ಪ್ರಶಾಂತ್ ನೀಲ್ ನಿರ್ದೇಶನದ ಕೆಜಿಎಫ್ 2 ಸಿನಿಮಾ ಭಾರತೀಯ ಸಿನಿಮಾ ರಂಗವನ್ನೇ ಒಗ್ಗೂಡಿಸಿದೆ. ಭಾರತೀಯ ಸಿನಿಮಾ ರಂಗದ ವಿವಿಧ ಭಾಷೆಯ ಕಲಾವಿದರು ಕೆಜಿಎಫ್ 2 ಚಿತ್ರಕ್ಕಾಗಿ ಒಂದಾಗಿ, ತಮ್ಮ ಭಾಷೆಯಲ್ಲೇ ಈ ಚಿತ್ರವನ್ನು ನೋಡಿ ಕೊಂಡಾಡಿದ್ದಾರೆ. ಹಾಗಾಗಿ ಹೊಂಬಾಳೆ ಫಿಲ್ಸ್ಮ್ ಜೊತೆಗೆ ಭಾರತೀಯ ಸಿನಿಮಾ ರಂಗದ ಬಹುತೇಕ ಕಲಾವಿದರ ಒಡನಾಟ ಬೆಳೆದಿದೆ. ಇಂತಿಪ್ಪ ಈ ಬೆಳವಣಿಗೆಯ ಕಾರಣದಿಂದಾಗಿಯೇ ಮಲಯಾಳಂ ಹೆಸರಾಂತ ನಟ ಪೃಥ್ವಿರಾಜ್ ಸುಕುಮಾರನ್ ಕನ್ನಡಕ್ಕೆ ಬರಲಿದ್ದಾರೆ.
ಮಲಯಾಳಂನ ಖ್ಯಾತ ನಟ, ನಿರ್ದೇಶಕ, ನಿರ್ಮಾಪಕ ಹಾಗೂ ಗಾಯಕರೂ ಆಗಿರುವ ಪೃಥ್ವಿರಾಜ್ ಸುಕುಮಾರನ್ ಕೆಜಿಎಫ್ 2 ಸಿನಿಮಾವನ್ನು ಮಲಯಾಳಂನಲ್ಲಿ ಪ್ರೆಸೆಂಟ್ ಮಾಡಿದ್ದರು. ಈ ಸಿನಿಮಾದ ವಿತರಕರೂ ಕೂಡ ಅವರೇ ಆಗಿದ್ದರು. ಬೆಂಗಳೂರಿನಲ್ಲಿ ನಡೆದ ಕೆಜಿಎಫ್ 2 ಸಿನಿಮಾದ ಟೀಸರ್ ರಿಲೀಸ್ ಕಾರ್ಯಕ್ರಮಕ್ಕೂ ಆಗಮಿಸಿದ್ದರು. ಇದೀಗ ಹೊಂಬಾಳೆ ಬ್ಯಾನರ್ನಲ್ಲಿ ಸಿನಿಮಾವೊಂದನ್ನು ಮಾಡಲಿದ್ದಾರೆ ಎನ್ನುವ ಸುದ್ದಿಯಿದೆ. ಇಂದು 5.25ಕ್ಕೆ ಈ ಕುರಿತು ಅಧಿಕೃತ ಮಾಹಿತಿಯನ್ನು ಹೊಂಬಾಳೆ ಹಂಚಿಕೊಳ್ಳಲಿದೆ ಎಂದು ಸುದ್ದಿಯಾಗಿದೆ. ಇದನ್ನೂ ಓದಿ: ನಾಲ್ಕು ಕೈ- ನಾಲ್ಕು ಕಾಲು ಇರುವ ಮಗುವಿನ ಶಸ್ತ್ರ ಚಿಕಿತ್ಸೆಗೆ ನೆರವಾದ ಸೋನು ಸೂದ್
ಮಲಯಾಳಂ ಸಿನಿಮಾ ರಂಗದಲ್ಲಿ ಅಪರೂಪ ಎನಿಸುವಂತಹ ಚಿತ್ರಗಳನ್ನು ಕೊಟ್ಟಿರುವ ಪೃಥ್ವಿರಾಜ್ ಸುಕುಮಾರನ್ ಇದೇ ಮೊದಲ ಬಾರಿಗೆ ಕನ್ನಡ ಸಿನಿಮಾ ರಂಗಕ್ಕೆ ಪ್ರವೇಶ ಮಾಡುತ್ತಿದ್ದು, ಹೊಸ ರೀತಿಯ ಕಥೆಯೊಂದಿಗೆ ಹೊಂಬಾಳೆ ಫಿಲ್ಮ್ಸ್ ಜೊತೆ ಕೈ ಜೋಡಿಸಲಿದ್ದಾರೆ ಎನ್ನುವ ಸುದ್ದಿಯಿದೆ. ಕೆಲವೇ ಹೊತ್ತಿನಲ್ಲಿ ಈ ಕುರಿತು ಮಾಹಿತಿ ಹೊರ ಬೀಳಲಿದೆ ಎನ್ನುವ ಮಾಹಿತಿ ಬಂದಿದೆ.