು ಬರುತ್ತಿವೆ. ಬಂದಿರುವ ಕರೆಯಲ್ಲಿ ವೈದ್ಯಕೀಯ ನೆರವು ಮತ್ತು ಚಾರಿಟಿಗಳಿಂದಲೂ ಸಹಾಯ ನೀಡುವಂತೆ ಫೋನ್ ಕಾಲ್ ಬಂದಿವೆ ಅಂತಾ ಶ್ರೀರಾಜ್ ತಿಳಿಸಿದ್ದಾರೆ.