ಮಂಡ್ಯ: ಸಮ್ಮಿಶ್ರ ಸರ್ಕಾರ ರಚನೆಯಾದ ಸಮಯದಿಂದಲೂ ಮೈತ್ರಿ ಧರ್ಮಕ್ಕೆ ಧಕ್ಕೆ ಆಗದಂತೆ ಕೆಲಸ ಮಾಡುತ್ತಿದ್ದು, ಇಲ್ಲಿಯವರೆಗೂ ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಹೋಗುತ್ತಿದ್ದೇನೆ. ಆದರೆ ತಾಲೂಕಿನಲ್ಲಿ ಇದಕ್ಕೆ ವಿರುದ್ಧವಾಗಿ ಕೆಲ ಘಟನೆಗಳು ನಡೆಯುತ್ತಿದ್ದು, ಇದೇ ರೀತಿ ಮುಂದುವರಿದರೆ ಜನತಾದಳದವರೇನು ಕೈಗೆ ಬಳೆ ತೊಟ್ಟುಕೊಂಡು ಕುಳಿತಿಲ್ಲ ಎಂದು ಮಳವಳ್ಳಿ ಶಾಸಕ ಅನ್ನದಾನಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮಳವಳ್ಳಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಶಾಸಕ ಅನ್ನದಾನಿ, ಕುಮಾರಸ್ವಾಮಿ ಅವರಿಗೆ ಸಮ್ಮಿಶ್ರ ಸರ್ಕಾರವನ್ನು ಮುನ್ನಡೆಸುವ ಚಾತುರ್ಯತೆ ಇದೆ. ಅವರು ಸರ್ಕಾರವನ್ನು ಉತ್ತಮ ರೀತಿಯಲ್ಲಿ ಮುನ್ನಡೆಸುತ್ತಾರೆ. ಆದರೆ ತಾಲೂಕಿನಲ್ಲಿ ನಡೆಯುತ್ತಿರುವ ಕೆಲ ಘಟನೆಗಳ ಬಗ್ಗೆ ಅಸಮಾಧಾನ ಇದೆ. ಸಮ್ಮಿಶ್ರ ಸರ್ಕಾರ ರಚನೆಯಾದ ಸಮಯದಿಂದ ಎಲ್ಲರನ್ನು ಒಟ್ಟಿಗೆ ಕರೆದುಕೊಂಡು ಹೋಗುವ ಕಾರ್ಯ ಮಾಡುತ್ತಿದ್ದೇನೆ. ಆದರೆ ಇದೇ ರೀತಿ ಅವರ ಕಾರ್ಯ ಮುಂದುವರಿದರೆ ನಾವು ಸುಮ್ಮನೆ ಇರುವುದಿಲ್ಲ. ಜನತಾದಳದವರೇನು ಕೈಗೆ ಬಳೆ ತೊಟ್ಟುಕೊಂಡು ಕುಳಿತಿಲ್ಲ ಎಂದು ಮಾಜಿ ಶಾಸಕ, ಕಾಂಗ್ರೆಸ್ ಮುಖಂಡ ನರೇಂದ್ರಸ್ವಾಮಿ ಹೆಸರು ಪ್ರಸ್ತಾಪ ಮಾಡದೇ ಪರೋಕ್ಷವಾಗಿ ವಾಗ್ದಾಳಿ ನಡೆಸಿದರು.
Advertisement
Advertisement
ನಾನು ಸಚಿವ ಸ್ಥಾನ ಆಕಾಂಕ್ಷಿ:
ಪಕ್ಷದ ಸಂಘಟನೆಯಲ್ಲಿ ಸತತವಾಗಿ ದುಡಿಯುತ್ತಿದ್ದು, ನಾನು ಕೂಡ ಸಚಿವ ಸ್ಥಾನದ ಆಕಾಂಕ್ಷಿ ಆಗಿದ್ದೇನೆ. ನಮ್ಮ ಪಕ್ಷದಲ್ಲಿ ಆರು ಜನ ದಲಿತ ಶಾಸಕರಿದ್ದಾರೆ. ಇದರಲ್ಲಿ ನಾನು ಹಿರಿಯನಿದ್ದೇನೆ. ನನಗೆ ದಲಿತ ಕೋಟಾದಡಿ ಸಚಿವ ಸ್ಥಾನ ಸಿಗುವ ನಿರೀಕ್ಷೆಯಿದೆ. ನಮ್ಮ ನಾಯಕರು ದೇವರನ್ನು ನಂಬುತ್ತಾರೆ. ಹೀಗಾಗಿ ಧನುರ್ಮಾಸ ಕಳೆದ ನಂತರ ಸಂಪುಟ ವಿಸ್ತರಣೆ ಮಾಡುತ್ತಾರೆ. ನಾನು ದೇವೇಗೌಡರ ಕುಟುಂಬ ನಂಬಿ ಬಂದವನು. ಆದ್ದರಿಂದ ನನಗೆ ಅವರ ಮೇಲೆ ಅಪಾರ ವಿಶ್ವಾಸವಿದೆ. ಒಂದೊಮ್ಮೆ ಸಚಿವ ಸ್ಥಾನ ಸಿಗದಿದ್ದರೆ ಸಾಮಾನ್ಯ ಕಾರ್ಯಕರ್ತನಾಗಿ ಕೆಲಸ ಮಾಡುತ್ತೇನೆ. ಸಮ್ಮಿಶ್ರ ಸರ್ಕಾರ ಐದು ವರ್ಷ ಪೂರ್ಣಗೊಳಿಸುತ್ತದೆ ವಿಶ್ವಾಸ ವ್ಯಕ್ತಪಡಿಸಿದರು.
Advertisement
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv