ಬೆಂಗಳೂರು: ಕೇರಳದಲ್ಲಿ ಮಲಯಾಳಂ ಭಾಷೆ ಗೊತ್ತಿದ್ದರೆ ಮಾತ್ರ ಸರ್ಕಾರಿ ಉದ್ಯೋಗ ಎಂದು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಹೇಳಿಕೆ ವಿರುದ್ಧ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಟಿ.ಎಸ್.ನಾಗಾಭರಣ ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
Advertisement
ಈ ಬಗ್ಗೆ ಮಾಧ್ಯಮ ಪ್ರಕಟನೆ ಹೊರಡಿಸಿರುವ ಅವರು, ಕೇರಳ ಮುಖ್ಯಮಂತ್ರಿಯ ಈ ನಡೆ ಭಾಷಾ ಅಲ್ಪಸಂಖ್ಯಾತ ಪ್ರದೇಶವಾದ ಕಾಸರಗೋಡಿನಲ್ಲಿ ನೆಲೆಸಿರುವ ಕನ್ನಡ ಭಾಷಿಕರಿಗೆ ತಮ್ಮ ಭಾಷೆಯಲ್ಲಿ ಸೌಲಭ್ಯಗಳನ್ನು ಪಡೆದುಕೊಳ್ಳುವುದರಿಂದ ವಂಚಿಸುವ ಪ್ರಯತ್ನವಾಗಿದೆ. ಸಂವಿಧಾನದ 30/1ನೇ ವಿಧಿಯು ಭಾಷಾ ಅಲ್ಪಸಂಖ್ಯಾತರಿಗೆ ಅವರದ್ದೆ ಭಾಷೆಯಲ್ಲಿ ಶಿಕ್ಷಣ ಮತ್ತು ಆಡಳಿತವನ್ನು ಅನುಭವಿಸುವ ಮೂಲಭೂತ ಹಕ್ಕನ್ನು ಒದಗಿಸಿರುತ್ತದೆ. ಕೇರಳದಲ್ಲಿರುವ ಕಾಸರಗೋಡನ್ನು ಸಂವಿಧಾನದ ಪ್ರಕಾರ ಕನ್ನಡ ಭಾಷೆಯ ಅಲ್ಪಸಂಖ್ಯಾತ ಪ್ರದೇಶ ಎಂದು ಘೋಷಿಸಲಾಗಿದೆ. ಈ ನಿಟ್ಟಿನಲ್ಲಿ ಅವರದ್ದೇ ಭಾಷೆಯಲ್ಲಿ ಶಿಕ್ಷಣ ಮತ್ತು ಉದ್ಯೋಗವನ್ನು ಪಡೆದುಕೊಳ್ಳುವ ಅವಕಾಶವನ್ನು ಕಾಸರಗೋಡಿನ ಕನ್ನಡಿಗರಿಗೆ ನೀಡಲಾಗಿದೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಮಲಯಾಳಂ ಗೊತ್ತಿದ್ರೆ ಮಾತ್ರ ಸರ್ಕಾರಿ ಉದ್ಯೋಗ ಎಂದ ಸಿಎಂ – ಗಡಿಭಾಗದ ಕನ್ನಡಿಗರಲ್ಲಿ ಆತಂಕ
Advertisement
Advertisement
ಇತ್ತೀಚಿಗೆ ಪಿಣರಾಯಿ ವಿಜಯನ್ ಅವರು ಮಲಯಾಳಂ ಭಾಷೆ ತಿಳಿದಿದ್ದರಷ್ಟೇ ಕೇರಳದಲ್ಲಿ ಸರ್ಕಾರಿ ಉದ್ಯೋಗ ಎಂದು ನೀಡಿರುವ ಹೇಳಿಕೆ ಕಾಸರಗೋಡಿನಲ್ಲಿರುವ ಕನ್ನಡಿಗರಿಗೆ ಭಾಷಾ ಅಲ್ಪಸಂಖ್ಯಾತರಡಿ ದೊರೆಯುತ್ತಿರುವ ಸೌಲಭ್ಯಗಳಿಗೆ ಧಕ್ಕೆಯನ್ನುಂಟು ಮಾಡುವಂತ್ತಿದೆ. ಒಂದು ವೇಳೆ ಕೇರಳದ ಮುಖ್ಯಮಂತ್ರಿಗಳ ಹೇಳಿಕೆಯನ್ನು ಅನುಷ್ಠಾನಗೊಳಿಸುವ ಸಂಬಂಧ ಅಲ್ಲಿನ ಸರ್ಕಾರ ಕ್ರಮ ವಹಿಸಲು ಮುಂದಾದರೆ ಈ ನಿಯಮದಿಂದ ಕಾಸರಗೋಡಿಗೆ ವಿನಾಯಿತಿ ನೀಡಬೇಕು ಎಂದು ಟಿ.ಎಸ್.ನಾಗಾಭರಣ ಅವರು ಆಗ್ರಹಿಸಿದ್ದಾರೆ. ಇದನ್ನೂ ಓದಿ: ಉಕ್ರೇನ್ ಪವರ್ ಪ್ಲಾಂಟ್‍ನಲ್ಲಿ ರಷ್ಯಾದ ಧ್ವಜ ಹಾರಿಸಿದ ಮಿಲಿಟರಿ ಪಡೆ
Advertisement
ಅಲ್ಲದೆ ಕನ್ನಡ ಮಾಧ್ಯಮದಲ್ಲಿ ವಿದ್ಯಾಭ್ಯಾಸ ಪಡೆದುಕೊಂಡು ಸರ್ಕಾರಿ ಉದ್ಯೋಗ ಬಯಸುವ ಅಭ್ಯರ್ಥಿಗಳಿಗೂ ತೊಂದರೆಯಾಗಲಿದೆ. ಇದುವರೆಗೂ ಕನ್ನಡಿಗರು ಹೆಚ್ಚಿನ ಸಂಖ್ಯೆಯಲ್ಲಿರುವ ಭಾಷಾ ಅಲ್ಪಸಂಖ್ಯಾತ ಪ್ರದೇಶವಾದ ಕಾಸರಗೋಡಿನಲ್ಲಿ ಮಲೆಯಾಳಂ ಭಾಷೆಯಿಂದ ವಿನಾಯಿತಿ ಇದ್ದು, ಅದು ಮುಂದುವರಿಯಬೇಕಿದೆ. ಒಂದು ವೇಳೆ ಕಾಸರಗೋಡಿನ ಕನ್ನಡಗರಿಗೂ ಮಲೆಯಾಳಿ ಭಾಷೆಯನ್ನು ಉದ್ಯೋಗದ ದೃಷ್ಟಿಯಿಂದ ಕಡ್ಡಾಯ ಮಾಡಿದರೆ ಅದು ಭಾಷಾ ಅಲ್ಪಸಂಖ್ಯಾತರಿಗೆ ಸಂವಿಧಾನತ್ಮಕವಾಗಿ ನೀಡಿದ ಹಕ್ಕಿನ ಉಲ್ಲಂಘನೆಯಾಗುತ್ತದೆ. ಭಾಷಾ ಅಲ್ಪಸಂಖ್ಯಾತರಿಗೆ ಇರುವ ಸಂವಿಧಾನಾತ್ಮಕ ರಕ್ಷಣೆಗೆ ಭಂಗ ಬಂದಂತಾಗುತ್ತದೆ. ಈ ನಿಟ್ಟಿನಲ್ಲಿ ಕೇರಳದ ಮುಖ್ಯಮಂತ್ರಿಗಳು ನೀಡಿರುವ ಹೇಳಿಕೆಯ ಬಗ್ಗೆ ಹಾಗೂ ಕಾಸರಗೋಡಿನಲ್ಲಿ ಇದರ ಅನುಷ್ಠಾನದ ಸಂಬಂಧ ಅಲ್ಲಿನ ಸರ್ಕಾರ ಮತ್ತೊಮ್ಮೆ ಪುನರ್ ಪರಿಶೀಲಿಸಬೇಕೆಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರು ಒತ್ತಾಯಿಸಿದ್ದಾರೆ.